ಬುಧವಾರ, ಜೂನ್ 16, 2021
23 °C

ರೈಲು ಪ್ರಯಾಣ ದರ: ಶೇ 25 ಹೆಚ್ಚಳ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಪ್ರಯಾಣ ದರ: ಶೇ 25 ಹೆಚ್ಚಳ?

ತುಮಕೂರು: ರೈಲು ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಿಸುವ ಸಂಬಂಧ ಚರ್ಚೆ ನಡೆದಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದೇಶದ ಅನೇಕ ಕಡೆಗಳಲ್ಲಿ ಹಲವು ಹೊಸ ಯೋಜನೆಗಳ ಅನುಷ್ಠಾನದ ಪ್ರಯತ್ನ ನಡೆದಿದೆ. ಆದರೆ ಇಲಾಖೆಯ ಆದಾಯ- ವೆಚ್ಚದಲ್ಲಿ ಇರುವ ಅಗಾಧ ವ್ಯತ್ಯಾಸ ಸರಿದೂಗಿಸುವ ಮಾರ್ಗೋಪಾಯ ಕಂಡುಕೊಳ್ಳಲು ಸ್ಯಾಮ್ ಪಿತ್ರೊಡಾ ಅವರ ನೇತೃತ್ವದ ಸಮಿತಿ ನೇಮಕ ಮಾಡಲಾಗಿತ್ತು.ಈಗಿರುವ ಪ್ರಯಾಣ ದರವನ್ನು ಶೇ. 25ರಷ್ಟು ಹೆಚ್ಚಳ ಮಾಡುವ ಮೂಲಕ ಆದಾಯ-ವೆಚ್ಚದ ಸಮತೋಲನ ಕಾಪಾಡಿಕೊಳ್ಳಬಹುದೆಂದು ಸಮಿತಿ ವರದಿ ನೀಡಿದೆ. ಪ್ರಯಾಣ ದರ ಹೆಚ್ಚಳ ಸಂಬಂಧ ಚರ್ಚೆ ನಡೆದಿದೆ. ಮುಂದಿನ ಬಜೆಟ್ ವೇಳೆ ಇದನ್ನು ಪ್ರಕಟಿಸಲಾಗುವುದು ಎಂದರು.ತುಮಕೂರು- ರಾಯದುರ್ಗ, ತುಮಕೂರು- ದಾವಣಗೆರೆ ಮಾರ್ಗಗಳ ಸಮೀಕ್ಷೆ ಕೆಲಸ ಮುಗಿದಿದ್ದು, ಆರು ತಿಂಗಳಲ್ಲಿ ತುಮಕೂರು ಕಡೆಯಿಂದ ಕೆಲಸ ಆರಂಭವಾಗಲಿದೆ.ತುಮಕೂರು- ರಾಯದುರ್ಗ ಮಾರ್ಗ ನಿರ್ಮಾಣಕ್ಕೆ ತುಮಕೂರಿನ ಊರುಕೆರೆ ಬಳಿ ರೈಲ್ವೆ ಜಂಕ್ಷನ್ ನಿರ್ಮಾಣಕ್ಕೆ ಬೇಕಾಗಿದ್ದ 180 ಎಕರೆ ಜಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ 90 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯಕ್ಕೆ ನೀಡಿರುವ ಅನೇಕ ಯೋಜನೆಗಳ ಕಾಮಗಾರಿ ಆದಷ್ಟು ಶೀಘ್ರವೇ ಆರಂಭಿಸಲಾಗುವುದು. ತುಮಕೂರು- ಬೆಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣಕ್ಕೆ ಶೀಘ್ರ ಚಾಲನೆ ಸಿಗಲಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಾಕಿಕೊಂಡಿದ್ದ ಮೈಸೂರು- ರಾಮನಗರ ಮಾರ್ಗದ ಭೂ ಸ್ವಾಧೀನ ಸಂಬಂಧ ಎರಡು ಪ್ರದೇಶಗಳಲ್ಲಿ ಸಮಸ್ಯೆ ಉದ್ಭವಿಸಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದರು.ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಹುಬ್ಬಳ್ಳಿಯಲ್ಲಿ ದೊಡ್ಡ ಜಂಕ್ಷನ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.