ಶುಕ್ರವಾರ, ನವೆಂಬರ್ 22, 2019
19 °C

ರೈತರ ಪರ ಹೋರಾಟ ನಿರಂತರ: ದೇವೇಗೌಡ

Published:
Updated:

ಸಾಲಿಗ್ರಾಮ: ಕರ್ನಾಟಕದ ಜನರು ನನಗೆ ಮಾತನಾಡುವ ಶಕ್ತಿ ಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಕಿತ್ತುಕೊಳ್ಳಲು ಯಾವುದೇ ಕಾರಣದಿಂದ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.ಪಟ್ಟಣದ ಗಾಂಧಿಚೌಕದಲ್ಲಿ ನಡೆದ ಜೆಡಿಎಸ್ ಪಕ್ಷದ ಬಹಿರಂಗ ಸಭೆಯಲ್ಲಿ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.ಕೇಂದ್ರ ಸರ್ಕಾರವನ್ನು ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಹಿಡಿತದಲ್ಲಿಟ್ಟುಕೊಂಡು ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ನಾನು ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕಾವೇರಿ ಐತೀರ್ಪು ನನ್ನ ಹುಟ್ಟುಹಬ್ಬದ ಕೊಡುಗೆ ಎಂದು ಹೇಳುತ್ತಿದ್ದಾರೆ. ಇದನ್ನು ರಾಜ್ಯದ ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಬದಲಿಗೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ರಾಜ್ಯದ ಜನತೆ ಪ್ರಾದೇಶಿಕ ಪಕ್ಷಗಳಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.ದೇಶದ ಮಾಜಿ ಪ್ರಧಾನಿಗಳು ಮನೆ ಸೇರಿಕೊಂಡಿದ್ದಾರೆ. ಆದರೆ, ನಾನು ರಾಜ್ಯದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ಕೊಟ್ಟು ಗ್ರಾಮೀಣ ಜನರ ಸಮಸ್ಯೆ ಕೇಳುತ್ತಿರುವೆ. ನನ್ನ ಕೊನೆ ಉಸಿರು ಇರುವವರೆಗೆ ರೈತರ ಮತ್ತು ಗ್ರಾಮೀಣ ಜನರ ಪರ ಹೋರಾಟ ಮಾಡುತ್ತೇನೆ ಎಂದರು.ಜೆಡಿಎಸ್‌ಗೆ ಸೇರ್ಪಡೆ: ಸಾಲುಕೊಪ್ಪಲು ಗ್ರಾಮದ ಯೋಗಣ್ಣ, ತಮ್ಮಯ್ಯ, ನಾಗರಾಜ್, ಸಾಲಿಗ್ರಾಮದ ದೇವೇಂದ್ರ, ಎಸ್.ವೈ.ಪ್ರಕಾಶ್, ರಾಮೇಗೌಡ, ಅರುಣ್‌ರಾಜ್ ಅವರಿಗೆ ಮಾಜಿ ಪ್ರಧಾನಿ ಹಾರ ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.ಶಾಸಕ ಸಾ.ರಾ.ಮಹೇಶ್, ಮಾಜಿ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಚಿಕ್ಕಮಾದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ ರಾಜಣ್ಣ, ಮೆಡಿಕಲ್ ರಾಜಣ್ಣ, ಎಸ್.ಕೆ.ಮಧುಚಂದ್ರ, ಜೆಡಿಎಸ್‌ನ ರಾಜ್ಯ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಮುಷೀರ್ ಅಹಮದ್, ಎಸ್.ಎಂ.ಸೋಮಣ್ಣ, ನಟರಾಜ್, ಜವರೇಗೌಡ, ಐಯಾಜ್, ಎಂ.ಟಿ. ಕುಮಾರ್, ಡಾ.ಶಿವನಂಜಪ್ಪ, ಎ.ಟಿ.ಸೋಮಶೇಖರ್, ಕುಪ್ಪಳ್ಳಿಸೋಮು, ಕೆ.ಎಲ್.ರಮೇಶ್, ಕಾಗೋಡ್ ನರಸಿಂಹ, ಮೈಸೂರು ನಗರಸಭಾ ಸದಸ್ಯ ಪ.ಮಲ್ಲೇಶ್, ಕೆ.ವಿ.ಪ್ರಕಾಶ್, ಅರ್ಜುನಹಳ್ಳಿಗಣೇಶ್, ವೈ.ಆರ್.ಪ್ರಕಾಶ್, ಹೊಸಳ್ಳಿ ವೆಂಕಟೇಶ್ ಇದ್ದರು.

ಪ್ರತಿಕ್ರಿಯಿಸಿ (+)