ರೈತರ ಸಮಾವೇಶ 21ರಂದು

ಶನಿವಾರ, ಜೂಲೈ 20, 2019
28 °C

ರೈತರ ಸಮಾವೇಶ 21ರಂದು

Published:
Updated:

ಹುಬ್ಬಳ್ಳಿ: `ರೈತ ಹುತಾತ್ಮ ದಿನಾಚರಣೆ ಹಾಗೂ ರೈತ ಚಳವಳಿಯ ಮುಂದಿನ ಹೋರಾಟವನ್ನು ನಿರ್ಧರಿಸಲು ಇದೇ 21ರಂದು ಮಧ್ಯಾಹ್ನ 12 ಗಂಟೆಗೆ ಧಾರವಾಡದ ಕಡಪಾ ಮೈದಾನದಲ್ಲಿ ರೈತರ ಸಮಾವೇಶವನ್ನು ಆಯೋಜಿಸಲಾಗಿದೆ.`ಅಂದು ನಡೆಯುವ ಸಮಾವೇಶದಲ್ಲಿ ಬಸವರಾಜ ದೇವರು ಸಾನ್ನಿಧ್ಯ ವಹಿಸುವರು. ರೈತ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯ, ಚಾಮರಸ ಮಾಲಿಪಾಟೀಲ, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ ಮೊದಲಾದವರು ಭಾಗವಹಿಸುವರು. ಸುಮಾರು 20,000 ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು~ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ಪಾಟೀಲ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದದಲ್ಲಿ ರೈತ ಬಂಡಾಯ ನಡೆದು 32 ವರ್ಷಗಳಾದವು. ಅಂದು ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ರೈತರ ಸ್ಮರಣಾರ್ಥ ಪ್ರತಿ ವರ್ಷ ಜುಲೈ 21ರಂದು ರೈತ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ~ ಎಂದು ಅವರು ಹೇಳಿದರು.`ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲ ಕಾಡುತ್ತಿದೆ. ಅದರಲ್ಲೂ ಧಾರವಾಡ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಹಸಿ ಬರ ಹಾಗೂ ಪೂರ್ವ ಭಾಗದಲ್ಲಿ ಒಣ ಬರದಿಂದಾಗಿ ರೈತರು ತತ್ತರಿಸುವಂತಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು. ಇದರೊಂದಿಗೆ ಗ್ರಾಮೀಣ ಭಾಗದ ಯುವಕರು ಕೃಷಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ, ಹೈನುಗಾರಿಕೆಗೆ ಒತ್ತು ಕೊಡಬೇಕು. ಜೊತೆಗೆ ರೈತರು ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ಸಿಗಬೇಕು~ ಎಂದು ಅವರು ಆಗ್ರಹಿಸಿದರು.`ರೈತ ಸಂಘಟನೆಯನ್ನು ಒಡೆಯುವ ಯತ್ನ ನಡೆಯುತ್ತಿದೆ. ಆದರೆ ರೈತ ಸಂಘ ಗಟ್ಟಿಯಾಗಿದೆ. ರಾಜ್ಯದ 26 ಜಿಲ್ಲೆಗಳಲ್ಲಿ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಸಂಘದಲ್ಲಿ ಯಾವುದೇ ಆಂತರಿಕ ಜಗಳವಿಲ್ಲ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಿಂಗ್ ರಜಪೂತ, ಜಿಲ್ಲಾ ಉಪಾಧ್ಯಕ್ಷ ರವಿ ಗುಗ್ರಿ, ಜಿಲ್ಲಾ ಸಂಚಾಲಕರಾದ ಬಸಮ್ಮ ಸಂಕಣ್ಣವರ ಹಾಗೂ ಮಲ್ಲಯ್ಯ ಕುಂದಗೋಳ, ಧಾರವಾಡ ತಾಲ್ಲೂಕು ಘಟಕದ ಅಧ್ಯಕ್ಷ ಬಸಪ್ಪ ಬೂದಿಹಾಳ ಹಾಗೂ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry