ಬುಧವಾರ, ಮೇ 12, 2021
17 °C

`ರೈತರ ವೇತನ ಆಯೋಗ ರಚನೆ ಅವಶ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರೈತರು  ಸಂಘಟಿತರಾಗುತ್ತಿಲ್ಲ. ರೈತರಲ್ಲಿನ ರಾಜಕೀಯ ದುರ್ಬಲತೆ ದೂರವಾಗಬೇಕು. ರಾಜಕೀಯ ವ್ಯವಸ್ಥೆ ಎಚ್ಚರಿಸುವ ಕೆಲಸ ರೈತರಿಂದಾಗಬೇಕಾಗಿದೆ. ಸರ್ಕಾರಿ ನೌಕರರಿಗೆ ವೇತನ ಆಯೋಗ ರಚನೆಗೊಂಡಂತೆ ರೈತರ ವೇತನ ಆಯೋಗ ರಚನೆ ಮಾಡಬೇಕು. ಸ್ವಾತಂತ್ರ್ಯ ಬಂದು 65 ವರ್ಷವಾದರೂ ಈ ದೇಶದಲ್ಲಿ ಕೃಷಿ ನೀತಿ ರಚನೆ ಆಗದೇ ಇರುವುದು ದೌರ್ಭಾಗ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ  ಮುಖಂಡ ಹಾಗೂ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಹೇಳಿದರು.ಗುರುವಾರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನವು ಚೆನ್ನಬಸವಪ್ಪ ಬೆಟ್ಟದೂರು ಅವರ 5ನೇ ಪುಣ್ಯ ಸ್ಮರಣೆ ಅಂಗವಾಗಿ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿ 280 ದಶಲಕ್ಷಟನ್ ಆಹಾರ ಉತ್ಪಾದನೆ ಮಾಡಿ 120 ಕೋಟಿ ಜನರ ಬದುಕಿಗೆ ನೆರವಾದ ರೈತರು, 7 ಲಕ್ಷ ಹಳ್ಳಿ ಜನರ ಬದುಕು ಸುಧಾರಣೆಗೆ ಇಂದಿಗೂ ಗಂಭೀರ ಚಿಂತನೆ ಆಗದೇ ಇರುವುದು ವಿಷಾದನೀಯ.  ಗಾಂಧಿ ಸ್ವರಾಜ್ ಕಲ್ಪನೆ ಇಂದಿಗೂ ಸಾಕಾರಗೊಂಡಿಲ್ಲ.ರೈತರು, ಹಳ್ಳಿ ಜನ ಗುಳೇ ಹೋಗುವುದೇ ಈ ದೇಶಕ್ಕೆ ದೊಡ್ಡ ಅವಮಾನ. ಹಳ್ಳಿಗಳಲ್ಲಿಯೇ ಉಳಿದು ಆರ್ಥಿಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಪೂರಕ ಪ್ರೋತ್ಸಾಹ ಕಾರ್ಯವನ್ನು ಸರ್ಕಾರ ಕಟ್ಟುನಿಟ್ಟಾಗಿ ಮಾಡಬೇಕು ಎಂದರು.ಪಂಚಾಯಿತಿ ಸರ್ಕಾರವಾಗಲಿ: ವಿಕೇಂದ್ರೀಕರಣ ವ್ಯವಸ್ಥೆ ಮೂಲಕ  ಗ್ರಾಮ ಪಂಚಾಯಿತಿಯೇ ಒಂದು ಸರ್ಕಾರವಾಗಬೇಕು. ವರ್ಷಕ್ಕೆ ಒಂದುವರೆ ಕೋಟಿಯಂತೆ 5 ವರ್ಷಕ್ಕೆ 7 ಕೋಟಿ ಕೊಡಬೇಕು. ಅಭಿವೃದ್ಧಿ, ಉದ್ಯೋಗ ಕಲ್ಪಿಸುವುದು ಆಗಬೇಕು ಎಂದರು.ರೈತರಿಗೂ ವೇತನ ಆಯೋಗ ಮಾಡಬೇಕು.  ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಡಬೇಕು. ಒಂದು ಟನ್ ಕೂದಲಿಗೆ ಎಂಟುವರೆ ಸಾವಿರ ಬೆಲೆ ಇದೆ. ರೈತ ಬೆಳೆದ ಒಂದು ಟನ್ ಕಬ್ಬಿಗೆ ಎರಡುವರೆ ಸಾವಿರ ಟನ್ ಬೆಲೆ ಇದೆ! ಕಬ್ಬು ಬಿಟ್ಟು ರೈತರು ಕೂದಲು ಬೆಳೆಯಲು ಆದೀತೇ. ರೈತರನ್ನು ಸರ್ಕಾರಗಳು ನಡೆಸಿಕೊಳ್ಳುವ ರೀತಿಯೇ ಇದು ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗೆ ಮನವಿ: ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ರೈತರ ಆತ್ಮಹತ್ಯೆ ಆಗಬಾರದು. ಅದಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರದ ಜಿಲ್ಲಾಧಿಕಾರಿ ಕಚೇರಿ ಮುಂದೆ `ರೈತರೇ ನಿಮ್ಮ ರಕ್ಷಣೆ ಸರ್ಕಾರ ಇದೆ'. ಏನೇ ಕಷ್ಟ ಬಂದ್ರೂ ನಿಮ್ಮ ನೆರವಿಗೆ ಸರ್ಕಾರವಿದೆ. ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದು ಬೋರ್ಡ್ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾವು ಮನವಿ ಮಾಡಿರುವುದಾಗಿ ಹೇಳಿದರು.ರೈತ ಸತ್ತರೆ ಕನಿಷ್ಠ 2 ಲಕ್ಷ ಪರಿಹಾರ ಕೊಡಬೇಕು. ರೈತರ ಆರೋಗ್ಯ ರಕ್ಷಣೆಗೆ  ಹೆಲ್ತ್ ಕಾರ್ಡ್ ಕೊಡಬೇಕು ಎಂದು ಮನವಿ ಮಾಡಿರುವುದಾಗಿ ಪುಟ್ಟಣ್ಣಯ್ಯ ಹೇಳಿದರು.ಶಾಸಕನಾಗಿ ನಾನು ಗೆದ್ದಿಲ್ಲ. ರೈತ ಚಳವಳಿ ಗೆದ್ದಿದೆ. ರೈತರ ಆಸೆ ಗೆದ್ದಿದೆ. ನಾವು ಗೆದ್ದಿದ್ದೇವೆ ಎಂದು ರೈತ ಸಂಘಟನೆಕಾರರಿಗೆ ಹೇಳಿದರು.

ಒಳಗೆ ಸತ್ತು ಹೊರಗೆ ಪುಸ್ತಕ ಲೇಖಕಿ ಡಾ. ಮಲ್ಲಿಕಾ ಘಂಟಿ, ಬಯಲು ಗಾಳಿಯ ಪರಿಮಳ ಪುಸ್ತಕ ಲೇಖಕ ಅಬ್ಬಾಲ ಅಲಿ ಮೇಲಿನಮನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು.ರೈತ ಸಂಘದ ರಾಜ್ಯ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ಶಾಸಕ ಡಾ.ಶಿವರಾಜ ಪಾಟೀಲ್, ರೈತ ಸಂಘದ ಮುಖಂಡರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ಮೌನೇಶ್ವರಸ್ವಾಮಿ, ಬಡಗಲ್‌ಪುರ ನಾಗೇಂದ್ರ, ರಾಜಶೇಖರ ಪಾಟೀಲ್, ವಿಶ್ವನಾಥ ಪಾಟೀಲ್ ಅತಿಥಿಗಳಾಗಿ ಆಗಮಿಸಿದ್ದರು. ಕೊಪ್ಪಳದ ಹಿರಿಯ ಬರಹಗಾರ ಎಚ್.ಎಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.