`ರೈತರ ಹಿತಕಾಯಲು ಆವರ್ತ ನಿಧಿ ಸ್ಥಾಪಿಸಿ'

ಗುರುವಾರ , ಜೂಲೈ 18, 2019
24 °C

`ರೈತರ ಹಿತಕಾಯಲು ಆವರ್ತ ನಿಧಿ ಸ್ಥಾಪಿಸಿ'

Published:
Updated:

ಧಾರವಾಡ: ಬೆಲೆ ಕುಸಿತ ಉಂಟಾದ ಸಂದರ್ಭದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ಆವರ್ತ ನಿಧಿಯೊಂದನ್ನು ಸ್ಥಾಪಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರೈತರು ಬೆಳೆದ ಧಾನ್ಯಗಳನ್ನು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕೂ ಮೊದಲು ರಾಜ್ಯದ ಶೇ 65ರಷ್ಟಿರುವ ರೈತ ಸಮುದಾಯದ ಹಿತ ಕಾಯಲು ಒಂದು ನಿರ್ದಿಷ್ಟ ಮೊತ್ತದ ಆವರ್ತ ನಿಧಿಯನ್ನು ಸ್ಥಾಪಿಸಬೇಕು.

ಅಲ್ಲದೇ, ಒಟ್ಟಾರೆ ಬಜೆಟ್‌ನಲ್ಲಿ ಶೇ 65ರಷ್ಟು ಭಾಗವನ್ನು ರೈತರ ಕಲ್ಯಾಣಕ್ಕೆ ಖರ್ಚು ಮಾಡಬೇಕು. ಅದಕ್ಕೆಂದೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು' ಎಂದು ಒತ್ತಾಯಿಸಿದರು.`ರಾಜ್ಯದ ನೀರಾವರಿ ಯೋಜನೆಗಳನ್ನು ಮುಗಿಸಲು ಈ ಬಾರಿಯ ಬಜೆಟ್‌ನಲ್ಲಿ ನೀಡಿರುವ ಹಣದಿಂದ ಸಾಧ್ಯವಿಲ್ಲ. ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಬೇಕು' ಎಂದರು.`ಕಳಸಾ-ಬಂಡೂರಿ ನಾಲಾ ಯೋಜನೆಯ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಗೋವಾ ರಾಜ್ಯವು ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಕರಾರು ತೆಗೆದು ಇದೀಗ ನ್ಯಾಯಮಂಡಳಿಯೂ ರಚನೆಯಾಗಿದೆ. ಆದರೆ, ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರಬೀಳಬೇಕು ಎಂದರೆ ಹತ್ತಾರು ವರ್ಷ ಬೇಕಾಗಬಹುದು.

ಹುಬ್ಬಳ್ಳಿ-ಧಾರವಾಡ ಹಾಗೂ ಪಕ್ಕದ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ ಎಂಬುದು ಗೋವಾಕ್ಕೂ ತಿಳಿದಿದೆ. ಆ ರಾಜ್ಯದ ವಾದವನ್ನು ನಾವು ಕೇಳಬೇಕಿಲ್ಲ. ರಾಜ್ಯದಲ್ಲಿ ಕಳಸಾ-ಬಂಡೂರಿ ನಾಲೆಗುಂಟ ಹಲವು ಯೋಜನೆಗಳನ್ನು ಹಾಕಿಕೊಳ್ಳಬೇಕು. ಆಂಧ್ರಪ್ರದೇಶದಲ್ಲಿ ಅಂದಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಕೇಂದ್ರದ ಗಮನಕ್ಕೆ ತಾರದೇ ವಿವಾದಿತ ನದಿ ಕಣಿವೆ ಯೋಜನೆಯನ್ನು ಜಾರಿಗೆ ತಂದಿದ್ದರು. ಕೇಂದ್ರವೇನೂ ತಡೆದಿರಲಿಲ್ಲ' ಎಂದು ತಿಳಿಸಿದರು.`ಇದೇ 21ರಂದು ನರಗುಂದ ಬಂಡಾಯದ ಅಂಗವಾಗಿ ನರಗುಂದದಲ್ಲಿ ಬೃಹತ್ ರೈತರ ಸಮಾವೇಶ ನಡೆಯಲಿದೆ' ಎಂದರು. ರೈತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ಮಳಲಿ, ಸಂಘದ ರಾಜ್ಯ ಕಾರ್ಯದರ್ಶಿ ಡಾ.ಎಸ್.ಬಿ.ಚೌಕಿಮಠ ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry