ಶುಕ್ರವಾರ, ಜೂನ್ 18, 2021
29 °C

ರೈತರ ಸಾಲ ಮನ್ನಾ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಹೈದರಾಬಾದ್ ಕರ್ನಾಟಕ ಪ್ರದೇಶದ ರೈತರು ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟದ ಬದುಕು ಕಟ್ಟಿಕೊಂಡಿದ್ದಾರೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಬ್ಯಾಂಕ್‌ಗಳು ಸಾಲ ವಸೂಲಿ ನೆಪದಲ್ಲಿ ಗೂಂಡಾಗಳ ಬಳಕೆ ಮಾಡುತ್ತಿವೆ.ನೀರಾವರಿ ಪ್ರದೇಶಕ್ಕೆ ಸಮರ್ಪಕ ನೀರು ಹರಿಸದೆ ಮಲತಾಯಿ ಧೋರಣೆ ಅನುಸರಿಸುತ್ತ ಬರಲಾಗುತ್ತಿದೆ. ಕಾರಣ ಸರ್ಕಾರ ರೈತರ ಎಲ್ಲಾ ಮೂಲಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಅಮೀನಪಾಷ ಆಗ್ರಹಪಡಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಘೋಷಿಸುತ್ತಿರುವ ಬೆಂಬಲ ಬೆಲೆಗೆ ವ್ಯಾಪಾರಸ್ಥರು ಖರೀದಿ ಮಾಡುತ್ತಿಲ್ಲ. ಸರ್ಕಾರವೆ ಕೃತಕ ಅಭಾವ ಸೃಷ್ಟಿಸಿ ರೈತರೊಂದಿಗೆ ಸೆಣಸಾಟ ನಡೆಸುತ್ತಿದೆ.

 

ಪ್ರಸಕ್ತ ಬಜೆಟ್‌ನಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ನಿಲ್ಲಿಸುವಂತೆ ನಿರ್ದೇಶನ ನೀಡಬೇಕು. ಈಗಿರುವ ಸಾಲವನ್ನು ಧೀರ್ಘಾವಧಿ ಸಾಲವೆಂದು ಘೋಷಿಸುವ ಜೊತೆಗೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ವ್ಯವಸ್ಥೆ ರೈತರ ರಕ್ಷಣೆಗೆ ಮುಂದಾಗುವಂತೆ ಕೋರಿದರು.ನಾರಾಯಣಪುರ ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಇದ್ದರೂ ಅಣೆಕಟ್ಟೆ ಅಧಿಕಾರಿಗಳು ರೈತರೊಂದಿಗೆ ಆಟವಾಡುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿಗೆ ತಪ್ಪು ಮಾಹಿತಿ ನೀಡುತ್ತ ಬೇಸಿಗೆ ಬೆಳೆ ನಾಟಿ ಮಾಡಿಕೊಳ್ಳದಂತೆ ಮೋಸ ಮಾಡಿದ್ದಾರೆ.ಫೆಬ್ರುವರಿ 25ರ ವರೆಗೆ ಮಾತ್ರ ನೀರು ದೊರಕುತ್ತವೆ ಎಂದು ಹೇಳಿದವರು ಮಾರ್ಚ್ 10ರವರೆಗೆ ನೀಡಿದ್ದಾರೆ. ಇನ್ನೂ ಸಾಕಷ್ಟು ಪ್ರಮಾಣದ ನೀರಿನ ಲಭ್ಯತೆ ಇದ್ದು ಏಪ್ರಿಲ್ 10ರವರೆಗೆ ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆಗಳಿಗೆ ಮತ್ತು ಏತ ನೀರಾವರಿ ಯೋಜನೆಗಳಿಂದ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿದರು.ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪೂರ ಏತ ನೀರಾವರಿ ಯೋಜನೆ ವ್ಯಾಪ್ತಿಯ ನೀರಾವರಿ ಪ್ರದೇಶಕ್ಕೆ ಏಪ್ರಿಲ್ 10ರವರೆಗೆ ನೀರು ಹರಿಸಬೇಕು. ಒಂದು ವೇಳೆ ಮಾರ್ಚ್ 10ಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ರೈತರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನಾರಾಯಣಪುರ ಆಡಳಿತ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಪುತ್ರಗೌಡ ನಂದಿಹಾಳ, ಮಲ್ಲಪ್ಪ, ರಾಮಣ್ಣ, ಯಲ್ಲಪ್ಪ, ಅಮರೆಗೌಡ, ಹನುಮಂತಗೌಡ, ಹನುಮಂತ, ಕಾಶಿಂಸಾಬ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.