ರೈತ ಸಂಘದಿಂದ ಬೈಕ್ ರ‌್ಯಾಲಿ

7

ರೈತ ಸಂಘದಿಂದ ಬೈಕ್ ರ‌್ಯಾಲಿ

Published:
Updated:

ದಾವಣಗೆರೆ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಶನಿವಾರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೈಕ್ ರ‌್ಯಾಲಿ ನಡೆಸಿ, ಪ್ರತಿಭಟಿಸಲಾಯಿತು.ಮಹಾತ್ಮ ಗಾಂಧಿ ವೃತ್ತದಿಂದ ಹೊರಟ ಬೈಕ್ ರ‌್ಯಾಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರುರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ಮಾತನಾಡಿ, ರೈತರ ಬೆಳೆ ಮತ್ತು ಹಿತ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಸಂಘದ ಕಾನೂನು ಸಲಹೆಗಾರ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿ ಕಾವೇರಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಜಲಾಯನ ಪ್ರದೇಶಗಳ ಸ್ಥಿತಿಗತಿ ಅಧ್ಯಯನ ನಡೆಸದೇ ಪ್ರಧಾನ ಮಂತ್ರಿ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ, ರಾಜ್ಯ ಸರ್ಕಾರವು ಕೇಂದ್ರದ ನದಿ ನೀರು ಪ್ರಾಧಿಕಾರ  ಹಾಗೂ  ಸುಪ್ರೀಂ ಕೋರ್ಟ್ ಮುಂದೆ ಕಾವೇರಿ ಕಣಿವೆಯ ರೈತರ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ಮನದಟ್ಟು  ಮಾಡುವಲ್ಲಿ ಹಾಗೂ ಕಾನೂನು ಹೋರಾಟದಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ, ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಘಟಕದ ಅಧ್ಯಕ್ಷ ಇಟಗಿ ಬಸವರಾಜಪ್ಪ, ಕಾರ್ಯಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ, ಮುಖಂಡರಾದ ಚಿಕ್ಕನಹಳ್ಳಿ ಮಲ್ಲೆೀಶಪ್ಪ, ಈಚಘಟ್ಟದ ರುದ್ರೇಶ್, ನಾಗರಕಟ್ಟೆ ಬಸವರಾಜ್, ಕೊಕ್ಕನೂರು ಸಿಡ್ಲಪ್ಪ, ಆವರಗೆರೆ ಎಂ.ಡಿ. ಹನುಮಂತಪ್ಪ, ಕಳವೂರು ಬಸವರಾಜಪ್ಪ, ಮಲ್ಲಶೆಟ್ಟಿಹಳ್ಳಿ ಮಂಜುನಾಥ್, ಪಾಮೇನಹಳ್ಳಿ ಲಿಂಗರಾಜ್, ರುದ್ರನಕಟ್ಟೆ ಪರಮೇಶ್ವರಪ್ಪ ಪಾಲ್ಗೊಂಡಿದ್ದರು.ನೀರು ಬಿಡುವುದು ನಿಲ್ಲಿಸಿ

ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕನ್ನಡ ಕ್ರಿಯಾ ಸಮಿತಿ ದಾವಣಗೆರೆ ವಿಭಾಗದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಅದರಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ತಂಜಿಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಸೈಯದ್ ಸೈಫುಲ್ಲಾ, ಉಪಾಧ್ಯಕ್ಷರಾದ  ಎಸ್.ಎಚ್. ಅನ್ವರ್ ಸಾಬ್, ಬಿ. ರಫೀಕ್, ಪ್ರಧಾನ ಕಾರ್ಯದರ್ಶಿ ಚಮನ್ ಸಾಬ್, ಕಚೇರಿ ಕಾರ್ಯದರ್ಶಿ ಜೆ. ಅಮಾನುಲ್ಲಾಖಾನ್, ಕಾರ್ಯದರ್ಶಿ ಜಿ. ಖಲೀಲುಲ್ಲಾ, ಸೈಯದ್ ಚಾರ್ಲಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry