ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

7

ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

Published:
Updated:
ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

ಕೃಷ್ಣರಾಜಪೇಟೆ: ರೈತರನ್ನು ತಮ್ಮ ಕಚೇರಿಯಲ್ಲಿ ಅವಹೇಳನಕಾರಿಯಾಗಿ ನಿಂದಿಸಿದರು ಎಂದು ಆರೋಪಿಸಿ ಪಾಂಡವಪುರ ಉಪವಿಭಾಗಾಧಿಕಾರಿ ಜಿ.ಪ್ರಭು ಅವರನ್ನು ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಅಡ್ಡಗಟ್ಟಿ ಪ್ರತಿಭಟಿಸಿದ ಘಟನೆ ಗುರುವಾರ ಪಟ್ಟಣದ ಮಿನಿವಿಧಾನಸೌಧದ ಬಳಿ ನಡೆದಿದೆ.ಕೆಲವು ದಿನಗಳ ಹಿಂದೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ರೈತ ರಾಮಚಂದ್ರೇಗೌಡರ ಆರ್‌ಟಿಸಿ ತಿದ್ದುಪಡಿಗೆ ಸಂಬಂಧಿಸಿದಂತೆ ರೈತ ಸಂಘದ ಕಾರ್ಯಕರ್ತರು ಪಾಂಡವಪುರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗಿದ್ದರು. ರೈತರು ತಿದ್ದುಪಡಿಗೆ ಅರ್ಜಿ ನೀಡಿ 6 ತಿಂಗಳು ಕಳೆದಿದ್ದರೂ ಕೆಲಸ ಆಗಿರಲಿಲ್ಲ. ಈ ಸಂಬಂಧ ಉಪವಿಭಾಗಾಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ, ಅವರು ರೈತ ಸಂಘದ ಕಾರ್ಯಕರ್ತರನ್ನು ಬ್ರೋಕರ್‌ಗಳು ಎಂದು ಕರೆದು ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ನಿಗದಿತ ಕಾರ್ಯಕ್ರಮದಂತೆ ಪ್ರತಿ ಗುರುವಾರ ಉಪವಿಭಾಗಾಧಿಕಾರಿಗಳು ತಾಲ್ಲೂಕಿಗೆ ಬರುವ ಬಗ್ಗೆ ಮಾಹಿತಿ ಹೊಂದಿದ್ದ ರೈತಸಂಘದ ಕಾರ್ಯಕರ್ತರು ಪಟ್ಟಣದ ಮಿನಿವಿಧಾನಸೌಧದ ಎದುರು ಧರಣಿ ಕುಳಿತರು. ಕಚೇರಿಗೆ ಬಂದ ಉಪವಿಭಾಗಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ರೈತಸಂಘದ ಕಾರ್ಯಕರ್ತರಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಕಂದಾಯ  ಅಧಿಕಾರಿಗಳಿಗೂ ರೈತರಿಗೂ ಸಾಕಷ್ಟು ಚರ್ಚೆ ನಡೆಯಿತು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದ ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್‌ರ ಪ್ರಯತ್ನವೂ ಫಲ ನೀಡಲಿಲ್ಲ.ರೈತರನ್ನು ಉದ್ದೇಶಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಯವರು ಭೂದಾಖಲೆ ತಿದ್ದುಪಡಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲಸದ ಒತ್ತಡದಲ್ಲಿದ್ದ ತಮ್ಮನ್ನು ಭೇಟಿ ಮಾಡಿದ ರೈತಸಂಘದ ಕಾರ್ಯಕರ್ತರಿಗೆ ತಮ್ಮ ಕೆಲಸ ಆಗಬೇಕಿರುವ ರೈತರು ನೇರವಾಗಿ ತಮ್ಮ ಕಚೇರಿಗೆ ಬರಬೇಕು, ಇಲ್ಲಿ ಯಾವುದೇ ಬ್ರೋಕರ್‌ಗಳ ಅಗತ್ಯವಿಲ್ಲ ಎಂದು ಮಾತ್ರ ಹೇಳಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದರು. ಇದರಿಂದ ತೃಪ್ತರಾದ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ತಾಲ್ಲೂಕು ರೈತಸಂಘದ ಅಧ್ಯಕ್ಷ ಮಂಚನಹಳ್ಳಿ ನಾಗಣ್ಣಗೌಡ, ಮಾಜಿ ಅಧ್ಯಕ್ಷ ಮುದ್ದುಕುಮಾರ್, ಜಿಲ್ಲಾ ಯುವಘಟಕದ ಗೌರವಾಧ್ಯಕ್ಷ ಮರುವನಹಳ್ಳಿ ಶಂಕರ್, ಚೌಡೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್, ಮುಖಂಡರಾದ ಕಾರಿಗನಹಳ್ಳಿ ಪುಟ್ಟೇಗೌಡ, ಕಾಳೇನಹಳ್ಳಿ ಸುರೇಶ್, ಅಕ್ಕಿಮಂಚನಹಳ್ಳಿ ಪುಟ್ಟೇಗೌಡ, ಮಹೇಶ್, ಹೊನ್ನೇಗೌಡ, ಚೌಡೇನಹಳ್ಳಿ ನಾರಾಯಣಸ್ವಾಮಿ, ಕಾರಿಗನಹಳ್ಳಿ ಕುಮಾರ್, ತೆಂಗಿನಘಟ್ಟ ಮಂಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry