ಶನಿವಾರ, ಮೇ 28, 2022
26 °C

ರೈಲು ಪ್ರಯಾಣ ದರ ಏರಿಕೆ ಅಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸತತ 8ನೇ ವರ್ಷವಾದ ಈ ಬಾರಿಯೂ ‘ರೈಲ್ವೆ ಬಜೆಟ್’ ಪ್ರಯಾಣ ದರದಲ್ಲಿ ಯಾವುದೇ ಪ್ರಮುಖ ಬದಲಾವಣೆ ತರುವ ಸಾಧ್ಯತೆ ಇಲ್ಲ. ಆದರೆ ಒಂದು ಡಜನ್ ತಡೆರಹಿತ ‘ತುರಂತೊ’ ಎಕ್ಸ್‌ಪ್ರೆಸ್ ಸೇರಿದಂತೆ 100ಕ್ಕೂ ಹೆಚ್ಚು ಹೊಸ ರೈಲುಗಳು ಘೋಷಣೆಯಾಗುವ ನಿರೀಕ್ಷೆ ಇದೆ.ಲೋಕಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿರುವ 2011- 12ನೇ ಸಾಲಿನ ಬಜೆಟ್, ಮೆಟ್ರೊಗಳಲ್ಲಿ 50,000 ದಿಂದ ಒಂದು ಲಕ್ಷ ಮಂದಿಗೆ ಊಟ ತಯಾರಿಸುವ ಬೃಹತ್ ಅಡುಗೆ ಕೋಣೆಗಳ ಆರಂಭ ಸಹ ಪ್ರಸ್ತಾಪವಾಗುವ ಸಾಧ್ಯತೆ ಇದೆ. ರೈಲ್ವೆಯ ಹೊಸ ಆಹಾರ ಪೂರೈಕೆ ನೀತಿಗೆ ಅನುಗುಣವಾಗಿ ಈ ಕೋಣೆಗಳನ್ನು ಸ್ವತಃ ಇಲಾಖೆಯೇ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.ಇನ್ನು ಎರಡು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ತಮ್ಮ ರಾಜ್ಯಕ್ಕೆ ಕೆಲ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಜನದಟ್ಟಣೆಯ ಹೌರಾ- ಸೆಲ್ಡಾ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುವುದು ಇದರಲ್ಲಿ ಒಂದಾಗಿದ್ದು, ಈ ರೈಲುಗಳು ಕೋಲ್ಕತ್ತಾದ ಜನನಿಬಿಡ ಕೇಂದ್ರಗಳ ಮೂಲಕ ಹಾದು ಹೋಗಲಿವೆ. ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ಪರೀಕ್ಷೆ ವೇಳೆ ವಿಶೇಷ ರೈಲುಗಳನ್ನು ಓಡಿಸುವ, ಕೇವಲ ತತ್ಕಾಲ್ ಯೋಜನೆಯಡಿ ಕಾಯ್ದಿರಿಸುವ ಸೌಲಭ್ಯದ ರೈಲುಗಳನ್ನು ಘೋಷಿಸುವ ಸಾಧ್ಯತೆ ಇದೆ.ಹೈದರಾಬಾದ್- ಸಿಕಂದರಾಬಾದ್ ನಡುವೆ ಬಹುವಿಧದ ಸಂಚಾರ ವ್ಯವಸ್ಥೆ, ಮುಂಬೈ ಉಪನಗರದ ರೈಲು ವ್ಯವಸ್ಥೆಯ ಸಾಮರ್ಥ್ಯ ಹೆಚ್ಚಳ, ಹಿಂದೆ ಬಿದ್ದಿರುವ ‘ಡೆಡಿಕೇಟೆಡ್ ರೈಲ್ ಫ್ರೈಟ್ ಕಾರಿಡಾರ್’ ಯೋಜನೆಯನ್ನು ತ್ವರಿತಗೊಳಿಸಲು ಕ್ರಮ ಬಜೆಟ್‌ನಲ್ಲಿ ಸೇರಿವೆ ಎಂದು ಹೇಳಲಾಗಿದೆ.ಒಟ್ಟಾರೆ ಬಜೆಟ್‌ಗೆ ಬೆಂಬಲಾರ್ಥವಾಗಿ ಕೇಂದ್ರದಿಂದ 39,000 ಕೋಟಿ ರೂಪಾಯಿಗೆ ಇಲಾಖೆ ಬೇಡಿಕೆ ಸಲ್ಲಿಸಿತ್ತಾದರೂ ಹಣಕಾಸು ಸಚಿವಾಲಯ 20,000 ಕೋಟಿ ರೂಪಾಯಿ ಮಂಜೂರು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ನೆಚ್ಚಿನ ಯೋಜನೆಗಳಿಗೆ ಒಪ್ಪಿಗೆ ದೊರಕಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಬ್ಯಾನರ್ಜಿ ಅವರು ಯೋಜನಾ ಆಯೋಗದ ಮೊರೆ ಹೋಗಿದ್ದರಾದರೂ ಆಯೋಗ ಎಲ್ಲವನ್ನೂ ಒಪ್ಪಿಕೊಂಡಿಲ್ಲ. ಸಚಿವರು ಬಜೆಟ್‌ನಲ್ಲಿ ಘೋಷಿಸಲು ಯೋಜಿಸಿದ್ದ 40 ಯೋಜನೆಗಳಲ್ಲಿ 14ಕ್ಕೆ ಮಾತ್ರ ಅಂಕಿತ ಸಿಕ್ಕಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.