ಮಂಗಳವಾರ, ಮೇ 11, 2021
21 °C

ರೈತರ ಸಮಸ್ಯೆಗೆ ಸರ್ಕಾರ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: `ತಾಲ್ಲೂಕಿನ ಕೃಷಿ ಕುಟುಂಬದ ಬಡ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯಗಳು ನಡೆಯುತ್ತಿದೆ. ಅವರ ನೋವುಗಳಿಗೆ ಸ್ಪಂದನೆಯೇ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ~ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಹೇಳಿದರು.ತಾಲ್ಲೂಕು ರೈತ ಸಂಘಟನೆಯ ಆಶ್ರಯದಲ್ಲಿ ಇಲ್ಲಿನ ತಾಲ್ಲೂಕು ತಹಸೀಲ್ದಾರ್ ಕಚೇರಿಯ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.`ರೈತರ ಸಂಕಷ್ಟ ಇದೆ ರೀತಿ ಮುಂದುವರಿದರೆ ಉಪವಾಸ ಸತ್ಯಾಗ್ರಹ ಸಹಿತ ಹೋರಾಟ ಮಾಡುವುದು ಅನಿವಾರ್ಯ~ ಎಂದು ಅವರು ಎಚ್ಚರಿಸಿದರು.ರೈತರು ದೇಶದ ಬೆನ್ನೇಲುಬು ಎನ್ನುವ ಸರ್ಕಾರ, ಅವರ ವಿಷಯದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ರೈತರ ಸಮಸ್ಯೆಗಳಿಗೆ ಪರಿಹಾರವನ್ನು ರೂಪಿಸುವ ಬದಲು ಅವರ ಭೂಮಿಯನ್ನು ಬೃಹತ್ ಉದ್ದಿಮೆಗಳಿಗೆ ಮಾರಾಟ ಮಾಡುತ್ತಿದೆ. ಸರ್ಕಾರದ ಯೋಜನೆಗಳು ನೇರವಾಗಿ ಬಡ ರೈತರಿಗೆ ದೊರಕುವ ಬದಲು ಮಧ್ಯವರ್ತಿಗಳ ಪಾಲಾಗುತ್ತಿದೆ.ಬೆಳೆಗಳಿಗೆ ಹಾನಿಗಳಾದಾಗ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಗೂ ಕಾಡು ಪ್ರಾಣಿಗಳ ಹಾವಳಿ ಉಂಟಾದಾಗ ಸರ್ಕಾರದ ಇಲಾಖೆಗಳ ಸಹಕಾರವೇ ದೊರಕುತ್ತಿಲ್ಲ~ ಎಂದು ಅವರು ದೂರಿದರು.`ತಾಲ್ಲೂಕಿನಲ್ಲಿ ನಿದ್ರೆ ಮಾಡುತ್ತಿರುವ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಧೋರಣೆಯಿಂದಾಗಿ ಈ ಇಲಾಖೆಗಳ ಅಸ್ತಿತ್ವ ಇದೆಯಾ ಎಂದು ಪ್ರಶ್ನಿಸುವಂತಾಗಿದೆ~ ಎಂದು ಪ್ರಶ್ನಿಸಿದರು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಠಾರಿ ಮಾತನಾಡಿ, `ನಾಮಕಾವಸ್ಥೆಯಲ್ಲಿರುವ ಸರ್ಕಾರದ ಇಲಾಖೆಗಳಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಡಿಕೆ ರೋಗಕ್ಕೆ, ಬೆಳೆ ಹಾನಿಗೆ ಇಲ್ಲಿಯವರೆಗೂ ಪರಿಹಾರವನ್ನೆ ವಿತರಿಸಿಲ್ಲ. ತಾಲ್ಲೂಕಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ಗೊಬ್ಬರ ವಿತರಣೆ ಸರಿಯಾಗಿ ನಡೆಯದೆ ಇರುವುದರಿಂದ, ಬಡ ರೈತರು ಹೆಚ್ಚಿನ ದರವನ್ನು ನೀಡಿ ಖಾಸಗಿಯವರಿಂದ ಖರೀದಿ ಮಾಡಬೇಕಾದ ಅನೀವಾರ್ಯತೆ ಸೃಷ್ಟಿಯಾಗಿದೆ. ಕಂದಾಯ ಇಲಾಖೆಯಲ್ಲಿನ ಗಣಕ ಯಂತ್ರ ಸ್ಥಬ್ದವಾಗಿರುವುದರಿಂದಾಗಿ ಕಳೆದ ಒಂದು ವರ್ಷದಿಂದ ರೈತರಿಗೆ ಪಡಿತರ ಚೀಟಿ ಪಡೆಯುವಲ್ಲಿ ಗೊಂದಲಗಳು ಉಂಟಾಗುತ್ತಿದೆ~ ಎಂದು ದೂರಿದರು.ಸಭೆಯಲ್ಲಿ ಮಾತನಾಡಿದ ಸಂಘಟನೆಯ ಉಪಾಧ್ಯಕ್ಷ ವಸಂತ ಹೆಗ್ಡೆ, ಗಣೇಶ್ ಪೂಜಾರಿ, ಮೇರಿ ಬಾಬು ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು.`ತಾಲ್ಲೂಕು ಕೇಂದ್ರದ ತೋಟಗಾರಿಕಾ ಇಲಾಖೆಯಲ್ಲಿ ಕೇವಲ ಒಬ್ಬ ಅಧಿಕಾರಿ ಹಾಗೂ ಒಬ್ಬ ಸಿಬ್ಬಂದಿ ಕಾರ‌್ಯ ನಿರ್ವಹಿಸುತ್ತಿದ್ದಾರೆ. ರೈತರು ಸಮಸ್ಯೆ ಹೇಳಿಕೊಳ್ಳಲು ಹೋದರೆ ಸಿಬ್ಬಂದಿ ಕೊರತೆಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇಲ್ಲಿ ಇಲಾಖೆ ಇದ್ದೂ ಇಲ್ಲದಂತಾಗಿದೆ. ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದರೂ ಅವರ ಕಾಳಜಿ ತೃಪ್ತಿಕರವಾಗಿಲ್ಲ. ಹಾಗಾಗಿ ಹೋರಾಟದ  ಹಾದಿ ಹಿಡಿಯಬೇಕಾಯಿತು~ ಎಂದರು.ಬೈಂದೂರಿನಿಂದ ನಗರದ ಶಾಸ್ತ್ರಿ ಸರ್ಕಲ್ ಬಳಿಗೆ ವಾಹನದಲ್ಲಿ ಆಗಮಿಸಿದ ನೂರಾರು ರೈತರು ಸರ್ಕಾರ  ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ತಾಲ್ಲೂಕು ತಹಸೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.`ಬೆಳಿಗ್ಗೆಯಿಂದಲೆ ಮಳೆಯ ನಡುವೆಯೂ ಪ್ರತಿಭಟನೆಯನ್ನು ನಡೆಸುತ್ತಿದ್ದ ರೈತರ ಅಹವಾಲನ್ನು ಸ್ವೀಕರಿಸಲು ತಾಲ್ಲೂಕು ಕೇಂದ್ರದ ಅಧಿಕಾರಿಗಳು ಬಾರದೆ ಇದ್ದುದರಿಂದ ಮಧ್ಯಾಹ್ನ ವೇಳೆಗೆ ಹೋರಾಟದ ಸ್ವರೂಪ ಉಗ್ರವಾಗಿತ್ತು. ಘೋಷಣೆಗಳು ತಾರಕಕ್ಕೇರಿತ್ತು. ಪ್ರಭಾರ ತಹಸೀಲ್ದಾರ ಲಾಲಂಕಿ ರವಿ ಅವರು ಕಂದಾಯ ಉಪವಿಭಾಗಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಬಳಿಕ ಪ್ರತಿಭಟನಾಗಾರರಿಂದ ಮನವಿ ಸ್ವೀಕರಿಸಲು ಮುಂದಾದರು.ಅದಕ್ಕೆ ಒಪ್ಪದ ರೈತರು ಖುದ್ದು ಉಪವಿಭಾಗಾಧಿಕಾರಿಗಳೆ ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿದರು.

ರೈತರ ಆಗ್ರಹಕ್ಕೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಸದಾಶಿವ ಪ್ರಭು ಉಡುಪಿಯಿಂದ ಕುಂದಾಪುರಕ್ಕೆ ಬಂದು ಮನವಿಯನ್ನು ಸ್ವೀಕರಿಸಿ, ಸಮಸ್ಯೆಗಳ ಕುರಿತು ಪರಿಶೀಲಿಸುವ ಕುರಿತು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.