ರೈತರ ಬದುಕು ಹಸನಾಗಿಸಿದ ಹಸಿಕಡ್ಲೆ!

7

ರೈತರ ಬದುಕು ಹಸನಾಗಿಸಿದ ಹಸಿಕಡ್ಲೆ!

Published:
Updated:

ಅರಸೀಕೆರೆ: ತಾಲ್ಲೂಕಿನಲ್ಲಿ ತೆಂಗು ವಾಣಿಜ್ಯ ಹಾಗೂ ಪ್ರಮುಖ ಬೆಳೆಯಾದರೂ ರೈತರು ಆರ್ಥಿಕವಾಗಿ ಸಧೃಢರಾಗಲು ಸಮ್ಮಿಶ್ರ ಬೆಳೆಯ ಪ್ರಯೋಗ ಹಿಂದಿನಿಂದಲೂ ಇದೆ. ಹಾಗೆಯೇ ಮಳೆಯ ಪ್ರಮಾಣ ಕಡಿಮೆಯಾದರೂ ಆಯಾ ಋತು ಆಧರಿತ ಬೆಳೆ ತೆಗೆದು ಲಾಭ ಮಾಡಿಕೊಳ್ಳುತ್ತಿರುವುದು ಹೊಸದೇನು ಅಲ್ಲ.ಜಿಲ್ಲೆಯಲ್ಲಿ ಅರಸೀಕೆರೆ ಮಳೆ ಆಶ್ರಯಿಸಿರುವ ಬಯಲು ಸೀಮೆ. ಪಕ್ಕದ ಬೇಲೂರು ಹಾಗೂ ಹಾಸನ ತಾಲ್ಲೂಕಿಗೆ ಮಲೆನಾಡಿಗೆ ಸೇರುತ್ತವೆ. ಆದರೆ, ಚಳಿಗಾಲದಲ್ಲೂ ಮಲೆನಾಡಿನಲ್ಲಿ ಇದ್ದಷ್ಟೇ ಚಳಿ ಇಲ್ಲಿಯೂ ಆಗುತ್ತದೆ.

ಮಾಗಿ ಚಳಿಯಲ್ಲಿ ಮಾತ್ರ ಬೆಳೆಯುವ ಕೆಲ ಬೆಳೆಗಳೂ ಇವೆ. ಅದರಲ್ಲಿ ಹಸಿ ಕಡ್ಲೆಗಿಡ, ಅವರೆಕಾಯಿ ಸೇರಿವೆ.ಅರಸೀಕೆರೆ ತಾಲ್ಲೂಕಿನ ಕಪ್ಪು ಮಣ್ಣಿನ ಭೂಮಿಯಲ್ಲಿ ಬೆಳೆದ ಕಡ್ಲೆಗಿಡ ಮತ್ತು ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಬೆಳೆಯುವ ಅವರೆಕಾಯಿಗೆ ಇಡೀ ರಾಜ್ಯದಲ್ಲಿಯೇ ಬೇಡಿಕೆ ಇದೆ. ಹಾಗೆಯೇ ಉತ್ತಮ ಬೆಲೆ ಕೂಡಾ ದೊರಕುತ್ತದೆ. ಇಲ್ಲಿನ ಭೂಮಿಯ ಗುಣವೋ ಹವಾಮಾನದ ಫಲವೋ ಏನೋ ಗೊತ್ತಿಲ್ಲ, ಇಲ್ಲಿನ ಹಸಿ ಕಡ್ಲೆಗಿಡ ಹಾಗೂ ಅವರೆಕಾಯಿ ಸಾಕಷ್ಟು ದಪ್ಪವಿರುತ್ತದೆ, ಸೊಗಡೂ ಸಹ ಸಮೃದ್ಧವಾಗಿರುತ್ತದೆ.ತಾಲ್ಲೂಕಿನಲ್ಲಿ 300 ಹೆಕ್ಟೇರ್‌ನಲ್ಲಿ ಕಡ್ಲೆ ಬೆಳೆಯಲಾಗುತ್ತದೆ ಕಣಕಟ್ಟೆ, ಕಸಬಾ, ಜಾವಗಲ್ ಹಾಗೂ ಬಾಣಾವರ ಹೋಬಳಿಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಸ್ವಲ್ಪ ಕುಂಠಿತವಾಗಿದೆ.

ಕಣಕಟ್ಟೆ, ಮಾಡಾಳು, ಕಡಲಮಗೆ, ಮದ್ದರಹಳ್ಳಿ, ಕಸಬಾ ಹೋಬಳಿಯ ಹಾರನಹಳ್ಳಿ ಬೋರನಕೊಪ್ಪಲು ಗ್ರಾಮಗಳ ಸುತ್ತಾ-ಮುತ್ತಾ 75 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಒಂದು ಎಕರೆಗೆ 25ರಿಂದ30 ಕ್ವಿಂಟಾಲ್ ಕಡ್ಲೆಗಿಡ ದೊರಕುತ್ತಿದ್ದು, ಇಡೀ ಒಂದು ಎಕರೆಯನ್ನು15ರಿಂದ20 ಸಾವಿರ ರೂಪಾಯಿವರೆವಿಗೂ ಗುತ್ತಿ ಗೆ ಪಡೆಯುತ್ತಾರೆ.ಎರಡೂವರೆ ತಿಂಗಳಿಗೆ ಬರುವ ಈ ಬೆಳೆ ತಂಪಿನ ವಾತಾವರಣ ಮತ್ತು ಅಲ್ಪ-ಸ್ವಲ್ಪ ಮಳೆ ಬಿದ್ದರೂ ಬೆಳೆಯಬಹುದು. ಇವೆರಡು ಬೆಳೆಗಳು ಈಗಾಗಲೇ ,ಮಾರುಕಟ್ಟೆಗೆ ದಾಳಿ ಇಟ್ಟಿವೆ. ಅವರೆಕಾಯಿ ಒಂದು ಕೆಜಿಗೆ 20 ರೂಪಾಯಿನಂತೆ ಕಡ್ಲೆಗಿಡ 10ರೂ ಮೂರು ಕಟ್ಟಿನಂತೆ ಮಾರಾಟವಾಗುತ್ತಿದೆ.ಪಟ್ಟಣದ ಯಾವುದೇ ಬಸ್ ಹಾಗೂ ಮೆಟಡೋರ್ ವಾಹನಗಳ ಪ್ರಯಾ ಣಿಕರ ಕೈಯಲ್ಲಿ ನೋಡಿದರೂ ಹಸಿ ಕಡ್ಲೆಗಿಡ ಕಾಣಬಹುದು. ಚಳಿಯಲ್ಲಿ ಆರ್ಥಿಕವಾಗಿ ಮುದುಡುವ ರೈತರಿಗೆ ಕಡ್ಲೆಗಿಡ ಒಂದಿಷ್ಟು ನೆಮ್ಮದಿ ತಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry