ಭಾನುವಾರ, ನವೆಂಬರ್ 17, 2019
29 °C

ರೈತಸಂಘ, ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ

Published:
Updated:

ಶೃಂಗೇರಿ : ತಾಲ್ಲೂಕಿನ ಸರ್ಕಾರಿ ಶಾಲೆಗಳ ಪೀಠೋಪಕರಣ ಮತ್ತು ವಿಜ್ಞಾನ ಉಪಕರಣದ ಸರಬರಾಜಿನಲ್ಲಿ ಬೋಗಸ್ ಟೆಂಡರ್ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋ ಪಿಸಿ ಸೋಮವಾರ ತಾಲ್ಲೂಕು ಕಚೇರಿ ಎದುರು ಕಾಂಗ್ರೆಸ್, ಜೆಡಿಎಸ್ ಮತ್ತು ರೈತ ಸಂಘ  ಪ್ರತಿಭಟನಾ ಧರಣಿ ನಡೆಸಿದವು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ನಟರಾಜ್, ಕಳೆದ ವಾರವೇ ಈ ಅವ್ಯವಹಾರದ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಹಾಗೂ ಉನ್ನತ ಅಧಿಕಾರಿಗಳಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಲಾಗಿತ್ತು.

 

ಆದರೆ ಇವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಅನುಮಾನಕ್ಕೆ ಕಾರಣವಾಗಿದೆ. ಶಾಲೆಗಳಿಗೆ ಪೂರೈಸಿರುವ ವಸ್ತುಗಳ ನೈಜ ಬೆಲೆಗಿಂತ ನಾಲ್ಕು ಪಟ್ಟು ಅಧಿಕ ಹಣವನ್ನು ಸರ್ಕಾರದಿಂದ ಪಡೆದು ನಕಲಿ ಬಿಲ್ ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ಎಸ್. ರಮೇಶ್ ಈ ಅವ್ಯವಹಾರದ ಬಗ್ಗೆ ಅಧಿಕಾರಿಗಳನ್ನು ಅಮಾನತು ಮಾಡಬೇಕು. ತಾಲ್ಲೂಕಿನ ಜನತೆಗೆ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಉತ್ತರಿಸಬೇಕಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತನಿಖೆ ನಡೆಸಲು ಬರುವ ದಿನಾಂಕವನ್ನು ಲಿಖಿತವಾಗಿ ತಿಳಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸಂಜೆವರೆಗೂ ಧರಣಿ ಮುಂದುವರಿಸಿದರು.ತಕ್ಷಣ ಬೇಡಿಕೆ ಸ್ಪಂದಿಸಿದ ಅಧಿಕಾರಿಗಳು ತನಿಖೆಗಾಗಿ ಇದೇ 14 ರಂದು ಶೃಂಗೇರಿಗೆ ಬರಲಾಗುತ್ತದೆ ಎಂದು ಉತ್ತರ ದೊರಕಿದ ನಂತರವಷ್ಟೆ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.  ಪ್ರತಿಭಟನೆಯಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೌಭಾಗ್ಯ ಗೋಪಾಲನ್, ಜೆಡಿಎಸ್‌ನ ಕೆ.ಎಸ್. ರಮೇಶ್, ಬಿ.ಜಿ. ಮಂಜುನಾಥ್, ಕಾಂಗ್ರೇಸ್ ಮುಖಂಡರಾದ ಹೊಸಕೊಪ್ಪ ಉದಯ್ ಕುಮಾರ್, ಮಾತೊಳ್ಳಿ ಸತೀಶ್, ತಾಲ್ಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯರು ಹಾಗೂ ಜೆಡಿಎಸ್ ಸದಸ್ಯ ಸುಂದರೇಶ್, ರೈತ ಸಂಘದ ಅಧ್ಯಕ್ಷ ಬಂಡ್ಲಾಪುರ ಶ್ರೀಧರ ರಾವ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.ಇದಕ್ಕೂ ಮುಂಚೆ ಪೀಠೋಪಕರಣ ಮತ್ತು ವಿಜ್ಞಾನ ಉಪಕರಣ ಖರೀದಿಯಲ್ಲಿ ಶಿಕ್ಷಣ ಇಲಾಖೆಯ ಪಾತ್ರವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಲಿಖಿತ ಹೇಳಿಕೆ ನೀಡಿ ಖರೀದಿ ಪ್ರಕ್ರಿಯೆಯಲ್ಲಿ ತಾಲ್ಲೂಕು ಪಂಚಾಯಿತಿ ನಿಯಮಾನುಸಾರ ಖರೀದಿಸಿ ಶಾಲೆಗಳಿಗೆ ನೀಡಲಾಗಿದೆ. ಇದರಲ್ಲಿ ಶಿಕ್ಷಣ ಇಲಾಖೆಯ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)