ರೈತ ಚಳವಳಿ ಉರಿಸೂರ್ಯ

7

ರೈತ ಚಳವಳಿ ಉರಿಸೂರ್ಯ

Published:
Updated:

1960ರ ದಶಕದ ಮಧ್ಯಭಾಗದಲ್ಲಿ ಪ್ರೊ.ಕೆ.ರಾಮದಾಸ್, ಆಲನಹಳ್ಳಿ ಕೃಷ್ಣ ಮತ್ತು ನಾನು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು; ದೇವನೂರ ಮಹಾದೇವ ಕೂಡ ನಮಗಿಂತ ಒಂದೆರಡು ವರ್ಷಕ್ಕೆ ಆಗ ಕಿರಿಯ ಒಡನಾಡಿ.ಆಗ ರಾಮಮನೋಹರ ಲೋಹಿಯಾ ನೇತೃತ್ವದ ಸಮಾಜವಾದಿ ಚಳವಳಿ ಶಿವಮೊಗ್ಗ ಭಾಗದಲ್ಲಿ ಹೆಚ್ಚು ಜೀವಂತವಾಗಿತ್ತು. ಸಹಜವಾಗಿಯೇ ನಮಗಿಂತ ಹಿರಿಯರಾಗಿದ್ದ ಹಾಗೂ ಮಲೆನಾಡಿನಿಂದ ಬಂದ ಅನಂತಮೂರ್ತಿ - ಲಂಕೇಶ್ - ತೇಜಸ್ವಿ ಅವರುಗಳ ಮೇಲೆ ಈ ಪ್ರಭಾವ ಆಗಿತ್ತು.

 

ಅದೇ ಹೊತ್ತಿಗೆ ಜರ್ಮನಿಯಲ್ಲಿ ತಮ್ಮ ಕಾನೂನು ವ್ಯಾಸಂಗ ಮುಗಿಸಿ ಬಂದ ಎಂ.ಡಿ. ನಂಜುಂಡಸ್ವಾಮಿ ಸಹ ಇದೇ ವಿಚಾರಧಾರೆಗೆ ಬದ್ಧರಾಗಿ ವಿವಿಧ ಬಗೆಯ ಸಾಮಾಜಿಕ - ಆರ್ಥಿಕ ಬದಲಾವಣೆಯ ಹೋರಾಟಗಳನ್ನು ಹಮ್ಮಿಕೊಳ್ಳತೊಡಗಿದರು.

 

ಸಮಾಜವಾದಿ ಯುವಜನ ಸಭಾದ ವತಿಯಿಂದ ನಿರಂತರ ಚಟುವಟಿಕೆಗಳು ನಡೆದವು. ಹದಿಹರೆಯದ ನಾವೆಲ್ಲ ಈ ಹಿರಿಯ ಸಂಗಾತಿಗಳೊಡನೆ ಸೇರಿ, ಸಾಮೂಹಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬೆರೆತು ದುಡಿದ ಅಮೃತಕ್ಷಣಗಳ ನೆನಪು ಈಗಲೂ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ.ಜಾತಿವಿನಾಶ, ಮೂಢನಂಬಿಕೆಗಳ ವಿರೋಧ, ಸಮಾನತೆ, ಅನ್ಯಾಯಗಳಿಗೆ ಪ್ರತಿಭಟನೆ - ಮುಂತಾದ ಕಾರ್ಯಕ್ರಮಗಳ ನಿಯೋಜನೆಯಲ್ಲಿ ನಂಜುಂಡಸ್ವಾಮಿ ಯಾವಾಗಲೂ ಮುಂದೆ. ಅವರ ನಿರ್ದೇಶನದಲ್ಲಿ ಕಪ್ಪು ಬಾವುಟಗಳ ಪರ್ವ ಪರಿಣಾಮಕಾರಿಯಾಗಿ ಆರಂಭವಾಯಿತು.

 

ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಪ್ರತಿಭಟನೆ, ಮೇಲುಜಾತಿಯ ಸಮ್ಮೇಳಗಳಿಗೆ ವಿರೋಧ ಹಾಗೂ ಜನಜಾಗೃತಿಯ ಬಗೆ ಬಗೆಯ ಯೋಜನೆಗಳು ಸಿದ್ಧವಾದುವು. ಆಗ ನಮ್ಮ ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ.1972ರ ಬೇಸಿಗೆ ಎಂದು ಕಾಣುತ್ತದೆ. ನಾನು ಆಗತಾನೆ ಕೊಡಗಿನಲ್ಲಿ ಉಪನ್ಯಾಸಕ. ರಜೆಯಲ್ಲಿ ಊರಿಗೆ ಬಂದಿದ್ದೆ. ಎಂಡಿಎನ್ ಅವರ ಕರೆಯ ಮೇರೆಗೆ ನಾವೆಲ್ಲ ಬೆಂಗಳೂರಿನ ಜನತಾ ಬಜಾರ್ ಮುಂದೆ ಸಾರ್ವಜನಿಕರ ಬೂಟು ಪಾಲಿಶ್ ಮಾಡಿ ಬರಗಾಲ ಪರಿಹಾರ ನಿಧಿ ಸಂಗ್ರಹಿಸಿದೆವು.

 

ಅದೇ ಹುಮ್ಮಸ್ಸಿನಲ್ಲಿ ಈ ಭಾಗದ ಹಳ್ಳಿಗಳಲ್ಲಿ ಹಣದ ಜೊತೆಗೆ ಅಲ್ಲಿನ ದನಕರುಗಳಿಗೆ ಮೇವು ಸಂಗ್ರಹಿಸುವ ಯೋಜನೆ ರೂಪಿಸಿದರು. ತಾಲ್ಲೂಕಿನಲ್ಲೇ ದೊಡ್ಡ ಗ್ರಾಮವಾದ ನನ್ನೂರಿನಲ್ಲಿ ನಾವೆಲ್ಲ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹುಲ್ಲಿನ ಬೆಟ್ಟವೇ ನಿರ್ಮಾಣವಾಯಿತು.ಅದೇ ಹೊತ್ತಿಗೆ ಪ್ರಧಾನಮಂತ್ರಿ ಇಂದಿರಾಗಾಂಧಿ ಉಡುಪಿಯ ಕೃಷ್ಣದೇಗುಲಕ್ಕೆ ಭೇಟಿಕೊಡುವ ಸಲುವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಜ್ಜೆ ಊರುತ್ತಿದ್ದಂತೆ `ಲೋಹಿಯಾ ಜಿಂದಾಬಾದ್. ಗೋ ಟು ಬೀದರ್: ನಾಟ್ ಟು ಉಡುಪಿ~ ಎಂಬ ಘೋಷಣೆಗಳು ಕಪ್ಪು ಬಾವುಟ ಮತ್ತು ಕರಪತ್ರಗಳ ಸಹಿತ ಮೊಳಗಿದವು. ಇಂದಿರಾ ಅಕ್ಷರಶಃ ಕಂಗಾಲಾದರು; ಅವರ ಮುಖ ಕಪ್ಪಿಟ್ಟಿತು. ಅಷ್ಟು ವ್ಯವಸ್ಥಿತವಾಗಿ ಎಂಡಿಎನ್ ಇದನ್ನೆಲ್ಲಾ ರೂಪಿಸಿದ್ದರು.ಇದರ ಬೆನ್ನಲ್ಲೇ ಜೆ.ಪಿ. ಚಳವಳಿ: ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧವಾಗಿ ನಡೆದ ಮೌನ ಮೆರವಣಿಗೆ ಮತ್ತು ಪ್ರತಿಭಟನೆಗಳು. ಕೊನೆಗೂ ತುರ್ತುಪರಿಸ್ಥಿತಿಯ ಬಿಗಿ ಸಡಿಲಗೊಂಡು ಹೊಸಚುನಾವಣೆಗೆ ಸಿದ್ಧತೆಗಳಾದವು. ಅಷ್ಟುಹೊತ್ತಿಗೆ ನಾನು ಬೆಂಗಳೂರು ವಿಶ್ವವಿದ್ಯಾಲಯ ಸೇರಿದ್ದೆ; ಲಂಕೇಶ್ ಅಲ್ಲೇ ಇದ್ದರು.ನಂಜುಂಡಸ್ವಾಮಿ, ಕೆ.ಎಂ. ಶಂಕರಪ್ಪ, ಲಂಕೇಶ್ ಮತ್ತು ನಾನು ಒಂದು ವಾರ ಪೂರ್ತಿ ಕಾಂಗ್ರೆಸ್‌ಗೆ ವಿರುದ್ಧವಾಗಿ ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲಿ ಸಮಾಜವಾದಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದೆವು. ನನಗಿದು ಮರೆಯಲಾಗದ ಅನುಭವ. ದಾವಣಗೆರೆಯಲ್ಲಿ ಆ ಸಂಜೆ ಸುಮಾರು ಹನ್ನೆರಡು ಸಾವಿರ ಜನರ ಸಭೆ. ಶಿವಮೊಗ್ಗದಲ್ಲಿನ ಸಡಗರ ಇನ್ನೂ ದೊಡ್ಡದಿತ್ತು. ಹದಿನೈದು ಸಾವಿರಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು.

 

ನಮ್ಮ ನಾಲ್ವರಲ್ಲಿ ಅಂಕಿಅಂಶಗಳ ಸಹಿತ ಪರಿಣಾಮಕಾರಿಯಾಗಿ ಮಾತನಾಡುವ ಶಕ್ತಿ ನಂಜುಂಡಸ್ವಾಮಿ ಅವರಿಗೆ ಮಾತ್ರ ಸಿದ್ಧಿಸಿತ್ತು. ಆಗಿನ ನಮ್ಮ ಅಭ್ಯರ್ಥಿಗಳು ಕೆ.ಜಿ. ಮಹೇಶ್ವರಪ್ಪ ಮತ್ತು ಜೆ.ಎಚ್. ಪಟೇಲ್. ಈ ಚುನಾವಣಾ ಸುತ್ತಾಟದ ಅವಧಿಯಲ್ಲಿ ಶಿವಮೊಗ್ಗೆಯ ಬೃಂದಾವನ ಹೋಟೆಲ್‌ನಲ್ಲಿ ನಮ್ಮ ಠಿಕಾಣಿ: ನಾವೆಲ್ಲ ಸೆಕೆಗೆ ನಮ್ಮ ಷರ್ಟ್ ತೆಗೆದು ನಿರಾಳವಾಗಿರುತ್ತಿದ್ದೆವು.ಆದರೆ, ಎಂಡಿಎನ್ ಅವರ ಉಡುಪಿನ ಶಿಸ್ತೇ ಶಿಸ್ತು. ಬೆಳಿಗ್ಗೆ ಸ್ನಾನದ ಕೋಣೆಗೆ ಠೀಕಾಗಿಯೇ ಹೊರಟರು. ಸ್ನಾನ ಮುಗಿಸಿ ಹೊಸ ಉಡುಪಿನಲ್ಲಿ ಅಲ್ಲಿಂದಲೇ ಸರ್ವಾಲಂಕಾರಭರಿತರಾಗಿ ಹೊರಬಂದರು.ಮುಂದೆ ನಂಜುಂಡಸ್ವಾಮಿ ರೈತ ಹೋರಾಟದಲ್ಲಿ ತಮ್ಮ ಇಡೀ ಬದುಕನ್ನು ಸವೆಸಿದ ಇತಿಹಾಸವನ್ನು ಕರ್ನಾಟಕದ ಜನತೆ ಚೆನ್ನಾಗಿ ಬಲ್ಲದು. ಇದ್ದುಳ್ಳ ಕುಟುಂಬ ವ್ಯವಸ್ಥೆಯ ಹಿನ್ನೆಲೆಯಿಂದ ಬಂದ ಈ ಪ್ರಬುದ್ಧ ವ್ಯಕ್ತಿ ಶ್ರಮಜೀವಿಗಳ ಸಂಕಷ್ಟದಲ್ಲಿ ಲೀನವಾಗಿ ಅಹರ್ನಿಶಿ ದುಡಿದು ಹಣ್ಣಾದರು. ಜಾತಿವಿನಾಶದಲ್ಲಿ ಗಾಢ ನಂಬಿಕೆ ಇರಿಸಿದ್ದ ಅವರು ತಮ್ಮ ಜಾತಿಯ ಚೌಕಟ್ಟಿನಿಂದ ಆಚೆಗೇ ಜೀವನಸಂಗಾತಿಯನ್ನು ಆಯ್ಕೆಮಾಡಿಕೊಂಡರು.

 

ಯಾವ ಕಾರಣಕ್ಕೂ ಎಂದೂ ವಿಚಲಿತರಾಗದೆ, ತಮ್ಮ ಬದುಕಿನ ಗುರಿಯೆಡೆಗೆ ಮುನ್ನುಗ್ಗಿ ವಿಶ್ವಮಟ್ಟದಲ್ಲಿ ರೈತಾಪಿ ಶ್ರಮಜೀವಿಗಳೆಲ್ಲರ ಗೆಲುವಿನ ದಿಕ್ಕಿನಲ್ಲಿ ಸತತವಾಗಿ ಪ್ರಯತ್ನಶೀಲರಾದ ಅವರ ಸುದೀರ್ಘ ಪ್ರಯಾಣ ಆಶ್ಚರ್ಯಕರವಾದುದು.ಗಾಂಧಿ ಪ್ರಭಾವಕ್ಕೆ ಒಳಗಾಗಿ ಕ್ರಿಯಾಶೀಲರಾದ ನಂಜುಂಡಸ್ವಾಮಿ ಅವರು ಹೆಚ್ಚಿನ ಬದ್ಧತೆಯಿಂದಲೇ ದುಡಿದಿದ್ದಾರೆ. ಆದರೆ, ಬದುಕಿನ ಆದರ್ಶಗಳ ಕಾರಣದಿಂದಾಗಿಯೇ ತಮ್ಮಡನೆ ಆತ್ಮೀಯವಾಗಿ ನಡೆದುಬಂದವರ ಜೊತೆಯಲ್ಲಿ ಅವರು ಸಾಕಷ್ಟು ಪ್ರೀತಿಯಿಂದ ಇದ್ದು, ಅವರನ್ನು ತಿದ್ದುವ, ಕ್ಷಮಿಸುವ ಸಣ್ಣಪ್ರಮಾಣದ ಹೆಂಗರುಳನ್ನು ಹೊಂದಿದ್ದರೂ ಇಡೀ ನೇಗಿಲಯೋಗಿ ಸಮುದಾಯ ಇನ್ನೂ ಹೆಚ್ಚಿನ ಒಳ್ಳೆಯದನ್ನು ಕಾಣಲು ಸಾಧ್ಯವಾಗುತ್ತಿತ್ತೆಂದು ಹಲವರು ಭಾವಿಸುತ್ತಾರೆ. ಈ ಖಂಡಿತವಾದಿ ಒಂದಿಷ್ಟು ಸಿನಿಕರಾಗುತ್ತಿದ್ದಾರೆಯೇ ಎಂದು ಅನೇಕಸಲ ನಮಗೆಲ್ಲ ಅನ್ನಿಸುತ್ತಿತ್ತು.ಆದರೆ, ಬದಲಾವಣೆಯ ದಿಕ್ಕಿನ ಅವರ ಕನಸುಗಳು ಮತ್ತು ಆಶಾವಾದ ಮಾತ್ರ ಸದಾ ಅಚ್ಚಹಸಿರಿನಿಂದ ಕಂಗೊಳಿಸುತ್ತಿದ್ದವು; ರೈತ ಸಂಘಟನೆಗೂ ಮೊದಲೇ ವಿಚಾರವಾದಿ ಚಳವಳಿಗಳ ಅಬ್ಬರದ ನಡುವೆ ಇವರು ಸದಾ ಗೆಲುವಿನಲ್ಲಿಯೇ ಮುನ್ನುಗ್ಗುವ ನೇತಾರರಾಗಿದ್ದರು.ಚುನಾವಣೆಗಳ ಕಾಲದಲ್ಲಿ ಸಾಹಿತಿಗಳು, ಪತ್ರಕರ್ತರು, ಸಮಾಜ ಸುಧಾರಣಾವಾದಿಗಳನ್ನು ಅಭ್ಯರ್ಥಿಗಳನ್ನಾಗಿಸುವ ಗಂಭೀರ ಆಲೋಚನೆಯಲ್ಲಿ ಮುಳುಗಿರುತ್ತಿದ್ದರು. ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಂಚುವಾಗ ಪೂರ್ಣಚಂದ್ರ ತೇಜಸ್ವಿ (ಚಿಕ್ಕಮಗಳೂರು), ಲಂಕೇಶ್ (ಶಿವಮೊಗ್ಗ), ಕಾಳೇಗೌಡ ನಾಗವಾರ (ಕನಕಪುರ), ದೇವನೂರ ಮಹಾದೇವ ಅಥವಾ ನಂಜುಂಡಸ್ವಾಮಿ (ಮೈಸೂರು)- ಎಂದೆಲ್ಲಾ ನಿರ್ಧರಿಸಿ, ಪತ್ರಿಕಾ ಹೇಳಿಕೆಗಳನ್ನು ನೀಡಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಿದ್ದರು. ವಿಧಾನಸಭಾ ಚುನಾವಣೆ ಕಾಲಕ್ಕೆ ಮುಂದಿನ ಮಂತ್ರಿಮಂಡಲದ ಛಾಯಾಸಂಪುಟ ತಾವೇ ರಚಿಸುತ್ತಿದ್ದರು.

 

ಈ ಬಗೆಯ ಕನಸುಗಳಲ್ಲಿ ಮುಂದೆ `ಪ್ರಗತಿರಂಗ~ದ ನೇತಾರರಾದ ಲಂಕೇಶರೂ ಸೇರಿಕೊಂಡರು. ಈ `ಕನಸುಗಾರಿಕೆ~ ಅಥವಾ ಭ್ರಮಾಲೋಕದ ನಡುವೆ ವಾಸ್ತವದ ಸಂಗತಿಗಳು ಕ್ರಮೇಣ ನಮಗೆಲ್ಲಾ ಮನವರಿಕೆಯಾಗತೊಡಗಿದವು.

 

ಅನ್ನಪಾನ ವಿಚಾರದಲ್ಲಿ ತೀರಾ ಮಿತವಾಗಿದ್ದ ಈ ನಮ್ಮ ನಾಯಕರು ಅತಿ ಧೂಮಪಾನ ಆಸಕ್ತರಾಗಿದ್ದ ಬಗ್ಗೆ ನಮಗೆಲ್ಲ ತೀವ್ರ ಆತಂಕವಿತ್ತು. ಆರೋಗ್ಯಕ್ಕೆ ತೀರಾ ಹಾನಿಕರವಾದ ಈ ವಿಷಯದ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ನಮ್ಮ ಚಿಂತನಶೀಲರನೇಕರು ತೋರುತ್ತಾರಲ್ಲ ಎಂದು ನಾನಂತೂ ಸದಾ ನಿಟ್ಟುಸಿರುಬಿಟ್ಟಿದ್ದೇನೆ.ಶ್ರಮಿಕರ ಕಷ್ಟಕ್ಕೆ ಥಟ್ಟನೆ ಸ್ಪಂದಿಸುತ್ತಿದ್ದ ಎನ್.ಡಿ. ಸುಂದರೇಶ್ ಅವರು, ನಂಜುಂಡಸ್ವಾಮಿ ಆದರ್ಶಗಳಿಗೆ ಅಕ್ಷರಶಃ ಮಾರುಹೋಗಿದ್ದರ ಪರಿಣಾಮವಾಗಿ, ಎಂದೂ ಎದುರಾಡದೆ ಉತ್ಸಾಹದಿಂದಲೇ ಬದುಕಿನ ಕೊನೆಯ ಉಸುರಿನತನಕ ಸಹಕರಿಸುತ್ತಲೇ ರೈತಸಂಘದ ಜೀವಂತಿಕೆಗಾಗಿ ಅಪಾರವಾಗಿ ದುಡಿದರು.ಮುಕ್ತ ಸಂವಾದ, ಒಡನಾಡಿಗಳ ಅಧ್ಯಯನ ಶಿಬಿರಗಳಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆಯೇ ಪ್ರಶ್ನೆ ಕೇಳಲು ಎದ್ದವರಿಗೆ `ಕೂತ್ಕೋಳ್ಳಿ, ಕೂತ್ಕೋಳ್ಳಿ - ಓದ್‌ಕೊಂಡ್ ಬನ್ನಿ~ ಎಂದು ಹೇಳುತ್ತಾ ಎಲ್ಲರನ್ನೂ ತೆಪ್ಪಗಾಗಿಸುತ್ತಿದ್ದರು.ಕೆಲಕಾಲ ಒಟ್ಟಿಗೆ ದುಡಿದ ನಂತರ ಕೆಲವರು ತಾವೇ ಇವರಿಂದ ಬೇರೆಬೇರೆ ಕಾರಣಕ್ಕೆ ದೂರವಾಗತೊಡಗಿದರು. ಮಾನಸಿಕವಾಗಿ ಕೊಳಕರು; ವ್ಯವಹಾರ ನಿಪುಣರು, ಭ್ರಷ್ಟರು, ಜಾತಿವಾದಿಗಳನ್ನು ಅವರು ಎಂದೂ ಸಹಿಸಿಕೊಳ್ಳಲಿಲ್ಲ; ಅಂತಹವರನ್ನು ತಾವೇ ಹೊರಹಾಕಿದರು.ಆತ್ಮೀಯರ ಭಿನ್ನಮತವೂ ಸಹ ಕೆಲವೊಮ್ಮೆ ಒಂದು ಬಗೆಯ ಸೊಗಸೆಂದು ಈ ಗಾಂಧಿವಾದಿ ಭಾವಿಸಿದ್ದಲ್ಲಿ ಅದರ ಉತ್ತಮ ಪರಿಣಾಮ ಕನ್ನಡಿಗರಿಗೆ ಹೆಚ್ಚಾಗಿ ಆಗುತ್ತಿತ್ತು. ಒಂದು ಕಾಲಕ್ಕೆ ತಮ್ಮನ್ನು ನೆರಳಿನಂತೆ ಅನುಸರಿಸಿ, ಆರಾಧಿಸಿದ ಒಡನಾಡಿಗಳು ಅಗಲುವ ಸಂದರ್ಭಗಳು ಎದುರಾದಾಗ ಸಹ ಅವರು ಹೆಂಗರುಳಿನಿಂದ ಸ್ಪಂದಿಸಿ, ತೇವವಾದ ಕಣ್ಣುಗಳಿಂದ ನೋವನುಭವಿಸಿದ ಘಟನೆಗಳು ಇದ್ದಂತೆ ಕಾಣುವುದಿಲ್ಲ.ಏಳು ಬೀಳು, ಆತಂಕ, ಆನಂದ, ನಿಸ್ಸಹಾಯಕತೆ, ಸಂಘರ್ಷ ಮತ್ತು ತಾಕಲಾಟಗಳ ನಡುವೆಯೂ ನಂಜುಂಡಸ್ವಾಮಿ ಅವರು ಸಾಕ್ಷಾತ್ ನೀಲಕಂಠನ ಜಾಯಮಾನದವರೇ ಆಗಿ ಎಲ್ಲವನ್ನೂ ನುಂಗಿಕೊಂಡು ಮುಂದಿನ ಹೋರಾಟಕ್ಕೆ ದೃಢಮನಸ್ಸಿನಿಂದ ಸಿದ್ಧರಾಗುತ್ತಿದ್ದರು. ಈ ಬಗ್ಗೆ ಇವರಿಗೆ ಸಾಟಿಯಾಗುವ ಕ್ರಿಯಾಶಾಲಿಗಳು ಇಲ್ಲವೆನ್ನುವಷ್ಟು ಕಡಿಮೆ.`ಗಾಂಧೀಜಿಗಿಂತ ಭಿನ್ನವಾಗಿ, ಉನ್ನತವಾಗಿ ಆಲೋಚಿಸಿ ಉತ್ತಮ ಕಾರ್ಯಸೂಚಿಯನ್ನು ಸಿದ್ಧಪಡಿಸುವುದು ಸುಲಭ; ಆದರೆ, ತಾವು ಹೇಳಿದ್ದನ್ನು ಚೆನ್ನಾಗಿ ಕಾರ್ಯಗತಗೊಳಿಸುವ ದೊಡ್ಡಶಕ್ತಿ ಇರುವುದು ಆ ಮಹಾತ್ಮನಿಗೆ ಮಾತ್ರ~- ಎಂಬುದನ್ನು ತಮ್ಮ ತಾರುಣ್ಯದಲ್ಲಿಯೇ ಲೋಹಿಯಾ ಮನಗಂಡಿದ್ದರು. ಹಾಗೆ ಹಮ್ಮಿಕೊಂಡ ಯೋಜನೆಗಳಲ್ಲಿ ವಿಚಲಿತರಾಗದೆ ದುಡಿದು ಗೆಲ್ಲುವ ಶಕ್ತಿಯನ್ನು ನಂಜುಂಡಸ್ವಾಮಿ ಅವರಂತಹ ಪ್ರಾಮಾಣಿಕ ಕಾರ್ಯಸಾಧಕರಲ್ಲಿ ಮಾತ್ರ ನಾವು ಸ್ಪಷ್ಟವಾಗಿ ಕಾಣಬಲ್ಲೆವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry