ಗುರುವಾರ , ನವೆಂಬರ್ 14, 2019
19 °C

ರೈಲಿನಲ್ಲಿ ಜೈವಿಕ ಶೌಚಾಲಯ

Published:
Updated:

ನವದೆಹಲಿ (ಪಿಟಿಐ): ರೈಲು ಹಳಿಗಳ ತುಕ್ಕು ಹಿಡಿಯುವಿಕೆ ತಡೆಯಲು ಹಾಗೂ ರೈಲಿನಲ್ಲಿ ದುರ್ಗಂಧ ಮುಕ್ತ ಶೌಚಾಲಯಗಳನ್ನು ನೀಡಲು ಬೋಗಿಗಳಿಗೆ ಜೈವಿಕ ಶೌಚಾಲಯ ಅಳವಡಿಸುವ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಂಡಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿನ್ಯಾಸಗೊಳಿಸಿದ ಪರಿಸರ ಸ್ನೇಹಿ ಶೌಚಾಲಯಗಳನ್ನು ಈಗಾಗಲೇ ಕೆಲವು ರೈಲುಗಳ ಬೋಗಿಗಳಿಗೆ ಅಳವಡಿಸಲಾಗಿದೆ. ಜತೆಗೆ ಇಂತಹ ಶೌಚಾಲಯಗಳ ತಯಾರಿಕೆ ಕಾರ್ಯವೂ ನಡೆದಿದೆ. ಈ ಹಣಕಾಸು ವರ್ಷದಲ್ಲಿ ಇಂತಹ 25,000 ಶೌಚಾಲಯಗಳನ್ನು ತಯಾರಿಸುವ ಗುರಿ ಇದೆ. ಮೊದಲ ಹಂತದಲ್ಲಿ, ದೀರ್ಘ ದೂರ ಕ್ರಮಿಸುವ ರೈಲುಗಳಿಗೆ ಈ ಶೌಚಾಲಯಗಳನ್ನು ಅಳವಡಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈಗಿರುವ ತೆರೆದ ಶೌಚಾಲಯ ವ್ಯವಸ್ಥೆಯಿಂದಾಗಿ ರೈಲು ಹಳಿಗಳು ತುಕ್ಕು ಹಿಡಿಯುತ್ತಿದ್ದು, ಇದರಿಂದ ಪ್ರತಿವರ್ಷ 350 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ರೈಲ್ವೆ ನಿರ್ವಹಣಾ ಕಾರ್ಯಗಳಿಗೆ ಕೂಡ ಇದೊಂದು ತೊಡಕಾಗಿ ಪರಿಣಮಿಸಿದೆ. ರೈಲು ಮಾರ್ಗದ ಇನ್ನಿತರ ಮೂಲಸೌಕರ್ಯಗಳೂ ಹಾಳಾಗುತ್ತಿವೆ ಎಂದು ವಿವರಿಸಿದರು. 2016-17ರ ವೇಳೆಗೆ ಎಲ್ಲಾ ಹೊಸ ಬೋಗಿಗಳಿಗೆ ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗುವುದು. ಹಾಗೆಯೇ, 2021-22ರ ವೇಳೆಗೆ ರಾಷ್ಟ್ರದ ಎಲ್ಲಾ ಪ್ಯಾಸೆಂಜರ್ ರೈಲುಗಳ ಬೋಗಿಗಳಿಗೆ ಇದನ್ನು ಅಳವಡಿಸಿ, ತೆರೆದ ಶೌಚಾಲಯ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲಾಗುವುದು ಎಂದರು.

ರೈಲ್ವೆ ಸುರಕ್ಷತೆ ಕುರಿತು ಕಾಕೋಡ್ಕರ್ ಸಮಿತಿ ಮತ್ತು ರೈಲ್ವೆ ಆಧುನಿಕತೆ ಕುರಿತು ಪಿತ್ರೋಡ ಸಮಿತಿ ನೀಡಿದ್ದ ವರದಿಗಳಲ್ಲಿ, ಪರಿಸರ ಸ್ನೇಹಿ ಶೌಚಾಲಯ ಅಳವಡಿಸಲು ಬಲವಾಗಿ ಶಿಫಾರಸು ಮಾಡಿದ್ದವು.

ಪ್ರತಿಕ್ರಿಯಿಸಿ (+)