ರೈತ ವಿರೋಧಿ ನೀತಿಗೆ ಕಿಡಿ

7

ರೈತ ವಿರೋಧಿ ನೀತಿಗೆ ಕಿಡಿ

Published:
Updated:

ಬೆಂಗಳೂರು: `ರೈತರು ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗಬೇಕು. ತಮ್ಮ ಉಳಿವಿಗಾಗಿ ಹೋರಾಡಬೇಕು~ ಎಂದು ಎಸ್‌ಯುಸಿಐ (ಸಿ) ಪಾಲಿಟ್ ಬ್ಯೂರೊ ಸದಸ್ಯ ಅಸಿತ್ ಭಟ್ಟಾಚಾರ್ಯ ಹೇಳಿದರು.

ರೈತ ಕೃಷಿ ಕಾರ್ಮಿಕರ ಸಂಘಟನೆಯು ನಗರದ ಬನ್ನಪ್ಪ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ರೈತ ಕೃಷಿ ಕಾರ್ಮಿಕರ ಪ್ರಥಮ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

`ಹಳ್ಳಿಗಳಲ್ಲಿನ ಜನರ ಬದುಕು ನಿಜಕ್ಕೂ ನರಕವಾಗಿದೆ. ವಾಸಿಸಲು ಯೋಗ್ಯವಾದ ಪರಿಸ್ಥಿತಿ ಹಳ್ಳಿಗಳಲ್ಲಿಯಿಲ್ಲ. ಹಳ್ಳಿಗಳಲ್ಲಿ ಜನರ ಬದುಕು ದುರ್ಭರವಾಗಿದೆ. ಸರ್ಕಾರದ ನೀತಿಯಿಂದಾಗಿ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ದಿವಾಳಿಯಾಗುತ್ತಿದ್ದಾರೆ~ ಎಂದು ಹೇಳಿದರು.

ಎಸ್‌ಯುಸಿಐ(ಸಿ)ನ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ಮಾತನಾಡಿ, `ರಿಲಾಯನ್ಸ್, ಟಾಟಾ, ಬಿರ್ಲಾ, ಅಂಬಾನಿ ಅಂತಹ ಕಂಪೆನಿಗಳು ದೇಶ ಲೂಟಿ ಮಾಡುತ್ತಿವೆ~ ಎಂದರು.

`ಬಹುರಾಷ್ಟ್ರೀಯ ಕಂಪೆನಿಗಳು ದೇಶವನ್ನು ಲೂಟಿ ಮಾಡಿ ದಿನದಿಂದ ದಿನಕ್ಕೆ ಹೆಚ್ಚು ಶ್ರೀಮಂತವಾಗುತ್ತಿವೆ. ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ. ಇದಕ್ಕೆ ಒಂದು ಪಕ್ಷ ಕಾರಣವಲ್ಲ.  ಎಲ್ಲ ರಾಜಕೀಯ ಪಕ್ಷಗಳು ಕಾರಣವಾಗಿವೆ~ ಎಂದರು.

`ಮೊದಲು ರೈತರ ಆತ್ಮಹತ್ಯೆಗಳು ಇಷ್ಟು ಆಗುತ್ತಿರಲಿಲ್ಲ. ಏಕೆಂದರೆ, ಆಗ ಬೀಜ, ಗೊಬ್ಬರ, ಕೀಟನಾಶಕಗಳ ಬೆಲೆ ಏರಿರಲಿಲ್ಲ. ಆದರೆ, ಈಗ ಬೀಜ ಗೊಬ್ಬರಗಳಿಗಾಗಿ ಗುಂಡಿಗೆ ಎದೆ ಒಡ್ಡುವ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆಗ ಮಧ್ಯವರ್ತಿಗಳದೇ ಮೇಲುಗೈ ಇತ್ತು. ಈಗ ಈ ಮಧ್ಯವರ್ತಿಗಳ ಕೆಲಸವನ್ನು ಬಹುರಾಷ್ಟ್ರೀಯ ಕಂಪೆನಿಗಳು ನಿರ್ವಹಿಸುತ್ತಿವೆ~ ಎಂದರು. 

ಚಿಕ್ಕಲಾಲ್‌ಬಾಗ್‌ನಿಂದ  ನೂರಾರು ಸಂಖ್ಯೆಯಲ್ಲಿ ರೈತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರೈತ ಕೃಷಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಡಾ.ಟಿ.ಎಸ್. ಸುನೀತ್‌ಕುಮಾರ್, ಕಾರ್ಯದರ್ಶಿ ಎಚ್. ವಿ.ದಿವಾಕರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry