ರೈಲು ದುರಂತ: ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು

7

ರೈಲು ದುರಂತ: ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು

Published:
Updated:

ಬೆಂಗಳೂರು: ಆಂಧ್ರಪ್ರದೇಶದ ಕೊತ್ತ­ಚೆರುವು ಬಳಿ ಸಂಭವಿಸಿದ ರೈಲು ದುರಂತ ಪ್ರಕರಣ ಸಂಬಂಧ ರೈಲ್ವೆ ಸುರ­ಕ್ಷತಾ ಪಡೆಯ ಆಯುಕ್ತರು ಬುಧವಾರ ಘಟನೆಯ ಪ್ರತ್ಯಕ್ಷದರ್ಶಿ­ಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.ತನಿಖೆಯ ಪ್ರಾಥಮಿಕ ಹಂತವಾಗಿ ರೈಲ್ವೆ ಪೊಲೀಸರು, ಪ್ರಯಾಣಿಕರು ಹಾಗೂ ಗಾಯಾಳು­ಗಳು ಸೇರಿದಂತೆ 42 ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.‘ಹೇಳಿಕೆಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು. ದುರಂತದ ಸಂಭವನೀಯ ಕಾರಣಗಳ ಜತೆಗೆ ಪ್ರಯಾಣಿಕರ ಸುರಕ್ಷತೆಗೆ ಕೈಗೊಳ್ಳ­ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಕೆಲ ಶಿಫಾರಸುಗಳನ್ನು ವರದಿಯಲ್ಲಿ ನಮೂದಿಸಲಾ­ಗುವುದು. ದುರಂತದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ನೀಡುವ ಮಾಹಿತಿಯನ್ನೂ ಬಳಸಿಕೊಂಡು 15 ದಿನಗಳಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ರೈಲ್ವೆ ಸುರಕ್ಷತಾ ಪಡೆಯ ಆಯುಕ್ತ ಎಸ್‌.ಕೆ.ಮಿತ್ತಲ್‌ ತಿಳಿಸಿದ್ದಾರೆ.‘ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿರುವುದರಿಂದ ಈಗಲೇ ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ. ರೈಲ್ವೆ ಮಂಡಳಿ ವ್ಯವಸ್ಥಾಪಕರ ನೇತೃತ್ವದಲ್ಲಿಯೂ ದುರಂತಕ್ಕೀಡಾದ ಬೋಗಿಯ ತಪಾಸಣಾ ಕಾರ್ಯ ನಡೆಯುತ್ತಿದೆ. ಅವರು ವರದಿ ನೀಡಿದ ಬಳಿಕ ಹೆಚ್ಚಿನ ಮಾಹಿತಿ ಸಿಗಬಹುದು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry