ಭಾನುವಾರ, ಮಾರ್ಚ್ 7, 2021
29 °C
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಕಿವಿಮಾತು

ರೈತ ಸಂಘಕ್ಕೆ ರಾಜಕೀಯದ ಗೊಡವೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತ ಸಂಘಕ್ಕೆ ರಾಜಕೀಯದ ಗೊಡವೆ ಬೇಡ

ಬೆಂಗಳೂರು: ‘ಪ್ರಜಾಪ್ರಭುತ್ವದ ಅರ್ಥ ಸಂಪೂರ್ಣ­ವಾಗಿ ಬದಲಾಗಿರುವ ಈ ದಿನಗಳಲ್ಲಿ ರೈತ ಸಂಘಕ್ಕೆ ರಾಜಕೀಯದ ಗೊಡವೆ ಬೇಡ’ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಕಿವಿಮಾತು ಹೇಳಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಕೇಂದ್ರ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.‘ವೈಯಕ್ತಿಕ ಸ್ವಾತಂತ್ರ್ಯದ ರಾಜನೀತಿಯನ್ನು ಅಳವಡಿಸಿಕೊಂಡ ಸಂವಿಧಾನ ವ್ಯವಸ್ಥೆ ನಮ್ಮದು. ಆದರೆ, ಸಂವಿಧಾನದ ಅರ್ಥದಲ್ಲಿ ಯಾರಿಗೆ ತಾನೆ ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಕೇಳಿದ ಅವರು, ‘ಪ್ರಜಾಪ್ರಭುತ್ವದ ಮೂಲ ಆಶಯಕ್ಕೂ ಈಗ ನಡೆಯುತ್ತಿರುವ ವಿದ್ಯಮಾನಕ್ಕೂ ಯಾವ ಸಂಬಂಧವೂ ಇಲ್ಲ’ ಎಂದು  ಅವರು ವಿಶ್ಲೇಷಿಸಿದರು.‘ರಾಜಕೀಯ ವ್ಯಕ್ತಿಗಳಿಗೆ ಎಲ್ಲೆಡೆ ಅಷ್ಟೊಂದು ಮಹತ್ವವನ್ನು ಏಕೆ ಕೊಡಬೇಕು’ ಎಂದು ಪ್ರಶ್ನಿಸಿದ ಅವರು, ‘ರಾಜಕೀಯ ವ್ಯಕ್ತಿಗಳನ್ನು ಎಲ್ಲಿ ಇಡ­ಬೇಕಿತ್ತೋ ಅಲ್ಲಿಡದೆ ನಾವು ಮೊದಲಿನಿಂದಲೂ ತಪ್ಪು ಮಾಡುತ್ತಾ ಬಂದಿದ್ದೇವೆ’ ಎಂದು ಪ್ರತಿಪಾದಿಸಿದರು.‘ರಾಜಕಾರಣಿಗಳನ್ನು ಬಲಹೀನಗೊಳಿಸುವುದು ಇಂದಿನ ಅಗತ್ಯವಾಗಿದೆ. ಆದರೆ, ಸಮಾಜ ಕೂಡ ಸಂಪತ್ತು ಮತ್ತು ಅಧಿಕಾರವನ್ನೇ ಪೂಜಿಸ ತೊ­ಡ­ಗಿದೆ’ ಎಂದು ಹೇಳಿದರು. ‘ಅನ್ನದಾತರಿಗೇ ಸೌಲಭ್ಯ ಸಿಗದಂತಹ ಈ ದೇಶದಲ್ಲಿಇನ್ನು ಯಾರಿಗೆ ಮರ್ಯಾದೆ ಇದೆ’ ಎಂದು ಅವರು ವಿಷಾದದಿಂದ ಪ್ರಶ್ನಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ‘ಮಂಡ್ಯ ಭಾಗದ ಶಾಸಕರೊಬ್ಬರು ಕಾಂಗ್ರೆಸ್‌ ಪಕ್ಷಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಮೂಲಕ ರೈತರ ಭರವಸೆಯನ್ನು ಸುಳ್ಳು ಮಾಡಿದರು’ ಎಂದು ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅವರ ಹೆಸರು ಪ್ರಸ್ತಾಪಿಸದೆ, ಅವರನ್ನು ಪರೋಕ್ಷವಾಗಿ ಟೀಕಿಸಿದರು.‘ಸರ್ಕಾರ ಘೋಷಣೆ ಮಾಡಿರುವಂತೆ ಕಬ್ಬಿನ ಬೆಂಬಲ ಬೆಲೆ ನೀಡುವ ವ್ಯವಸ್ಥೆ ಮಾಡದಿದ್ದರೆ ಜೂನ್‌ 16ರಿಂದ ನಡೆಯಬೇಕಿರುವ ಅಧಿವೇಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ರೈತರ ಬಾಕಿ ಚುಕ್ತಾ ಮಾಡಿದ ನಂತರವೇ ಸರ್ಕಾರ ಅಧಿವೇಶನ ನಡೆಸಬೇಕು’ ಎಂದು ಹೇಳಿದರು.ನಿರ್ಮಾಪಕ ಸಾ.ರಾ.ಗೋವಿಂದು ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ‘ರೈತರ ಜತೆ ನಾವಿದ್ದೇವೆ’ ಎಂದು ಘೋಷಿಸಿದರು.

ಹಿರಿಯ ರೈತ ಮುಖಂಡ ಕಡಿದಾಳ್‌ ಶ್ಯಾಮಣ್ಣ, ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.­ಆರ್. ಬಸವರಾಜಪ್ಪ, ಖಜಾಂಚಿ ಡಾ.ಚಿಕ್ಕಸ್ವಾಮಿ, ಪತ್ರಕರ್ತ ಎಚ್‌.ಆರ್‌. ರಂಗನಾಥ್‌ ಹಾಜರಿದ್ದರು.‘ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಪ್ರಜಾಪ್ರಭುತ್ವ’

‘ನಮ್ಮ ಇಂದಿನ ಪ್ರಜಾಪ್ರಭುತ್ವವು ಕೆಲವರಿಂದ, ಕೆಲವರಿಗಾಗಿ ಮತ್ತು ಕೆಲವರಿ­ಗೋಸ್ಕರ ನಡೆಯುತ್ತಿರುವ ವ್ಯವಸ್ಥೆಯಾಗಿದೆ. ರಾಜಕಾರಣಿ­ಗಳಿಗೆ ಅತಿಯಾದ ಮಹತ್ವ ಸಿಕ್ಕಿದ್ದು, ಜನಸೇವೆ ಮಾಡಬೇಕಾದವರು ಜನತಾ ಮಾಲೀಕರಾಗಿದ್ದಾರೆ’ ಎಂದು ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.