ರೈತರ ಹತಾಶೆಯ ಕ್ರಮ

7

ರೈತರ ಹತಾಶೆಯ ಕ್ರಮ

Published:
Updated:

ಸೂಕ್ತ ಬೆಂಬಲ ಬೆಲೆಗೆ ತೊಗರಿ ಖರೀದಿಸಲು ಒತ್ತಾಯಿಸಿ ರೈತರು ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಮೊನ್ನೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಒಟ್ಟಾರೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದು. ಈ ಘಟನೆ ರೈತರ ಹತಾಶೆಯ ಪ್ರತೀಕವಾಗಿದೆ. ರೈತ ಪರ ಕಾಳಜಿ ಇದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವ ವಿಚಾರವಲ್ಲ. ಈ ಘಟನೆಯಲ್ಲಿ ಹೆಚ್ಚಿನ ಅನಾಹುತವಾಗದಿರುವುದು ನೆಮ್ಮದಿ ತರುವ ಸಂಗತಿ. ಖರೀದಿಯಲ್ಲಿ ತಮಗೆ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಿ ಎನ್ನುವುದೊಂದೇ ತೊಗರಿ ಬೆಳೆಗಾರರ ಹಕ್ಕೊತ್ತಾಯ.ಬೆಲೆ ತಾರತಮ್ಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರದ ಗಮನ ಸೆಳೆಯಲು ರೈತರು ಅನಿವಾರ್ಯವಾಗಿ ಈ ಕ್ರಮಕ್ಕೆ ಮುಂದಾಗಿರುವುದೂ ನಿಜ. ಬೆಳೆಗಾರರು ಅಸಹಾಯಕತೆಯಿಂದ ಕೊನೆಯ ಅಸ್ತ್ರವಾಗಿ ಇಂತಹ ನಿರ್ಧಾರಕ್ಕೆ ಬರಲು ಮಧ್ಯವರ್ತಿಗಳ ದುರಾಸೆ, ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ರೈತರ ಹಿತರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬರುವವರು ಆನಂತರ ರೈತರು ದಿನನಿತ್ಯ ಎದುರಿಸುವ ಬವಣೆ, ಶೋಷಣೆ ಮತ್ತಿತರ ಸಂದರ್ಭಗಳಲ್ಲಿ ಅವರ ನೆರವಿಗೆ ಮುಂದಾಗದೇ ಜಾಣ ಮರೆವಿಗೆ ಹೋಗುವುದರಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಕಳೆದ ವರ್ಷತೊಗರಿಗೆ ಪ್ರತಿ ಕ್ವಿಂಟಲ್‌ಗೆ ರೂ 4,500 ಬೆಂಬಲ ಬೆಲೆ ಇತ್ತು. ಈ ವರ್ಷ ಕೇಂದ್ರ ಸರ್ಕಾರವು ಪ್ರತಿ  ಕ್ವಿಂಟಲ್‌ಗೆ ರೂ 3000 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಈ ಬೆಂಬಲ ಬೆಲೆಗೆ  ಶೇ 25ರಷ್ಟನ್ನು ಸೇರಿಸಿ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿದ ನಂತರವಷ್ಟೇ ಖರೀದಿ ಮಾಡಬೇಕು ಎನ್ನುವ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಇರುವ ಅಡ್ಡಿಯಾದರೂ ಏನಿದೆ? ಕೆಲ ದಿನಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ದಿಢೀರನೇ ಬೆಲೆ ರೂ 2700ರ ಆಸುಪಾಸಿನಲ್ಲಿ ಕುಸಿಯಲು ಮಧ್ಯವರ್ತಿಗಳ ಲಾಭದಾಸೆ ಕಾರಣ.ಬೆಳೆಗಾರರಿಗೆ ನ್ಯಾಯಯುತ ಬೆಲೆ ಸಿಗದೇ ಪ್ರತಿ ಬಾರಿಯೂ ಅನ್ಯಾಯವಾಗಲು ಮಧ್ಯವರ್ತಿಗಳು ಮತ್ತು ಮಾರುಕಟ್ಟೆ ಶಕ್ತಿಗಳು ನಿರಂತರವಾಗಿ ಸಂಚು ನಡೆಸುತ್ತಲೇ ಬಂದಿವೆ. ತೊಗರಿ ಬೇಳೆಯ ಚಿಲ್ಲರೆ ಮಾರಾಟ ಬೆಲೆಗೂ (ಪ್ರತಿ ಕೆಜಿಗೆ ರೂ 68ರಿಂದ ರೂ 70) ರೈತರಿಂದ ತೊಗರಿ ಖರೀದಿ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇರುವುದೇ ವ್ಯವಸ್ಥೆಯಲ್ಲಿನ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತದೆ. ಇದೊಂದು ಪ್ರತಿ ವರ್ಷದ ಗೋಳಿನಂತೆ ಪುನರಾವರ್ತನೆ ಆಗುವುದು ತಪ್ಪಬೇಕು. ಸರ್ಕಾರವು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ರೈತರನ್ನು ಶೋಷಿಸುವ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟಹಾಕುವ,  ತೊಗರಿ ಮಂಡಳಿಯ ಕಾರ್ಯದಕ್ಷತೆ ಹೆಚ್ಚಿಸುವುದೂ ಸೇರಿದಂತೆ ಹಲವಾರು ರಚನಾತ್ಮಕ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತಂದರೆ ಮಾತ್ರ ಬೆಳೆಗಾರರ ನೆಮ್ಮದಿ ಹೆಚ್ಚೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry