ಬುಧವಾರ, ಜೂನ್ 16, 2021
28 °C
ಶಿವಮೊಗ್ಗ ಕೃಷಿ ವಿ.ವಿ. ಕುಲಪತಿ ಡಾ. ವಾಸುದೇವಪ್ಪ ಅಧಿಕಾರ ಸ್ವೀಕಾರ

ರೈತರ ಸಬಲೀಕರಣಕ್ಕೆ ಒತ್ತು ನೀಡಲು ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ಡಾ.ಸಿ.ವಾಸುದೇವಪ್ಪ ಸೋಮವಾರ ಅಧಿಕಾರ ಸ್ವೀಕರಿಸಿದರು.ಅಧಿಕಾರ ವಹಿಸಿಕೊಂಡ ಅವರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು, ಸಮಾಜದ ವಿವಿಧ ಗಣ್ಯರು ಕಚೇರಿಯಲ್ಲಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ. ವಾಸುದೇವಪ್ಪ ತಮ್ಮ ಮುಂದಿನ ಕನಸು–ಕಾಣ್ಕೆಗಳನ್ನು ಬಿಚ್ಚಿಟ್ಟರು.ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ವಿಶ್ವವಿದ್ಯಾಲಯವನ್ನು ರಚನಾತ್ಮಕವಾಗಿ ಕಟ್ಟಲು ಸಮಾಜದ ವಿವಿಧ ಕಡೆಗಳಿಂದ ಸಲಹೆ–ಸಹಕಾರಗಳನ್ನು ಪಡೆದುಕೊಳ್ಳಲು ತಾವು ಮುಕ್ತವಾಗಿರುವುದಾಗಿ ಘೋಷಿಸಿದರು.ವಿಶ್ವವಿದ್ಯಾಲಯದ ಸಂಶೋಧನೆಗಳು ರೈತರನ್ನು ತಲುಪಬೇಕು ಎಂಬುದು ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಶಿಕ್ಷಣ, ವಿಸ್ತರಣೆ ಹಾಗೂ ಸಂಶೋಧನಾ ಅಂಗಗಳನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಹೇಳಿದರು.ಕೃಷಿ ಮತ್ತು ತೋಟಗಾರಿಕಾ ಎರಡನ್ನೂ ಸೇರಿಸಿ ಈ ಹಿಂದೆ ಯಡಿಯೂರಪ್ಪ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ವಿಶ್ವವಿದ್ಯಾಲಯವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಭೈರೇಗೌಡ ವಿ.ವಿ.ಉನ್ನತಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆಗೆ ಅಗತ್ಯವಾಗಿರುವ ಜಾಗ ಗುರುತಿಸಲು ಸಮಿತಿ ರಚಿಸಿ, ಒಂದು ತಿಂಗಳ ಒಳಗೆ ಅಂತಿಮಗೊಳಿಸಲಾಗುವುದು. ಈ ಸಂಬಂಧ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಸಲಹೆ ಪಡೆದುಕೊಳ್ಳಲಾಗುವುದು ಎಂದರು.ಈ ವಿಶ್ವವಿದ್ಯಾಲಯವನ್ನು ಸಮಗ್ರಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಮಂಗಳೂರಿನ ಮೀನುಗಾರಿಕೆ ಕಾಲೇಜನ್ನು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ ಎಂದರು.ಹಾಗೆಯೇ, ಈ ನೂತನ ವಿಶ್ವವಿದ್ಯಾಲಯಕ್ಕೆ ಒಳಪಡಬೇಕಾದ ಕಾಲೇಜು, ಸಹ ಸಂಶೋಧನಾ ಕೇಂದ್ರಗಳನ್ನು ಅತಿ ಶೀಘ್ರದಲ್ಲೇ ಸೇರ್ಪಡೆ ಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ರೈತರಿಗೆ ಕೃಷಿ ಉತ್ತೇಜನಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ. ಅತಿಯಾದ ರಸಗೊಬ್ಬರ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಆದ್ದರಿಂದ ಭೂಸಾರ ಸಂರಕ್ಷಿಸಲು ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಲಾಗುವುದಲ್ಲದೆ ರೈತರ ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸಿ, ಸಕಾಲದಲ್ಲಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶವಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಈ ವಿ.ವಿ.ಯ ವ್ಯಾಪ್ತಿಯಲ್ಲಿ ಒಣಬೇಸಾಯ, ನೀರಾವರಿ, ಗುಡ್ಡಗಾಡು, ನೆಡುತೋಪು, ಕರಾವಳಿ ಸೇರಿದಂತೆ ವಿವಿಧ ಪ್ರದೇಶಗಳು ಬರುತ್ತಿದ್ದು, ಈ ಭಾಗದ ಹವಾಮಾನ, ಭೂಪ್ರದೇಶಗಳಿಗೆ ಅನ್ವಯವಾಗುವಂತೆ ಅಗತ್ಯ ತಾಂತ್ರಿಕತೆ ಅಭಿವೃದ್ಧಿ ಹಾಗೂ ಸಮಗ್ರ ಕೃಷಿ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.ಹಾಗೆಯೇ, ಕಡಿಮೆ ನೀರಿನಲ್ಲಿ ಉತ್ತಮ ಭತ್ತದ ಬೆಳೆಯಲು ಉತ್ತೇಜಿಸಲಾಗುವುದು. ಜೊತೆಗೆ ತರಕಾರಿ ಮತ್ತು ಹಣ್ಣುಗಳ ಬೆಳೆಗೆ ವಿಶೇಷ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ವಿ.ವಿ.ಯ ಸಂಶೋಧನಾ ನಿರ್ದೇಶಕ ಡಾ.ಪಿ.ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕ ಡಾ.ಎ.ಎಸ್‌.ಕುಮಾರಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ.ಗಣೇಶ್‌ಬಾಬು, ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಡಾ.ವಿಘ್ನೇಶ್‌, ಕೃಷಿ ಕಾಲೇಜು ಡೀನ್‌ ಡಾ.ಮಂಜುನಾಥ,  ಸಹಸಂಶೋಧನಾ ನಿರ್ದೇಶಕ ಡಾ.ಶೆಟ್ಟಿ, ಒಳನಾಡು ಮೀನುಗಾರಿಕೆ ವಿಭಾಗದ ಮುಖ್ಯಸ್ಥ ಡಾ.ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.