ಸೋಮವಾರ, ಏಪ್ರಿಲ್ 19, 2021
27 °C

ರೈತ ಸಂಘ ಪ್ರತಿಭಟನೆ, 38 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಬಗರಹುಕುಂ ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ಅರಣ್ಯಾಧಿಕಾರಿಗಳ ದೌರ್ಜನ್ಯ ತಡೆಯಬೇಕು, ನಿವೇಶನರಹಿತರಿಗೆ ನಿವೇಶ, ಮನೆ ಇಲ್ಲದವರಿಗೆ ಮನೆ ದೊರಕಿಸಬೇಕು ಎಂದು ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ  ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದರು.ಸಂಘಟನೆ ರಾಜ್ಯವ್ಯಾಪಿ ಜೈಲ್ ಭರೋ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪೊಲೀಸರು 38 ಜನರನ್ನು ಬಂಧಿಸಿದರು. ಲಿಂಗಸುಗೂರಲ್ಲಿ 12, ದೇವದುರ್ಗದಲ್ಲಿ 27 ಜನರನ್ನು ಇದೇ ಸಂಘಟನೆ ಕಾರ್ಯಕರ್ತರು ಪೊಲೀಸರು ಬಂಧಿಸಿದರು.ಮಧ್ಯಾಹ್ನ ಇಲ್ಲಿನ ಸಾರ್ವಜನಿಕ ಉದ್ಯಾನವನದಿಂದ ಸಂಘಟನೆ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರತಿಭಟನಾ ರ‌್ಯಾಲಿ ನಡೆಸಿದರು. ತಹಸೀಲ್ದಾರ್ ಕಚೇರಿ ಎದುರು ಮಾತನಾಡಿದ ಸಂಘಟನೆ ಮುಖಂಡರಾದ ಕರಿಯಪ್ಪ ಅಚ್ಚೊಳ್ಳಿ. ಕೆ.ಜಿ ವಿರೇಶ, ಡಿ.ಎಸ್ ಶರಣಬಸವ ಅವರು ಮಾತನಾಡಿ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಸರ್ಕಾರ ಸ್ಪಂದಿಸದೇ ಇದ್ದರೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಕಳೆದ ಎರಡು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಗರಹುಕುಂ ಸಾಗುವಳಿದಾರರ, ಭೂ ರಹಿತ ಅರಣ್ಯ ಭೂಮಿ ಸಾಗುವಳಿದಾರರು ಪಟ್ಟಾ ನೀಡಲು ಮತ್ತು ಸಾಗುವಳಿ ಚೀಟಿ ನೀಡಲು ಹಲವು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಅದೇ ರೀತಿ ಸರ್ಕಾರದ ಜಾಗೆಯಲ್ಲಿ ಮನೆ ಕಟ್ಟಿಕೊಂಡ ಬಡವರು, ಮನೆ ಕಟ್ಟಿಕೊಳ್ಳಲು ಸ್ವಂತ ನಿವೇಶನ ಇಲ್ಲದವರು ಮನೆ, ನಿವೇಶನ ಕೋರಿ ಸರ್ಕಾರಕ್ಕೆ ಪಂಚಾಯಿತಿಗಳ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎಂದರು.ಇವರಲ್ಲಿ ಬಹುತೇಕರು ಕೃಷಿ ಕೂಲಿಕಾರರು, ಬಡ ರೈತರು, ದಿನಗೂಲಿ, ಆಟೋ ಚಾಲಕರು, ಹಮಾಲರು, ಕಟ್ಟಡ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಅಂಗನವಾಡಿ ಮತ್ತು ಬಿಸಿಯೂಟ ನೌಕರರು, ಅಸಂಘಟಿತ ಕಾರ್ಮಿಕರೇ ಆಗಿದ್ದಾರೆ ಎಂದು ಹೇಳಿದರು.ದೇವದಾಸಿ ಪದ್ಧತಿ ನಿರ್ಮೂಲನೆಗೆ ಸರ್ಕಾರ ಗಮನಹರಿಸಬೇಕು. ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 2 ಎಕರೆ ಜಮೀನು ದೊರಕಿಸಬೇಕು,  ಬಡವರಿಗೆ ಬಿಪಿಎಲ್, ಅಂತ್ಯೋದಯ ಪಡಿತರ ನೀಡುವ ಮೂಲಕ 35 ಕೆ.ಜಿ ಆಹಾರ ಧಾನ್ಯ ವಿತರಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.ಪ್ರಭಾರಿ ತಹಸೀಲ್ದಾರ್ ಆರತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರವೂ ಪ್ರತಿಭಟನೆ ಮುಂದುವರಿಸಿದಾಗ ಸಂಘಟನೆ ಮುಖಂಡರಾದ ಕೆ.ಜಿ ವೀರೇಶ, ಕರಿಯಪ್ಪ ಅಚ್ಚೊಳ್ಳಿ, ಡಿ.ಎಸ್ ಶರಣಬಸವ ಸೇರಿದಂತೆ 38 ಜನರನ್ನು ಪೊಲೀಸರು ಬಂಧಿಸಿದರು. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟ ಬಂಧನಕ್ಕೊಳಗಾಗುತ್ತೇವೆ ಎಂದು ಘೋಷಣೆ ಕೂಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.