ರೈತರ ಬೆಳೆ ಉಳಿಸಿ, ನಷ್ಟ ತಪ್ಪಿಸಿ

7
ಅಧಿಕಾರಿಗಳಿಗೆ ಎಚ್.ಡಿ.ದೇವೇಗೌಡ ತಾಕೀತು

ರೈತರ ಬೆಳೆ ಉಳಿಸಿ, ನಷ್ಟ ತಪ್ಪಿಸಿ

Published:
Updated:

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂಬ ಕಾರಣ ನೀಡಿ ನಾಲೆಗಳಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬಾರದು. ಸಂಗ್ರಹ ಇರುವ ನೀರನ್ನು ವ್ಯವಸ್ಥಿತವಾಗಿ ಹರಿಸಿ ರೈತರು ಬೆಳೆ ನಷ್ಟ ಅನುಭವಿಸದಂತೆ ನೋಡಿಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರಿಗೆ ತಾಕೀತು ಮಾಡಿದರು.ಜಿಲ್ಲೆಯ ಶಾಸಕರ ಜೊತೆ ಕೆಆರ್‌ಎಸ್ ಅಣೆಕಟ್ಟೆಗೆ ಭಾನುವಾರ ಭೇಟಿ ನೀಡಿದ್ದ ಅವರು ಜಲಾಶಯದ ನೀರಿನ ಲಭ್ಯತೆ ಹಾಗೂ ಅದರ ಬಳಕೆ ಕುರಿತು ಅಧಿಕಾರಿಗಳ ಜೊತೆ  ಚರ್ಚಿಸಿದರು.ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆಗೆ ನೀರಿನ ಕೊರತೆ ಉಂಟಾಗುವ ಸಂಭವ ಇದೆ. ಹಾಗಾಗಿ ಇರುವ ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡಬೇಕು. ನೀರು ವ್ಯಯ ಮಾಡದಂತೆ ರೈತರಿಗೆ ತಿಳಿವಳಿಕೆ ನೀಡಬೇಕು. ಎಲ್ಲಿ ವರೆಗೆ ನೀರು ಕೊಡಲು ಸಾಧ್ಯವೋ ಅಲ್ಲಿಯವರೆಗೆ ನಾಲೆಗಳ ಮೂಲಕ ನೀರು ಹರಿಸಿ ರೈತರ ಬೆಳೆ ಉಳಿಸಬೇಕೆಂದು ಸೂಚಿಸಿದರು.`ಜಲಾಶಯದಲ್ಲಿ ಸದ್ಯ 86.60 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 119.13 (37 ಟಿಎಂಸಿ)ಅಡಿಗಳಷ್ಟು ನೀರಿತ್ತು. ಗರಿಷ್ಠ 49 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ 14.11 ಟಿಎಂಸಿ ನೀರಿದ್ದು, 9.61 ಟಿಎಂಸಿ ನೀರನ್ನು ಮಾತ್ರ ಕೃಷಿ ಹಾಗೂ ಕುಡಿಯುವ ನೀರಿಗೆ ಬಳಸಬಹುದು. 5.63 ಟಿಎಂಸಿ ಅಡಿಗಳಷ್ಟು ನೀರನ್ನು ಡೆಡ್ ಸ್ಟೋರೇಜ್ ಆಗಿ ಉಳಿಸಿಕೊಳ್ಳಬೇಕು ಎಂದು ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಮಾಹಿತಿ ನೀಡಿದರು.5 ತಾಸು ತಡ: ಬೆಳಗ್ಗೆ 11.30ಕ್ಕೆ ಕೆಆರ್‌ಎಸ್‌ಗೆ ಬರಬೇಕಿದ್ದ ಎಚ್.ಡಿ.ದೇವೇಗೌಡ ಅವರು 5 ತಾಸು ತಡವಾಗಿ ಆಗಮಿಸಿದರು.

ಕಬಿನಿ, ಹಾರಂಗಿ ಜಲಾಶಯಗಳನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿ ಇಲ್ಲಿಗೆ ಬಂದಿಳಿದರು. ಹೆಲಿಪ್ಯಾಡ್‌ನಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಅಧಿಕಾರಿಗಳು ಕಾದು ಕುಳಿತಿದ್ದರು. ಹೆಲಿಪ್ಯಾಡ್‌ನಿಂದ ಅಣೆಕಟ್ಟೆ ವರೆಗೆ ಕಾರಿನಲ್ಲಿ ತೆರಳಿದರು.ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಎಂ.ಶ್ರೀನಿವಾಸ್, ಕಲ್ಪನಾ ಸಿದ್ದರಾಜು, ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಶಾಸಕರಾದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಬಿ.ಪ್ರಕಾಶ್, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್, ಯುವ ಜೆಡಿಎಸ್ ರಾಜ್ಯ ಘಟಕ ಉಪಾಧ್ಯಕ್ಷ ಅಶೋಕ್ ಜಯರಾಂ, ಕೆ.ಸಿ.ನಾರಾಯಣಗೌಡ, ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಾಲಿಂಗೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry