ರೈಲು ನಿಲ್ದಾಣಕ್ಕೆ ಕಲಾತ್ಮಕತೆಯ ಸ್ಪರ್ಶ

7

ರೈಲು ನಿಲ್ದಾಣಕ್ಕೆ ಕಲಾತ್ಮಕತೆಯ ಸ್ಪರ್ಶ

Published:
Updated:

ಚಿಕ್ಕಬಳ್ಳಾಪುರ: ‌ನಗರದ ರೈಲು ನಿಲ್ದಾಣದ ಅಭಿವೃದ್ಧಿ ಮತ್ತು ನವೀಕ­ರಣ ಕಾಮಗಾರಿಯು ಭರದಿಂದ ನಡೆ­ಯು­ತ್ತಿದ್ದು, ವಿವಿಧ ರೀತಿಯ ಸೌಲಭ್ಯ­ಗಳನ್ನು ಒದಗಿಸಲಾಗುತ್ತಿದೆ. ಕಲಾತ್ಮಕ­ತೆಯ ಸ್ಪರ್ಶ ನೀಡುವ ಉದ್ದೇಶದಿಂದ ವಿಭಿನ್ನ ರೀತಿಯ ಕಾಂಪೌಂಡ್‌, ನಿಲ್ದಾಣದ ಆವರಣದಲ್ಲಿರುವ ಎರಡೂ ಬೃಹತ್‌ ಮರಗಳ ಸುತ್ತಲೂ ಪ್ರಯಾಣಿಕರಿಗಾಗಿ ಕಟ್ಟೆಯೊಂದನ್ನು ನಿರ್ಮಿಸಲಾಗಿದೆ.ಈ ಎಲ್ಲ ಸೌಲಭ್ಯ­ಗಳು ಒಂದೆಡೆ ನೆರವೇರುತ್ತಿದ್ದರೆ, ಇನ್ನೊಂದೆಡೆ ಅಧಿಕಾರಿಗಳ ಮಾರ್ಗ­ದರ್ಶನದಲ್ಲಿ ಕಾರ್ಮಿಕರು ಹೆಚ್ಚುವರಿ ರೈಲ್ವೆ ಹಳಿಗಳ ಅಳವಡಿಕೆ ಕಾರ್ಯದಲ್ಲಿ ನಿರತ­ರಾಗಿದ್ದಾರೆ. ಬ್ರಿಟೀಷರ ಕಾಲದಲ್ಲಿ ನಿರ್ಮಿಸ­ಲಾಗಿದ್ದ ಕಟ್ಟಡದ ಅರ್ಧ­ಭಾಗವನ್ನು ಕೆಡವ­ಲಾಗಿದ್ದು, ಇನ್ನೂ ಅರ್ಧಭಾಗದಲ್ಲಿ ಕಟ್ಟಡವನ್ನು ಕಟ್ಟಿ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಟಿಕೆಟ್‌ ವಿತರಣಾ ವಿಭಾಗ, ಪ್ರವೇಶ­ದ್ವಾರ, ಶೌಚಾಲಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಜಂಕ್ಷನ್‌ ಕೇಂದ್ರವಾಗಿ ಮೇಲ್ದರ್ಜೆಗೇರಲಿರುವ ಈ ನಿಲ್ದಾಣವು ನಾಲ್ಕು ರೈಲ್ವೆ ಹಳಿ ಮಾರ್ಗವು ಹೊಂದಲಿದೆ. ಈಗಾಗಲೇ ಮೂರು ರೈಲ್ವೆ ಹಳಿ ಮಾರ್ಗಗಳನ್ನು ಹೊಂದಿರುವ ಈ ನಿಲ್ದಾಣದಲ್ಲಿ ಚಿಕ್ಕ­ಬಳ್ಳಾಪುರ–ಬೆಂಗಳೂರು ಪ್ಯಾಸೆಂಜರ್‌ ರೈಲು ಮಾತ್ರವೇ ಸಂಚರಿಸುತ್ತಿದೆ. ಆದರೆ ವರ್ಷಗಳು ಕಳೆದಂತೆ ನಿಲ್ದಾಣವು ಅಭಿವೃದ್ಧಿಯಾದಲ್ಲಿ ಕೋಲಾರ, ಪುಟ್ಟಪರ್ತಿ, ಅನಂತಪುರ, ಪೆನುಕೊಂಡ ಮುಂತಾದ ಊರುಗಳಿಗೆ ಪ್ಯಾಸೆಂಜರ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿವೆ.ರೈಲ್ವೆ ರಾಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದ ಈಗಿನ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ನೀಡಿದ ಭರವಸೆಯಂತೆ ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಚಿಕ್ಕ­ಬಳ್ಳಾಪುರ ಮತ್ತು ಕೋಲಾರ ನಡುವೆ ರೈಲು ಸಂಚರಿಸಬೇಕಿತ್ತು. ಆದರೆ ರೈಲ್ವೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ರೈಲು ಸಂಚಾರ ಯಾವಾಗ ಆರಂಭ­ಗೊಳ್ಳುತ್ತದೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ರೈಲ್ವೆ ನಿಲ್ದಾಣಕ್ಕೆ ಹೊಸ ಸ್ವರೂಪ ನೀಡುತ್ತಿರುವುದು ತುಂಬ ಸಂತೋಷ ತಂದಿದೆ. ನಿಲ್ದಾಣದ ಜೊತೆಗೆ ಪ್ರಯಾಣಿಕರಿಗೆ ಅಷ್ಟೇ ಅಲ್ಲ, ಹಿರಿ­ಯರು ಮತ್ತು ಯುವಜನರಿಗೂ ನಿಕಟ ಸಂಬಂಧವಿದೆ. ರೈಲ್ವೆ ಪ್ರಯಾಣಿಕರು ಬೆಳಿಗ್ಗೆ 8 ಮತ್ತು ಸಂಜೆ 4 ಗಂಟೆ ಸುಮಾರಿಗೆ ಕಾಣಿಸಿ­ಕೊಂಡರೆ, ಉಳಿದ ವೇಳೆಯಲ್ಲಿ ಅಲ್ಲಿ ಹಿರಿಯರು ಮತ್ತು ಯುವಜನರೇ ಹೆಚ್ಚು ಕಾಣಿಸಿಕೊಳ್ಳು­ತ್ತಾರೆ. ಸ್ನೇಹಿತರೊಂದಿಗೆ ಮಾತ­ನಾಡಲು, ಸ್ವಲ್ಪ ಹೊತ್ತು ವಿರಮಿಸಲು ಮತ್ತು ನೆಮ್ಮದಿಯಿಂದ ಇರಲು ಈ ನಿಲ್ದಾಣ ಉತ್ತಮ ತಾಣವಾಗಿದೆ. ನಿಲ್ದಾಣದ ಆವರಣದಲ್ಲಿರುವ ಎರಡು ಬೃಹತ್‌ ಮರಗಳು ಜೀವಾಳದಂತಿವೆ’ ಎಂದು ನಗರದ ನಿವಾಸಿ ಮಹೇಶ್‌ ತಿಳಿಸಿದರು.ಎಷ್ಟೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದರೂ ಮತ್ತು ಏನೇ ನವೀಕರಣ ಕೈಗೊಂಡರೂ ನಿಲ್ದಾಣ­ದಲ್ಲಿನ ಮರ­ಗಳನ್ನು ಯಾವುದೇ ಕಾರಣಕ್ಕೂ ಕಡಿಯ­­ಬಾರದು. ನಿಲ್ದಾಣಕ್ಕೆ ವಿಶೇಷ ಕಳೆಯಂತಿ­ರುವ ಈ ಮರಗಳು ಆವ­ರಣಕ್ಕೆ ನೆರಳು ನೀಡುವು­ದಲ್ಲದೇ ಹಸಿರು ವಾತಾವರಣಕ್ಕೂ ಕಾರಣ­ವಾಗಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry