ರೈತರ ಸಮಸ್ಯೆಗಳ ಗಂಭೀರ ಚಿಂತನೆ ಅಗತ್ಯ: ಸಜ್ಜನರ

7

ರೈತರ ಸಮಸ್ಯೆಗಳ ಗಂಭೀರ ಚಿಂತನೆ ಅಗತ್ಯ: ಸಜ್ಜನರ

Published:
Updated:

ಹಾವೇರಿ: `ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದು, ಅದಕ್ಕೆ ಕಾರಣಗಳೇನು, ಸಮಸ್ಯೆಗಳೇನು ಎಂಬುದರ ಬಗ್ಗೆ ಗಂಭೀರ ಚರ್ಚೆ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕಿದೆ' ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಹೇಳಿದರು.ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಕೃಷಿ ಇಲಾಖೆ, ಕೃಷಿ ತಾಂತ್ರಿಕತೆ ನಿರ್ವಹಣಾ ಸಂಸ್ಥೆ (ಆತ್ಮಾ) ಗಳ ಆಶ್ರಯದಲ್ಲಿ ಭಾನುವಾರ ನಗರದ ತಾಲ್ಲೂಕ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ದೂರ ಸರಿಯುವ ಪ್ರವೃತ್ತಿ ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ. ಬೀಜ ಗೊಬ್ಬರಗಳ ಬೆಲೆ ಏರಿಕೆ, ವೈಜ್ಞಾನಿಕ ಬೆಲೆ ಸಿಗದಿರುವುದು, ಬರಗಾಲ ಹೀಗೆ ಒಂದಿಲ್ಲೊಂದು ಸಂಕಷ್ಟಗಳಿಂದ ರೈತ ಬಾಂಧವರು ಬಳಲುವಂತಾಗಿದೆ ಎಂದರು.ಬದಲಾಗುತ್ತಿರುವ ಕಾಲಮಾನ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಕಡಿಮೆ ಪ್ರದೇಶದಲ್ಲಿ ಹೆಚ್ಚಿನ ಬೆಳೆ ಬೆಳೆಯುವಂತಾಗಬೇಕು. ಇದೊಂದೆ ಈಗಿರುವ ಮಾರ್ಗ. ಕಾರಣ ರೈತರು ತಾಂತ್ರಿಕತೆ ಅಳವಡಿಸಿಕೊಂಡು ಬೆಳೆ ಬೆಳೆಯಬೇಕಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ಜವಾಹರಲಾಲ್ ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮ ದಿನವನ್ನು ಸಹ ರೈತರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.ಕೃಷಿಕ ಕುಟುಂಬದಿಂದ ಬಂದ ಚೌಧರಿ ಚರಣಸಿಂಗ್ ಪ್ರತಿಕ್ಷಣಕ್ಕೂ ಕೃಷಿಕರ ಕುರಿತಂತೆ ಚಿಂತನೆ ನಡೆಸುತ್ತಿದ್ದರು. ತಮ್ಮ ಬಾಳಿನುದ್ದಕ್ಕೂ ಕೃಷಿ ಹಾಗೂ ಕೃಷಿಕರ ಅಭಿವೃದ್ಧಿಗಿ ಶ್ರಮಿಸಿದ ಮಹಾನ್ ಚೇತನ ಎಂದರು.ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ 2011-12ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ಶಿವನಗೌಡ ಹರ್ತಿ ಅವರನ್ನು ಸನ್ಮಾನಿಸಿದರು.ತಾ.ಪಂ. ಅಧ್ಯಕ್ಷೆ ಮೆಹರುನ್ನಿಸಾ ಜಗಳೂರ, ಉಪಾಧ್ಯಕ್ಷ ಬಸಪ್ಪ ಕಳಸೂರ, ಕೃಷ್ಣಾ ಸುಣಗಾರ, ಕೃಷಿಕ ಸಮಾಜದ ಬಸವರಾಜ ಡೊಂಕೆಣ್ಣನವರ, ಚನ್ನಬಸಪ್ಪ ಅರಳಿ, ಮಲ್ಲೇಶಪ್ಪ ಮತ್ತೀಹಳ್ಳಿ, ನಾಗರಾಜ ವಿಭೂತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ಶಿವಕುಮಾರ ಲಕ್ಷಶೆಟ್ಟಿ, ನಾಗರತ್ನಾ ಖಾರಿಕಂಠಿ ಮತ್ತಿತರರು ಹಾಜರಿದ್ದರು.ಹಿರೇಕೆರೂರು ವರದಿ

ಹಿರೇಕೆರೂರ: ರೈತರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತಸಂಘ (ಪ್ರೊ. ನಂಜುಂಡಸ್ವಾಮಿ ಬಣ)ದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ ಇಸ್ಮಾಯಿಲ್‌ಸಾಬ್ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಹಿರೇಕೆರೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಕೂಡಲೇ ಎಲ್ಲ ರೈತರಿಗೆ ಬೆಳೆವಿಮೆ ಮಂಜೂರು ಮಾಡಬೇಕು. ಬರ ಪರಿಹಾರ ನಿಧಿಯಿಂದ ಪ್ರತಿ ಎಕರೆಗೆ ರೂ 1.25ಲಕ್ಷ ಪರಿಹಾರ ನೀಡಬೇಕು. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ  ಹೆಚ್ಚಿದೆ. ಅದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ರೈತರ ಬೆಳೆಗಳ ಬೆಲೆ ಸಾಕಷ್ಟು ಕಡಿಮೆಯಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಪ್ರತಿ ಕ್ವಿಂಟಲ್ ಹತ್ತಿಗೆ ರೂ 8000 ಹಾಗೂ ಪ್ರತಿ ಕ್ವಿಂಟಲ್ ಗೋವಿನ ಜೋಳಕ್ಕೆ ರೂ 1800 ನಿಗದಿ ಮಾಡಬೇಕು ಎಂದು ಮನವಿಯಲ್ಲಿ ಕೋರಿದರು.ಸಿದ್ದನಗೌಡ ಪಾಟೀಲ, ರಾಜಶೇಖರ ದೂದಿಹಳ್ಳಿ, ಬಸವರಾಜ  ಚಿಂದಿ, ಎಚ್.ಎಂ. ಅಶೋಕ,  ಗದಿಗೆಪ್ಪ ದಾನಮ್ಮನವರ, ಶಿವನಗೌಡ ಪಾಟೀಲ, ಉಳಿವೆಪ್ಪ ಹುಚಗೊಂಡರ, ಬಸವಣ್ಣೆಪ್ಪ ಕಿಚಡೇರ, ಲೋಕಪ್ಪ ಸಂಕೊಳ್ಳಿ, ವಿನೋದಮ್ಮ ಹೊಂಕಣದ, ಚಂದ್ರವ್ವ ಅರಸಾಪುರ, ಸೋಮಲವ್ವ ನಾಯಕ, ಭರಮಪ್ಪ ಬಾಲಣ್ಣನವರ, ರೇವಣೇಶ ಹುಲ್ಲತ್ತಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry