ಗುರುವಾರ , ಜೂನ್ 24, 2021
22 °C

ರೈತ ಸಂಘ: ಪುಟ್ಟಣ್ಣಯ್ಯ, ಕೋಡಿಹಳ್ಳಿ ದೂರವಿಡಲು ನಂಜುಂಡಸ್ವಾಮಿ ಮೂಲಬಣ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ರೈತ ಸಂಘ ಮತ್ತು ಹಸಿರುವ ಸೇನೆ ರಾಜ್ಯ ಘಟಕವನ್ನು ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ದೂರವಿಟ್ಟು ಚುನಾವಣೇತರ ಸಂಘಟನೆಯನ್ನಾಗಿ ಬಲಪಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಮೂಲ ಬಣ) ನಿರ್ಧರಿಸಿದೆ.ಪ್ರೊ.ನಂಜುಂಡಸ್ವಾಮಿ ಅವರ ನಂತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಸುರೇಶಬಾಬು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ಸೋಮವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಮುಂಬರುವ ದಿನಗಳಲ್ಲಿ ಚುನಾವಣೆಗಳಿಂದ ದೂರ ಉಳಿದು ರೈತರ ದಿನನಿತ್ಯದ ಕೃಷಿ ಸಮಸ್ಯೆಗಳನ್ನು ಕೈಗೆತ್ತಿಕೊಂಡು ರಾಜ್ಯವ್ಯಾಪಿ ಹೋರಾಟ ಮಾಡಲು ತೀರ್ಮಾನಿಸಿದೆ.ಸಭೆಯ ನಂತರ ಸುದ್ದಿಗಾರರೊಂದಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ ಮಾತನಾಡಿ, ಪ್ರೊ.ನಂಜುಂಡಸ್ವಾಮಿ ಅವರ ಕಾಲದಿಂದಲೂ ಸಂಘಟನೆಯಲ್ಲಿದ್ದ ಹಿರಿಯರು ಇರುವ ಸುರೇಶಬಾಬು ಪಾಟೀಲ ನೇತೃತ್ವದ ರೈತ ಸಂಘವೇ ಮೂಲ ಸಂಘವಾಗಿದೆ. ಚಿತ್ರದುರ್ಗದ ಶರಣರ ಸಮ್ಮುಖದಲ್ಲಿ ಒಂದಾಗಿರುವ ಪುಟ್ಟಣ್ಣಯ್ಯ, ಚಂದ್ರಶೇಖರ ಕೋಡಿಹಳ್ಳಿಯವರಿಗೂ ಈ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.ಪ್ರೊ.ನಂಜುಂಡಸ್ವಾಮಿ ಬಣದ ಎಲ್ಲ ಜಿಲ್ಲಾ ಘಟಕಗಳು ತಮ್ಮ ಜತೆಯಲ್ಲಿವೆ ಎಂದು ಚಂದ್ರಶೇಖರ ಕೋಡಿಹಳ್ಳಿಯವರು ಹೇಳಿಕೊಂಡಿದ್ದಾರೆ. ನಿಜವಾಗಲೂ ತಮ್ಮ ಬಳಿ ಎಷ್ಟು ಜಿಲ್ಲಾ ಘಟಕಗಳಿವೆ ಎಂಬುದನ್ನು ಅವರು ಬಹಿರಂಗಪಡಿಸಲಿ. ನಮ್ಮ ಜತೆ ಎಷ್ಟು ಜಿಲ್ಲೆಗಳಿವೆ ಎಂಬುದನ್ನು ನಾವೂ ತಿಳಿಸುತ್ತೇವೆ ಎಂದು ಅವರು ಸವಾಲು ಹಾಕಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಸುರೇಶಬಾಬು ಪಾಟೀಲ, ರುದ್ರಪ್ಪ ಮೊಕಾಶಿ, ಕಲ್ಯಾಣರಾವ್ ಮುಚಳಂಬಿ, ಶ್ಯಾಮಸುಂದರ ಕೀರ್ತಿ, ಬಿ.ಎಂ.ಹನಸಿ, ಗುರುಸ್ವಾಮಿಗೌಡ, ಶಿವಾನಂದ ಗುರುಮಠ, ಎಸ್.ಎಸ್.ಮಾಸ್ತಿ, ಯಶವಂತರಾವ್ ಘೋರ್ಪಡೆ, ಎನ್.ಎಸ್.ವರ್ಮಾ, ಸಿದ್ಧನಗೌಡ್ರ ಪಾಟೀಲ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.