ರೈಲು ನಿಲ್ದಾಣ ಬಳಿ ಬಾವಲಿಗಳ ಕಾಲೊನಿ...!

ಶನಿವಾರ, ಜೂಲೈ 20, 2019
27 °C

ರೈಲು ನಿಲ್ದಾಣ ಬಳಿ ಬಾವಲಿಗಳ ಕಾಲೊನಿ...!

Published:
Updated:

ಮಂಡ್ಯ:  ಇಲ್ಲಿನ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತ್ತಿರುವ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಮುಗಿಲೆತ್ತರಕ್ಕೆ ಬೆಳದಿರುವ ನೀಲಗಿರಿ, ಹುಣಸೆ, ಬಾಗೇ ಮರಗಳಿವೆ. ಆ ಮರಗಳಿಗೆ ಸಾವಿರಾರು ಬಾವಲಿಗಳು ಜೋತು ಬಿದ್ದಿವೆ. ಹಲವು ವರ್ಷಗಳಿಂದ ಅವು ಇಲ್ಲಿಯೇ ನೆಲೆ ನಿಂತಿದ್ದು, ಬದುಕು ನಡೆಸುತ್ತಿವೆ...!ರೈಲಿನ ಕರ್ಕಶ ಶಬ್ದಕ್ಕೂ ಬೆದರದ, ಮಳೆ, ಗಾಳಿ, ಬಿಸಿಲಿಗೂ ಜಗ್ಗದ, ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ದಿನದೂಡುತ್ತಿರುವ ಈ  ಬಾವಲಿಗಳು, ಹಗಲಿನಲ್ಲಿ ನಿದ್ರೆಗೆ ಜಾರುತ್ತವೆ.ಹಗಲಿನಲ್ಲಿ ಕಣ್ಣು ಕಾಣದ ಕಾರಣ ಮರದಲ್ಲೇ ತಲೆ ಕೆಳಗಾಗಿ ನೇತಾಡುವ ನಿಶಾಚರಿ ಬಾವಲಿಗಳು, ನೇಸರ ತನ್ನ ದಿನಚರಿ ಮುಗಿಸುವ ವೊತ್ತಿಗೆ ಕಿಚಿಮಿಚಿ ಶಬ್ದವನ್ನು ಮಾಡುತ್ತಾ ರೆಕ್ಕೆಗಳನ್ನು ಬಿಚ್ಚಿ ಚಟುವಟಿಕೆ ಆರಂಭಿಸುತ್ತವೆ. ಆರುಣೋದಯ ಆಗುವವರೆಗೂ.

ಮರಗಳಲ್ಲಷ್ಟೇ ಅಲ್ಲದೆ, ಗುಹೆ, ಸುರಂಗ, ಬಾವಿ, ಸೇತುವೆ ಕೆಳಭಾಗ, ಹಳೆಯ ಕಟ್ಟಡ ಸೇರಿದಂತೆ ವಿವಿಧೆಡೆಯೂ ನೆಲೆ ಕಂಡುಕೊಳ್ಳುವ ಬಾವಲಿಗಳು ಸಾಮಾನ್ಯವಾಗಿ ಹಿಂಡಾಗಿ ವಾಸಿಸುತ್ತವೆ. ಮುಸ್ಸಂಜೆ ಆಗುತ್ತಿದ್ದಂತೆ, ಬೇಟೆಗೆ ಹೊರಡುತ್ತವೆ.ಸಸ್ತನಿ ಜಾತಿಗೆ ಸೇರಿದ ಬಾವಲಿಗಳ ಕಣ್ಣುಗಳು ರಾತ್ರಿಯಲ್ಲೂ ಚುರುಕು. ಕಿವಿ ಕೂಡ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವುಗಳ ಬೇಟೆಗೆ ಕತ್ತಲು ಅಡ್ಡಿ ಆಗುವುದಿಲ್ಲ. ಕೀಟ, ಹಣ್ಣುಗಳು, ಹೂವಿನ ಮಕರಂದ, ಕಶೇರುಕಗಳೇ ಇವುಗಳ ಅಹಾರ.ಅಂದ್ಹಾಗೆ, ಬಾವಲಿಗಳು ಜನಸ್ನೇಹಿ. ಇವು ಜನರಿಗೆ ಕಿರಿಕಿರಿ ಮಾಡುವುದಿಲ್ಲ. ಅಷ್ಟೇ ಅಲ್ಲ, ಹೂವಿನ ಪರಾಗಸ್ಪರ್ಶ ಹಾಗೂ ಹಣ್ಣಿನ ಬೀಜಗಳನ್ನು ಪಸರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ನಾಗಮಂಗಲ ವಿಜ್ಞಾನ ವೇದಿಕೆಯ ಎನ್.ಕೆ.ನರಸಿಂಹಪ್ರಸಾದ್.`ಬಾವಲಿಗಳ ವಂಶಾವೃದ್ಧಿಯೂ ಕುತೂಹಲವನ್ನು ಮೂಡಿಸುತ್ತದೆ. ಅವು ಮರಿ ಹಾಕುವುದು ವರ್ಷಕ್ಕೊಮ್ಮೆ. ಮೇ-ಜೂನ್ ತಿಂಗಳಲ್ಲಿ. ತನ್ನ ಸಂತಾನವನ್ನು ಪೋಷಿಸಲು ಅವು, ಗೂಡನ್ನು ಕಟ್ಟುವುದಿಲ್ಲ.ಮರಕ್ಕೆ ತಲೆ ಕೆಳಗಾಗಿ ಜೋತು ಬಿದ್ದ ಅಮ್ಮನ ತೆಕ್ಕೆಯಲ್ಲೇ ಮರಿಗಳು ಬೆಳೆಯುತ್ತವೆ. ತಾಯಿ ಬಾವಲಿ ರೆಕ್ಕೆಗಳನ್ನು ಬುಟ್ಟಿಯಂತೆ ಮಾಡಿ ಕರುಳ ಕುಡಿಗಳನ್ನು ರಕ್ಷಿಸುತ್ತವೆ.ಹುಟ್ಟಿದ ಒಂಬತ್ತು ದಿನದವರೆಗೂ ಮರಿ ಕಣ್ಣು ಬಿಡುವುದಿಲ್ಲ. ತಿಂಗಳವರೆಗೆ ಹಾರಲೂ ಸಾಧ್ಯವಿಲ್ಲ. ಅಷ್ಟು ಕಾಲ ತಾಯಿ ಮೊಲೆ ಹಾಲೇ ಅವುಗಳಿಗೆ ಆಹಾರ. ಬಾವಲಿಯ ಸರಾಸರಿ ಜೀವಿತಾವಧಿ 20 ವರ್ಷ ಮಾತ್ರ' ಎಂದು ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry