ರೈತರ ಸಂಕಷ್ಟ ತಜ್ಞರಿಗೆ ಮನವರಿಕೆ

7

ರೈತರ ಸಂಕಷ್ಟ ತಜ್ಞರಿಗೆ ಮನವರಿಕೆ

Published:
Updated:

ಬೆಂಗಳೂರು: `ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಸ ನಡೆಸಿದ್ದೇವೆ. ಹೇಮಾವತಿ ಜಲಾಶಯಕ್ಕೆ ಭಾನುವಾರ ಭೇಟಿ ನೀಡುತ್ತೇವೆ. ಬೆಳೆಗೆ ನೀರಿಲ್ಲ ಎಂದು ಜಲಾನಯನ ಪ್ರದೇಶದ ರೈತರು ಹೇಳಿದ್ದಾರೆ.ಜಲಾಶಯಗಳಲ್ಲಿ ನೀರು ಇಲ್ಲದಿರುವುದು ನಮ್ಮ ಗಮನಕ್ಕೂ ಬಂದಿದೆ. ಮೂರರಿಂದ ನಾಲ್ಕು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು~ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಮುಖ್ಯ ಎಂಜಿನಿಯರ್ ಟಿ.ಎಸ್. ಜೇಕಬ್  ಹೇಳಿದರು.ಕುಮಾರ ಕೃಪಾ ಅತಿಥಿಗೃಹದಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಜತೆ ಮಾತುಕತೆಗೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದರು.ರಾಜ್ಯದಲ್ಲಿ ಮಳೆಯ ಅಭಾವ ಇರುವ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರು ಪೂರೈಕೆಗೂ ಸಮಸ್ಯೆ ಇದೆ. ಕಾವೇರಿ ಜಲಾನಯನ ಪ್ರದೇಶದ ಸ್ಥಿತಿ ಕುರಿತು ಅಧ್ಯಯನ ನಡೆಸಲು ಬಂದಿರುವ ಕೇಂದ್ರದ ತಜ್ಞರ ಸಮಿತಿಗೆ ಈ ಅಂಶಗಳನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.`ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದ ಜನ ಅನುಭವಿಸುತ್ತಿರುವ ಕಷ್ಟ ಸಮಿತಿಯ ಗಮನಕ್ಕೆ ಬಂದಿದೆ. ರೈತರ ಸಮಸ್ಯೆಗೆ ಪರಿಹಾರ ಹುಡುಕಲು ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ~ ಎಂದರು.ಕಾವೇರಿ ನದಿ ಪ್ರಾಧಿಕಾರದ (ಸಿಆರ್‌ಎ) ಆದೇಶ ಪುನರ್ ಪರಿಶೀಲಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಬರಲಿದೆ. ಸೆಪ್ಟೆಂಬರ್ 20ರಿಂದ ಈ ತಿಂಗಳ 15ರವರೆಗೆ ತಮಿಳುನಾಡಿಗೆ ಪ್ರತಿನಿತ್ಯ ಒಂಬತ್ತು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಸಿಆರ್‌ಎ ಆದೇಶ ನೀಡುವುದಕ್ಕಿಂತ ಮೊದಲೇ ಈ ಸಮಿತಿ ರಾಜ್ಯಕ್ಕೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದರೆ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.ಸಮಿತಿಯ ಸದಸ್ಯರು ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲೇ ಇರುತ್ತಾರೆ. ಅವರು ಕೋರಿರುವ ಎಲ್ಲ ಮಾಹಿತಿಯನ್ನು ಈ ಎರಡು ದಿನಗಳಲ್ಲಿ ನೀಡಲಾಗುವುದು. ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣ ಎಷ್ಟು, ಎಷ್ಟು ಪ್ರಮಾಣದ ನೀರು ಲಭ್ಯವಿದೆ ಎಂಬ ಬಗ್ಗೆ ಸಮಿತಿ ಅಧ್ಯಯನ ನಡೆಸಿದೆ. ಕೃಷ್ಣರಾಜ ಸಾಗರ (ಕೆಆರ್‌ಎಸ್), ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವ ಕುರಿತು ರಾಜ್ಯದ ಅಧಿಕಾರಿಗಳೂ ವಿವರ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.ಇದೇ 11ರಂದು ಕಾವೇರಿ ಉಸ್ತುವಾರಿ ಸಮಿತಿಯ ಸಭೆ ಇದೆ. ಆ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಸಿಆರ್‌ಎ ನಿರ್ಧಾರ ಕೈಗೊಳ್ಳುತ್ತದೆ. ಸಿಆರ್‌ಎ ಆದೇಶದ ಅನುಸಾರ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರಾಜ್ಯದಲ್ಲಿ ನೀರಿನ ಅಭಾವ ಎದುರಾಗಿದೆ ಎಂಬ ವಿಷಯವನ್ನು ಸಮಿತಿಗೆ ವಿವರಿಸಲಾಗಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry