ಮಂಗಳವಾರ, ಮೇ 18, 2021
30 °C

ರೈಲು ಸೌಲಭ್ಯ: ಈಡೇರೀತೇ ಜನರ ಕನಸು?

ಪ್ರಜಾವಾಣಿ ವಾರ್ತೆ/ವಿ.ಎಂ.ನಾಗಭೂಷಣ Updated:

ಅಕ್ಷರ ಗಾತ್ರ : | |

ಸಂಡೂರು: ಸಂಡೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇಲ್ಲಿನ ಅದಿರು ಸಾಗಾಣಿಕೆಗಾಗಿ ರೈಲ್ವೆ ಇಲಾಖೆ ಹಳಿಗಳನ್ನು ಹಾಕಿ, ಅದರ ಮೇಲೆ ಅದಿರು ಸಾಗಾಣಿಕೆ ಮಾಡಿ ವಾರ್ಷಿಕ ಸಾವಿರಾರು ಕೋಟಿ ಆದಾಯ ಗಳಿಸುತ್ತಿದ್ದರೂ, ಇಲಾಖೆ ಇಲ್ಲಿನ ಬಹುತೇಕ ಹಳಿಗಳ ಮೇಲೆ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಮುಂದಾಗುತ್ತಿಲ್ಲ.1995ಕ್ಕೂ ಮುಂಚೆ ತಾಲ್ಲೂಕಿನ ಯಶವಂತನಗರ ಮಾರ್ಗವಾಗಿ ಹೊಸಪೇಟೆ-ಸ್ವಾಮಿಹಳ್ಳಿ ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು. ಈ ರೈಲು ಈ ಭಾಗದ ಜನರಿಗೆ ಅನುಕೂಲವಾಗಿತ್ತು. 1995ರಲ್ಲಿ ಈ ಮಾರ್ಗವನ್ನು ಮೀಟರ್ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಉದ್ದೇಶದಿಂದ ಸ್ಥಗಿತಗೊಳಿಸಲಾಗಿದ್ದ ಪ್ಯಾಸೆಂಜರ್ ರೈಲನ್ನು ಗೇಜ್ ಪರಿವರ್ತನೆ ಕಾರ್ಯ ಮುಗಿದು ಹಲವು ವರ್ಷಗಳು ಕಳೆದರೂ ಪ್ರಾರಂಭಿಸಿಲ್ಲ. ಈ ಕುರಿತಂತೆ ಈ ಭಾಗದಲ್ಲಿನ ಜಿಗೇನಹಳ್ಳಿಯ ರಾಜಶೇಖರ್ ಪಾಟೀಲ್, ಯಶವಂತನಗರದ ಭೀಮಾನಾಯ್ಕ, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಯಶವಂತನಗರದ ನಾಗರೀಕ ಸೇವಾ ಸಮಿತಿಯ ಮುಖಂಡರು ಹಲವು ಬಾರಿ ರೈಲ್ವೆ ಅಧಿಕಾರಿಗಳಿಗೆ ಬರೆದ ಪತ್ರಗಳಿಗೆ ಇಲಾಖೆ ಸ್ಪಂದಿಸಿಲ್ಲ.ತಾಲ್ಲೂಕಿನಲ್ಲಿ ಎಲ್ಲೆಲ್ಲಿ? ತಾಲ್ಲೂಕಿನ ರಾಮಗಡ, ರಣಜಿತ್‌ಪುರ, ತೋರಣಗಲ್ಲು ಹಾಗೂ ಸ್ವಾಮಿಹಳ್ಳಿ ಮಾರ್ಗದಲ್ಲಿ ರೈಲು ಹಳಿಗಳಿವೆ. ತೋರಣಗಲ್ಲಿನಲ್ಲಿ ಮಾತ್ರ ಪ್ಯಾಸೆಂಜರ್ ರೈಲು ಸೌಲಭ್ಯವಿದೆ.ಇಲ್ಲಿರುವ ಗಣಿ ಮತ್ತು ಕೈಗಾರಿಕೆಗಳಲ್ಲಿ ವಿವಿಧ ರಾಜ್ಯಗಳಿಂದ ಜನರು ಉದ್ಯೋಗಕ್ಕಾಗಿ ಬಂದಿದ್ದು ಜನರು ಸಂಚರಿಸಲು ಪ್ಯಾಸೆಂಜರ್ ರೈಲಿನ ಅಗತ್ಯ ಇದೆ. ಇಲ್ಲಿನ ರಸ್ತೆಗಳು ಅದಿರು ಲಾರಿಗಳ ಓಡಾಟದಿಂದ ಬೇಗನೆ ಹಾಳಾಗುವುದರಿಂದ, ಪ್ಯಾಸೆಂಜರ್ ರೈಲಿನ ಸಂಚಾರ ಈ ಭಾಗದಲ್ಲಿ ಅಗತ್ಯ. ಈಗಾಗಲೇ ಇರುವ ಇರುವ ಹಳಿಗಳ ಮೇಲೆ ಪ್ಯಾಸೆಂಜರ್ ರೈಲು ಓಡಿಸಿದರೆ ಸಾಕು. ಈ ಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿಯೂ ರೈಲುಗಳನ್ನು ಓಡಿಸಬಹುದಾಗಿದೆ.ಈಗಾಗಲೇ ಕೊಟ್ಟೂರು-ಹರಿಹರ ರೈಲು ಮಾರ್ಗ ಸಂಚಾರಕ್ಕೆ ಸಿದ್ಧವಾಗಿದೆ ಎನ್ನಲಾಗಿದೆ. ಬಳ್ಳಾರಿಯಿಂದ ಸಂಡೂರಿನವರೆಗೆ ರೈಲು ಮಾರ್ಗವಿದೆ. ಸಂಡೂರು- ಕೊಟ್ಟೂರು ಮಧ್ಯೆ ಹಳಿ ಹಾಕಿದಲ್ಲಿ ಬಳ್ಳಾರಿಯಿಂದ ಕೊಟ್ಟೂರು ಮಾರ್ಗವಾಗಿ ಹರಿಹರ ಮುಂತಾದ ಸ್ಥಳಗಳಿಗೆ ಸಂಚರಿಸಲು ಸುಗಮ.ಈಗ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಮಂತ್ರಿಗಳಾಗಿದ್ದಾರೆ. ಸಂಡೂರಿನವರೆ ಆದ ಸಂತೋಷ್ ಲಾಡ್ ರಾಜ್ಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವುದರಿಂದ, ಈ ಕೆಲಸಕ್ಕೆ ಚಾಲನೆ ದೊರೆಯಬಹುದು ಎಂಬುದು ಇಲ್ಲಿನ ಜನರ ನಿರೀಕ್ಷೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.