ಗುರುವಾರ , ಮೇ 6, 2021
27 °C

ರೈತ ಸ್ನೇಹಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಆಧುನಿಕ ತಂತ್ರಜ್ಞಾನದ ಫಲ ಜನರಿಗೆ ತಲುಪಬೇಕು. ಅಂತೆಯೇ ರೈತ ಸ್ನೇಹಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು~ ಎಂದು ಮಲೆನಾಡಿನ ರೈತ ಮುಖಂಡ ಕಡಿದಾಳ್ ಶಾಮಣ್ಣ ಭಾನುವಾರ ಇಲ್ಲಿ ಕರೆ ನೀಡಿದರು.ಸಹ್ಯಾದ್ರಿ ಸಂಘವು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಸಹ್ಯಾದ್ರಿ ಪ್ರಶಸ್ತಿ~ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.`ಅಡಿಕೆ ಸುಲಿಯುವ ಯಂತ್ರವನ್ನು ಕಂಡು ಹಿಡಿದಾಗ ಕಾರ್ಮಿಕರ ಉದ್ಯೋಗ ಕಸಿದುಕೊಳ್ಳುವ ಇಂತಹ ಯಂತ್ರಗಳ ಬಗ್ಗೆ ರೈತ ಸಮುದಾಯ ಪ್ರತಿರೋಧ ವ್ಯಕ್ತಪಡಿಸಿತು. ಆದರೆ, ಕ್ರಮೇಣ ತಂತ್ರಜ್ಞಾನ ಪ್ರಯೋಜನದ ಅರಿವಾಗಿದ್ದರಿಂದ ಮಲೆನಾಡಿಗರು ಅದಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿತು~ ಎಂದರು.`ಕೃಷಿ ಸಮಸ್ಯೆಗಳಿಗೆ ಯಂತ್ರಗಳ ಮೊರೆ ಹೋಗಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಯಂತ್ರಗಳ ಪರಿಣಾಮ ಮಲೆನಾಡಿನ ಹಳ್ಳಿಗಳು ಖಾಲಿಯಾಗುತ್ತಿವೆ. ಒಟ್ಟಾರೆ ರೈತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ವಿಜ್ಞಾನಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ~ ಎಂದು ಮನವಿ ಮಾಡಿದರು. ನಿವೃತ್ತ ಐಜಿಪಿ ಕೆ.ವಿ.ಆರ್. ಟ್ಯಾಗೂರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಇ.ವಿ. ಸತ್ಯನಾರಾಯಣ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ. ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.ಉಪನ್ಯಾಸಕ ಕಿಗ್ಗ ರಾಜಶೇಖರ್ ಸ್ವಾಗತಿಸಿದರು. ಖಜಾಂಚಿ ಕೆ.ಟಿ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.ಇದೇ ಸಂದರ್ಭದಲ್ಲಿ ಮಲೆನಾಡಿನ ಗಾಯಕಿ ಡಾ. ಶಮಿತಾ ಮಲ್ನಾಡ್, ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಕೆ. ವಿಶ್ವನಾಥ್ ಕುಂಟವಳ್ಳಿ, ನಿರ್ಮಾಪಕ ಶ್ರೀನಿವಾಸ್ ಸೂಡ ಹಾಗೂ ಚೆಸ್ ಆಟಗಾರ ಡಿ. ಯಶಸ್ ಅವರಿಗೆ `ಸಹ್ಯಾದ್ರಿ~ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.