ರೈತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

7

ರೈತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

Published:
Updated:

ಹರಿಹರ: ಹಾವೇರಿಯಲ್ಲಿ ಇತ್ತೀಚೆಗೆ ಕನಕ ಬಿಟಿ ಹತ್ತಿ ಬೀಜ ಪಡೆಯಲು ಆಗಮಿಸಿದ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕೃಷಿ ಸಚಿವ ಉಮೇಶ ಕತ್ತಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ರೈತರಿಗೆ ಸಾಕಾಗುವಷ್ಟು ಹತ್ತಿ ಬೀಜ ವಿತರಣೆ ವ್ಯವಸ್ಥೆ ಮಾಡಿದ್ದರೆ ಇಂಥ ದುರ್ಘಟನೆ ನಡೆಯುತ್ತಿರಲಿಲ್ಲ. ಕನಕ ಬಿಟಿ ಹತ್ತಿ ಬೀಜದ ಅಸಮರ್ಪಕ ಪೂರೈಕೆಯಾದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಹಾಗೂ ಗಲಾಟೆಗಳಾಗಿವೆ. ಇದಕ್ಕೆ ಕೃಷಿ ಸಚಿವರೇ ನೇರ ಹೊಣೆ ಹೊತ್ತು ರೈತರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಮಲ್ಲಾಪುರ ದೇವರಾಜ್ ಮಾತನಾಡಿ, ಕನಕ, ಬಿಟಿ ಹತ್ತಿ ಬೀಜದ ಮೊಗ್ಗಾವಿಕೆ ಹಾಗೂ  ಇಳುವರಿ ಇತರೆ ಹತ್ತಿ ಬೀಜಗಳಿಗಿಂತ ಹೆಚ್ಚಾಗಿದೆ. ಅದಕ್ಕಾಗಿ ರೈತರು ಕನಕ ಹತ್ತಿ ಬೀಜವನ್ನು ಅಪೇಕ್ಷಿಸುತ್ತಾರೆ. ರೈತರಿಗೆ ಯಾವ ಬೀಜಗಳ ಅವಶ್ಯಕತೆ ಇದೆ ಎಂಬುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕಾದುದು ಅವರ ಕರ್ತವ್ಯ.ಹಾವೇರಿ ಜಿಲ್ಲೆಯಲ್ಲಿ ಎಷ್ಟು ಎಕರೆ ಜಮೀನಿನಲ್ಲಿ  ಹತ್ತಿ ಬಿತ್ತನೆ ಮಾಡುತ್ತಾರೆ ಎಂಬುದರ ಪೂರ್ವ ಮಾಹಿತಿ ಇಲ್ಲದೇ ಅಧಿಕಾರಿಗಳು, ಅವಶ್ಯಕತೆಗಿಂತ ಕಡಿಮೆ ಹತ್ತಿ ಬೀಜದ ದಾಸ್ತಾನು ಹೊಂದಿರುವುದೇ ಎಲ್ಲಾ ಗೊಂದಲಗಳಿಗೂ ಕಾರಣವಾಗಿದೆ. ಅಧಿಕಾರಿಗಳ ತಪ್ಪಿಗಾಗಿ ರೈತರು ಪೊಲೀಸರಿಂದ ಲಾಠಿ ಹೊಡೆತ ತಿನ್ನಬೇಕಾದ ಪರಿಸ್ಥಿತಿ ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಬೆಣ್ಣೆ ವಿಜಯಕುಮಾರ್, ಮೆಣಸಿನಾಳ್ ರುದ್ರಗೌಡ, ದೊಗ್ಗಳ್ಳಿ ಶೇಜಪ್ಪ, ಬಾವಿಮನಿ ಪುಟ್ಟವೀರಪ್ಪ, ಕೆ.ಎನ್.ಹಳ್ಳಿ ಮಂಜುನಾಥ, ಜಿಗಳಿ ಸುರೇಶ, ಬನ್ನಿಕೋಡು ಹನುಮಂತಪ್ಪ, ಶಿವನಳ್ಳಿ ಹನುಮಂತಪ್ಪ, ಕಮಲಾಪುರ ಶೇಖರಪ್ಪ, ಸುನಂದಮ್ಮ, ಕೆ.ಎನ್.ಹಳ್ಳಿ ನಾಗರತ್ನಮ್ಮ, ನಿಂಗಮ್ಮ, ರೇಣುಕಮ್ಮ, ಕೊಕ್ಕನೂರು ಜಯಮ್ಮ, ಸಾಕಮ್ಮ ಮತ್ತಿತರರು ಭಾಗವಹಿಸಿದ್ದರು.ಹರಪನಹಳ್ಳಿ ವರದಿ

ಹಾವೇರಿ ಪೊಲೀಸರು ರೈತರ ಮೇಲೆ ನಡೆಸಿರುವ ಹಲ್ಲೆ ಹಾಗೂ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸರ್ಕಾರದ ಪ್ರತಿಕೃತಿ ದಹಿಸಿ, ದಿಢೀರ್ ಪ್ರತಿಭಟನೆ ನಡೆಸಿದರು.ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಬಸ್‌ನಿಲ್ದಾಣದ ಸಮೀಪದ ಇಜಾರಿ ಸಿರಸಪ್ಪ ವೃತ್ತದಲ್ಲಿ ಜಮಾಯಿಸಿದರು. ಸರ್ಕಾರ ಹಾಗೂ ಪೊಲೀಸರ ಕೃತ್ಯಕ್ಕೆ ತೀವ್ರ ಖಂಡಿಸಿ ಸರ್ಕಾರದ ಪ್ರತಿಕೃತಿ ದಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಮುಖಂಡ ಫಣಿಯಾಪುರ ಲಿಂಗರಾಜ್ ಮಾತನಾಡಿ, ಕಳೆದ ವರ್ಷ ಸಕಾಲದಲ್ಲಿ ಮಳೆ ಸುರಿಯದ ಪರಿಣಾಮ ರೈತ ಸಮುದಾಯ ಸಂಕಷ್ಟದ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದೆ.ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಕಾರಣ ಸಂಕಷ್ಟದ ದವಡೆಯಿಂದ ಹೊರಬರುವ ಹಿನ್ನೆಲೆಯಲ್ಲಿ ಹತ್ತಿ ಬೀಜ ಖರೀದಿಸಲು ಹೋಗಿದ್ದ ರೈತರ ಮೇಲೆ ಎರಗಿದ ಪೊಲೀಸರು ಗೂಂಡಾಗಳಂತೆ ವರ್ತಿಸಿದ್ದಾರೆ. ಅಮಾಯಕ ರೈತರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಪೊಲೀಸರ ಇಂತಹ ರಾಕ್ಷಸೀ ಕೃತ್ಯದ ಹಿಂದೆ ಸರ್ಕಾರದ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.ಮುಖಂಡ ಎಚ್.ಟಿ. ಗಿರೀಶಪ್ಪ ಮಾತನಾಡಿ, ರೈತರ ಬೇಕಾದ ಬೀಜಗಳನ್ನು ಸರಬರಾಜು ಮಾಡುವುದು ಸರ್ಕಾರದ ಕರ್ತವ್ಯ, ಅದನ್ನು ಪೂರೈಸುವುದನ್ನು ಬಿಟ್ಟು, ಇಂತಹದೆ ಬೀಜ ಬಿತ್ತನೆ ಮಾಡಬೇಕು ಎಂದು ಕೃಷಿ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಅವರ ಬಿಟ್ಟಿ ಸಲಹೆ ಬೇಕಾಗಿಲ್ಲ. ಅವಶ್ಯಕತೆ ಇರುವ ಬೀಜ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.ಗಲಭೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರೈತರಿಗೆ  ಸೂಕ್ತ ಪರಿಹಾರ ನೀಡಬೇಕು. ಪದೇಪದೇ ಹಾವೇರಿಯಲ್ಲಿಯೇ ಇಂತಹ ಘಟನೆಗೆ ಪ್ರಚೋದಿಸುತ್ತಿರುವ ಪೊಲೀಸರನ್ನು ಅಮಾನತುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಮುಖಂಡರಾದ ಕರಡಿದುರ್ಗ ಚೌಡಪ್ಪ, ಬ್ಯಾಡರಗೇರಿ ಹನುಮಂತಪ್ಪ, ದುರುಗಪ್ಪ, ಉಚ್ಚಂಗೆಪ್ಪ, ಯಲ್ಲಪ್ಪ, ರೊಕ್ಕಪ್ಪ, ಮೈಲಪ್ಪ,  ಬಾಷಾ ಸಾಹೇಬ್, ರಂಗಾಪುರ ರಾಜಪ್ಪ, ಹಳ್ಳಿಕೇರಿ ಉಮೇಶ್, ಪಾನ್‌ಷಾಪ್ ಶ್ರೀನಿವಾಸ್, ಅರಸಾಪುರ ಕಾಳಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry