ರೈನಾ, ಹಸ್ಸಿ ಆಟಕ್ಕೆ ಮೆಚ್ಚುಗೆ

7
ಶುಭಾರಂಭದ ಖುಷಿಯಲ್ಲಿ ಸೂಪರ್‌ ಕಿಂಗ್ಸ್ ನಾಯಕ ದೋನಿ

ರೈನಾ, ಹಸ್ಸಿ ಆಟಕ್ಕೆ ಮೆಚ್ಚುಗೆ

Published:
Updated:

ರಾಂಚಿ (ಪಿಟಿಐ): ತವರೂರ ಪ್ರೇಕ್ಷಕರ ಮುಂದೆ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಲಭಿಸಿದ ಗೆಲುವು ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಖುಷಿಗೆ ಕಾರಣವಾಗಿದೆ. ಈ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಸುರೇಶ್‌ ರೈನಾ ಹಾಗೂ ಮೈಕ್‌ ಹಸ್ಸಿ ಅವರ ಆಟಕ್ಕೆ ದೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಟೈಟಾನ್ಸ್‌ ಎದುರಿನ ಪಂದ್ಯದಲ್ಲಿ ಸೂಪರ್‌ ಕಿಂಗ್ಸ್‌ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಟೈಟಾನ್ಸ್‌ ನೀಡಿದ 186 ರನ್‌ಗಳ ಗುರಿಯನ್ನು ದೋನಿ ಬಳಗ 18.5 ಓವರ್‌ಗಳಲ್ಲಿ 6 ವಿಕೆಟ್‌ಕಳೆದುಕೊಂಡು ತಲುಪಿತ್ತು.‘ಗುರಿ ತಲುಪುವುದು ತುಂಬಾ ಕಷ್ಟಕರವಾಗಿತ್ತು. ಆದರೆ ರೈನಾ ಹಾಗೂ ಹಸ್ಸಿ ಉತ್ತಮ ಆಟದ ಮೂಲಕ ಆತಂಕ ಕಡಿಮೆ ಮಾಡಿದರು. ಮೊದಲ ಹತ್ತು ಓವರ್‌ಗಳು ತುಂಬಾ ಮುಖ್ಯವಾಗಿದ್ದವು. ಈ ಸಮಯದಲ್ಲಿ ಹಸ್ಸಿ ಹಾಗೂ ರೈನಾ ಎಚ್ಚರಿಕೆಯಿಂದ ಆಟವಾಡಿದರು. ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಗುರಿ ಬೆನ್ನಟ್ಟುವಾಗ ಈ ರೀತಿ ಆಡಬೇಕು’ ಎಂದು ದೋನಿ ನುಡಿದರು.ಹಸ್ಸಿ (47; 26 ಎ., 7 ಬೌಂ., 1 ಸಿ.) ಮತ್ತು ರೈನಾ (47; 28 ಎ., 5 ಬೌಂ., 2 ಸಿ.) ಎರಡನೇ ವಿಕೆಟ್‌ಗೆ 44 ಎಸೆತಗಳಲ್ಲಿ 89 ರನ್‌ ಸೇರಿಸಿದ್ದರು, ‘ಔಟಾಗಿ ಪೆವಿಲಿಯನ್‌ಗೆ ಬಂದ ಹಸ್ಸಿ ಹಾಗೂ ರೈನಾ ತುಂಬಾ ನಿರಾಸೆ ವ್ಯಕ್ತಪಡಿಸಿದರು. ಅಂತಹ ಸಮಯದಲ್ಲಿ ಔಟ್‌ ಆದ ಬಗ್ಗೆ ಅವರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದು ಅವರ ಬದ್ಧತೆಯನ್ನು ತೋರಿಸುತ್ತದೆ’ ಎಂದು ಮಹಿ ತಿಳಿಸಿದರು.ಆದರೆ ಬೌಲರ್‌ಗಳು ಸುಧಾರಿತ ಪ್ರದರ್ಶನ ತೋರಬೇಕು ಎಂದು ಅವರು ಹೇಳಿದರು. ‘ನಾವು ಬೌಲಿಂಗ್‌ ವೇಳೆ ತುಂಬಾ ರನ್‌ ನೀಡಿದೆವು. ಇದು ನನ್ನಲ್ಲಿ ಆತಂಕ ಮೂಡಿಸಿತ್ತು. ಬೌಲರ್‌ಗಳು ಈ ಬಗ್ಗೆ ಯೋಚಿಸಬೇಕು. 6-7 ರನ್‌ ಉಳಿಸಿದರೂ ಪಂದ್ಯದ ಫಲಿತಾಂಶ ಬದಲಾಗುತ್ತದೆ. ಏಕೆಂದರೆ 20ನೇ ಓವರ್‌ನಲ್ಲಿ 11 ಅಥವಾ 18 ರನ್‌ ಗುರಿ ಬೆನ್ನಟ್ಟುವಾಗ ಈ ಸಮಸ್ಯೆ ಗೊತ್ತಾಗುತ್ತದೆ’ ಎಂದರು.‘ಹಸ್ಸಿ ಹಾಗೂ ನನ್ನ ನಡುವೆ ಉತ್ತಮ ಜೊತೆಯಾಟ ಮೂಡಿಬಂತು. ಬಳಿಕ ಬ್ರಾವೊ ಹಾಗೂ ಬದರೀನಾಥ್‌ ಉತ್ತಮ ಆಟದ ಮೂಲಕ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದರು. ಆದರೂ ನಾವು ಕೆಲವೊಂದು ತಪ್ಪು ಎಸಗಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು’ ಎಂದು ‘ಪಂದ್ಯ ಶ್ರೇಷ್ಠ’ ರೈನಾ ಹೇಳಿದರು.ಸಂಕ್ಷಿಪ್ತ ಸ್ಕೋರ್‌: ಟೈಟಾನ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 185 (ಹೆನ್ರಿ ಡೇವಿಡ್ಸ್‌ 52,  ಎಬಿ ಡಿವಿಲಿಯರ್ಸ್‌ 77, ಫರ್ಹಾನ್‌ ಬೆಹರ್ದೀನ್‌ 21, ಡ್ವೇನ್‌ ಬ್ರಾವೊ 34ಕ್ಕೆ 2, ಆರ್‌. ಅಶ್ವಿನ್‌ 36ಕ್ಕೆ 1); ಚೆನ್ನೈ ಸೂಪರ್‌ ಕಿಂಗ್ಸ್‌: 18.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 187 (ಮೈಕ್‌ ಹಸ್ಸಿ 47, ಸುರೇಶ್‌ ರೈನಾ 47, ಎಸ್‌.ಬದರೀನಾಥ್‌ ಔಟಾಗದೆ 20, ಡ್ವೇನ್‌ ಬ್ರಾವೊ 38; ರೋವನ್‌ ರಿಚರ್ಡ್ಸ್‌ 29ಕ್ಕೆ3). ಪಂದ್ಯ ಶ್ರೇಷ್ಠ: ಸುರೇಶ್‌ ರೈನಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry