ರೈತರ ಸಮಸ್ಯೆ ಪರಿಹಾರಕ್ಕೆ ಆದ್ಯತೆ

7

ರೈತರ ಸಮಸ್ಯೆ ಪರಿಹಾರಕ್ಕೆ ಆದ್ಯತೆ

Published:
Updated:

ಗುಲ್ಬರ್ಗ: ರೈತರಿಗಾಗಿ ಮಂಡಿಸಲಿರುವ ಕೃಷಿ ಬಜೆಟ್‌ನಲ್ಲಿ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ರೂಪಿಸಿದ್ದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಜಿಲ್ಲಾ ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೇದಾರಲಿಂಗಯ್ಯ ನೇತೃತ್ವದ ರೈತರ ನಿಯೋಗವೊಂದು ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ.ಮಲ್ಲಾಬಾದ ಏತ ನೀರಾವರಿ ಯೋಜನೆಗೆ ಅಗತ್ಯದಷ್ಟು ಹಣವನ್ನು ಇದೇ ಬಜೆಟ್‌ನಲ್ಲಿ ಒದಗಿಸಬೇಕು. ಕೋನ ಹಿಪ್ಪರಗಿ- ಸರಡಗಿ ಮಧ್ಯೆ ಭೀಮಾನದಿಗೆ ಬ್ಯಾರೇಜ್ ನಿರ್ಮಿಸಬೇಕು. ತೊಗರಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ತೊಗರಿ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂಪಾಯಿ ಅನುದಾನ ಒದಗಿಸಬೇಕು. ರಾಜ್ಯದಾದ್ಯಂತ ಕಬ್ಬಿಗೆ ಏಕರೂಪದ ದರ ನಿಗದಿ ಮಾಡಬೇಕು. ಜೇವರ್ಗಿಯಲ್ಲಿ ಫುಡ್‌ಪಾರ್ಕ್ ಸ್ಥಾಪನೆಗೆಂದು 120 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳು ಈ ಯೋಜನೆಯನ್ನು ಕಾರ್ಯಗತ ಮಾಡಬೇಕು ಎಂದು ಒತ್ತಾಯಿಸಿದ ರೈತರು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ರೈತರ ಆಪತ್‌ನಿಧಿಯನ್ನು ಈಗಲಾದರೂ ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.60 ವರ್ಷ ವಯೋಮಾನ ದಾಟಿದ ನಂತರ ರೈತರಿಗೆ ದುಡಿಯಲು ಶಕ್ತಿ ಇರುವುದಿಲ್ಲ. ಅಂಥವರ ಬದುಕು ಸಂಕಷ್ಟಕ್ಕೆ ಈಡಾಗುವುದನ್ನು ಹಳ್ಳಿಗಳಲ್ಲಿ ನೋಡಬಹುದು. ಹೀಗಾಗಿ ವೃದ್ಧ ರೈತರಿಗೆ ಪ್ರತಿ ತಿಂಗಳೂ ರೂ 2,000 ಮಾಸಾಶನ ನೀಡುವಂತೆ ರೈತರು ಮನವಿ ಮಾಡಿದರು. ಈ ಬೇಡಿಕೆಗಳನ್ನು ಈಡೇರಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಮುರುಗೇಶ ನಿರಾಣಿ ಉಪಸ್ಥಿತರಿದ್ದರು. ನಿಯೋಗದಲ್ಲಿ ಎ.ಬಿ.ಹಿರೇಮಠ, ಎಸ್.ಎಸ್.ಸಲಗರ, ಶಿವಾನಂದ ದ್ಯಾಮಗೊಂಡ, ಅಮೃತ ಗಬಸಾವಳಗಿ, ಚಂದ್ರಶೇಖರ ಮಲ್ಲಾಬಾದ, ಇಜೇರಿ ದರ್ಗಾದ ಸಜ್ಜಾ ಸಾಹೇಬ್, ಮಹಾಂತಯ್ಯಾ ಸ್ವಾಮಿ ಅಮರಖೇಡ, ಶರಣಗೌಡ ಮುತ್ತಕೋಡ, ಶಿವನಗೌಡ ನೀಲಕೋಡ, ರೌಫ್ ಖಾದ್ರಿ, ರಾಘು ಮಂದೇವಾಲ ಸೇರಿದಂತೆ ಸುಮಾರು ಐನೂರು ರೈತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry