ಮಂಗಳವಾರ, ಆಗಸ್ಟ್ 20, 2019
24 °C
`ರೈಲು ಪ್ರಯಾಣ ದರ ಪ್ರಾಧಿಕಾರ' ರಚನೆಗೆ ಅನುಮೋದನೆ

ರೈಲ್ವೆಗೆ ರೂ 25 ಸಾವಿರ ಕೋಟಿ ನಷ್ಟ:ಖರ್ಗೆ

Published:
Updated:

ಗುಲ್ಬರ್ಗ: ಜಗತ್ತಿನಲ್ಲಿ ಅತಿ ಹೆಚ್ಚು ನೌಕರರನ್ನು ಹೊಂದಿರುವ ಭಾರತೀಯ ರೈಲ್ವೆ ಮುಂದೊಂದು ದಿನ ಮುಚ್ಚಿ ಹೋಗಲಿದೆಯೇ?   

-ಇಂಥಹದ್ದೊಂದು ಸಂಶಯವನ್ನು ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಶುಕ್ರವಾರ ಬಹಿರಂಗ ಪಡಿಸಿದರು.ಜಿಲ್ಲೆಯ ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ವಾಡಿ-ಗುಲ್ವರ್ಗ ರೈಲ್ವೆ ವಿದ್ಯುದೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, `2003ರಲ್ಲಿ ಭಾರತೀಯ ರೈಲ್ವೆ ರೂ 6 ಸಾವಿರ ಕೋಟಿ ನಷ್ಟದಲ್ಲಿತ್ತು. 2013ರಲ್ಲಿ ರೂ 25 ಸಾವಿರ ಕೋಟಿ ನಷ್ಟದಲ್ಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಾಕಿಸ್ತಾನದಂತೆ ನಮ್ಮಲ್ಲೂ ರೈಲ್ವೆ ಇಲಾಖೆ ಮುಚ್ಚಿ ಹೋದರೆ ಆಶ್ಚರ್ಯ ವಿಲ್ಲ' ಎಂದು ಆತಂಕ ವ್ಯಕ್ತಪಡಿಸಿದರು.`ರೈಲ್ವೆಗೆ 100 ರೂಪಾಯಿ ಲಾಭವಾದರೆ ಅದರಲ್ಲಿ ಪ್ರಯಾಣಿಕರಿಂದ ಬಂದ ಆದಾಯ ಶೇ 25ರಷ್ಟು ಮಾತ್ರ ಇರುತ್ತದೆ. ಸರಕು ಸಾಗಣೆ ಯಿಂದ ಶೇ 64ರಿಂದ 67ರಷ್ಟು ಆದಾಯ ಬರುತ್ತದೆ. ಆದಾಗ್ಯೂ, ರೈಲ್ವೆ ಇಲಾಖೆ ನಷ್ಟದಲ್ಲಿದೆ. ಇದನ್ನು ಸರಿದೂಗಿಸುವ ಉದ್ದೇಶ  ದಿಂದ ರೈಲು ಪ್ರಯಾಣದರ ಪ್ರಾಧಿಕಾರ (ಆರ್‌ಟಿಎ) ರಚನೆಗೆ ಅನುಮೋದನೆ ಪಡೆಯಲಾಗಿದ್ದು, ಪ್ರಯಾಣ ಹಾಗೂ ಸರಕು ಸಾಗಣೆ ದರ ಏರಿಕೆಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಚರ್ಚಿಸಿ ನಷ್ಟದ ಪ್ರಮಾಣ ತಗ್ಗಿಸಲು ಪ್ರಯತ್ನಿಸಲಾಗುವುದು' ಎಂದು ಹೇಳಿದರು.`ಭಾರತೀಯ ರೈಲ್ವೆಯಲ್ಲಿ 14 ಲಕ್ಷ ಕಾಯಂ ನೌಕರರು, 6 ಲಕ್ಷ ಗುತ್ತಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 12 ಲಕ್ಷ ನೌಕರರು ಪಿಂಚಣಿ ಪಡೆಯುತ್ತಿದ್ದಾರೆ.  ದೇಶದಲ್ಲಿ ಪ್ರತಿ ನಿತ್ಯ 2.30 ಕೋಟಿ ಪ್ರಯಾಣಿಕರು ರೈಲಿನಲ್ಲಿ ಸಂಚಾರ ಮಾಡುತ್ತಿದ್ದು, ಬಡವರ ಪಾಲಿಗೆ ರೈಲು ಅತ್ಯುಪಯುಕ್ತವಾಗಿದೆ. ಹೀಗಾಗಿ, ಪ್ರಯಾಣ ದರ ಏರಿಕೆ ಮಾಡುವುದು ಕಷ್ಟ ಸಾಧ್ಯ. ಈ ಬಗ್ಗೆ ಕ್ರಮಕೈಗೊಳ್ಳಲು ರೈಲು ಪ್ರಯಾಣದ ಪ್ರಾಧಿಕಾರ ರಚಿಸಲಾಗಿದೆ' ಎಂದು ಪುನರುಚ್ಚರಿಸಿದರು.`ಮುಂಬೈ- ಚೆನ್ನೈ ರೈಲ್ವೆ ವಿದ್ಯುದೀಕರಣ ಕಾಮಗಾರಿಗೆ ರೂ 802 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ವಾಡಿ-ಗುಲ್ಬರ್ಗ ಮಧ್ಯೆ ವಿದ್ಯುದೀಕರಣ ಮಾಡಬೇಕು ಎಂಬ ಪ್ರಸ್ತಾವವನ್ನು 2009ರಲ್ಲೇ ಸಿದ್ಧಪಡಿಸಲಾ ಗಿತ್ತು. ಆದರೆ, ಯೋಜನೆಯ ಅನುಷ್ಠಾನ ನನೆಗುದಿಗೆ ಬಿದ್ದಿತ್ತು. ವಿದ್ಯುದೀಕರಣ ಕಾಮಗಾರಿ ಯಿಂದ ಡೀಸೆಲ್, ಸಮಯ ಉಳಿತಾಯವಾಗ ಲಿದ್ದು, ಎಂಜಿನ್‌ನ ದಕ್ಷತೆಯೂ ಹೆಚ್ಚಲಿದೆ. ಇದೇ ಮಾದರಿಯಲ್ಲಿ ಬೀದರ್-ಗುಲ್ಬರ್ಗ ಹೊಸ ಮಾರ್ಗ ರಚಿಸುವ ಬಗ್ಗೆ ಚಿಂತನೆ ನಡೆದಿದೆ. ರಾಜ್ಯದ ವಿವಿಧೆಡೆ ಜೋಡಿ ರೈಲು ಹಳಿ ನಿರ್ಮಾಣ ಹಾಗೂ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿವೆ. ಒಟ್ಟಾರೆ, ಬಡವರ ಪಾಲಿನ ಆಶಾಕಿರಣವಾಗಿರುವ ರೈಲ್ವೆಗೆ ಕಾಯಕಲ್ಪ ನೀಡಲು ಎಲ್ಲ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು' ಎಂದು ಭರವಸೆ ನೀಡಿದರು.ವಾಡಿ- ಗುಲ್ಬರ್ಗ ವಿದ್ಯುದೀಕರಣ ಕಾಮಗಾರಿಗೆ ಚಾಲನೆ

ಗುಲ್ಬರ್ಗ: ಬಹು ನಿರೀಕ್ಷಿತ ವಾಡಿ-ಗುಲ್ಬರ್ಗ ನಡುವಿನ ರೈಲು ಸಂಪರ್ಕದ ವಿದ್ಯುದೀಕರಣ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವಾಡಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ಮತ್ತು 2ರಲ್ಲಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.ಈ ಯೋಜನೆಗೆ ಒಟ್ಟು ರೂ 42.41 ಕೋಟಿ ವೆಚ್ಚವಾಗಲಿದ್ದು, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಬಂಡವಾಳ ಹೂಡಿದೆ. ವಾಡಿ-ಗುಲ್ಬರ್ಗ ಸೆಕ್ಷನ್ ಮಾರ್ಗ ಒಟ್ಟು 36.36 ಕಿ.ಮೀ ಮತ್ತು ಹಳಿಯು 99 ಕಿ.ಮೀ ಇದೆ. ಮಾರ್ತೂರಿನಲ್ಲಿ ಒಂದು ಟ್ರಾಕ್ಷನ್ ಸಬ್‌ಸ್ಟೇಷನ್, ವಾಡಿಯಲ್ಲಿ ಸೆಕ್ಷನಿಂಗ್ ಪೋಸ್ಟ್ ಮತ್ತು ಶಹಾಬಾದ್, ಹಿರೇನಂದೂರು ಹಾಗೂ ಗುಲ್ಬರ್ಗದಲ್ಲಿ 3 ಸಬ್ ಸೆಕ್ಷನ್ ಹೊಂದಿದೆ.ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ವಾಡಿ- ಗುಲ್ಬರ್ಗ ರೈಲ್ವೆ ವಿದ್ಯುದೀಕರಣದೊಂದಿಗೆ ಸಿಕಂದರಾಬಾದ್-ವಾಡಿ- ಗುಲ್ಬರ್ಗ ಸಂಪೂರ್ಣ ಮಾರ್ಗವು 25 ಕೆ.ವಿ ಎ.ಸಿ ಟ್ರಾಕ್ಷನ್‌ಗೊಳ್ಳಲಿದೆ. ಇದರಿಂದ ಸೆಕ್ಷನ್‌ನ ಎರಡೂ ಕಡೆ ರೈಲು ಚಾಲನೆಯ ದಕ್ಷತೆಯಲ್ಲಿ ಉತ್ತಮಗೊಳ್ಳುವ ಜತೆಗೆ ಇಂಧನ (ಡೀಸೆಲ್) ಉಳಿತಾಯವಾಗಲಿದೆ.ಮೇಲ್ಸೆತುವೆಗೆ ಪುನರ್ ನಿರ್ಮಾಣ: 46 ವರ್ಷಗಳಷ್ಟು ಹಳೆಯದಾದ ನಗರದ ನೂತನ ಜೇವರ್ಗಿ ರಸ್ತೆಯಲ್ಲಿರುವ (ಮದರ್ ತೆರೇಸಾ ಶಾಲೆ ಬಳಿ) ರೈಲ್ವೆ ಮೇಲ್ಸೆತುವೆಯ ಪುನರ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಲಾಯಿತು.ಈಗಿರುವ ಮೇಲ್ಸೆತುವೆ 1967ರಲ್ಲಿ ನಿರ್ಮಾಣವಾಗಿದ್ದು, ಎರಡು ಲೇನ್ (7.5 ಮೀ.) ಅಗಲವಿದೆ. ಇದನ್ನು ವಿಸ್ತರಿಸಲು ಮುಂದಾಗಿರುವ ದಕ್ಷಿಣ ರೈಲ್ವೆ ಹಾಗೂ ರೈಲ್ವೆ ವಿಕಾಸ ನಿಗಮ ನಿಯಮಿತ ಸಂಸ್ಥೆಯು ಎರಡು ಪ್ರಮುಖ ಲೇನ್ ಟ್ರ್ಯಾಕ್‌ಗಳು, ಬೀದರ್- ಗುಲ್ಬರ್ಗ ಲೇನ್, ಸ್ಟಾಬ್ಲಿಂಗ್ ಲೇನ್ ಮತ್ತು ಒಂದು ಹೆಚ್ಚುವರಿ ಲೇನ್ ಮೂಲಕ 5 ರೈಲ್ವೆ ಹಳಿಗಳು ಹಾದುಹೋಗುವಂತೆ ರಸ್ತೆ ಮೇಲ್ಸೆತುವೆಯನ್ನು 24 ಮೀಟರ್ ಅಗಲ ಮಾಡಲು ಯೋಜನೆ ರೂಪಿಸಲಾಗಿದೆ. ಒಟ್ಟು ರೂ 40 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, 2015ರ ನವೆಂಬರ್‌ಗೆ ಕಾಮಗಾರಿ ಪೂರ್ಣಗೊಳ್ಳಲಿದೆ.`ಅಫಜಲಪುರ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ 28 ಕೋಟಿ ಅನುದಾನ'

ಗುಲ್ಬರ್ಗ: ನಗರದ ಎಸ್.ಕೆ. ಕಾಂತಾ ಕಾಲೊನಿಯಿಂದ ಅಫಜಲಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡಲು ರೂ 28 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು' ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಜೇವರ್ಗಿ ರಸ್ತೆಯ ಮೇಲ್ಸೆತುವೆ ಪುನರ್‌ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಮಾನವ ರಹಿತ ರೈಲ್ವೆ ಕ್ರಾಸಿಂಗ್ ಮುಚ್ಚಲಾಗುವುದು. ಅಲ್ಲಿ ಮಾನವ ಸಹಿತ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು' ಎಂದರು.`ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜವಳಿ ಪಾರ್ಕ್‌ಗೆ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ರೂ 18 ಕೋಟಿ ಅನುದಾನ ಮಂಜೂರು ಮಾಡಿದ್ದು, ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದಕ್ಕೆ ಶಹಾಬಾದ್ ರಸ್ತೆಯಲ್ಲಿ ಜಾಗ ಗುರುತಿಸಲಾಗಿದ್ದು, ರಾಜ್ಯ ಸರ್ಕಾರ ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಸಂವಿಧಾನದ 371 (ಜೆ) ತಿದ್ದುಪಡಿಯಿಂದ ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ' ಎಂದರು.ಶಾಸಕರಾದ ಅಮರನಾಥ ಪಾಟೀಲ. ದತ್ತಾತ್ರೇಯ ಪಾಟೀಲ ರೇವೂರ, ಡಾ.ಅಜಯ್‌ಸಿಂಗ್, ರೈಲ್ವೆ ಮಂಡಳಿ ಸದಸ್ಯ ಕುಲಭೂಷಣ್, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್, ಜಿ.ಪಂ. ಸಿಇಒ ಪಲ್ಲವಿ ಆಕುರತಿ, ಎಸ್ಪಿ ಅಮಿತ್‌ಸಿಂಗ್, ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ್ ನಿಗ್ಗುಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಇದ್ದರು.ಇಂಧನ ಉಳಿತಾಯ

ವಿದ್ಯುದೀಕರಣ ಕಾಮಗಾರಿಯಿಂದ ಡೀಸೆಲ್ ಉಳಿತಾಯವಾಗಲಿದ್ದು, ರೈಲ್ವೆ ಎಂಜಿನ್‌ನ ದಕ್ಷತೆ, ವೇಗ ಹೆಚ್ಚಲಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಒಟ್ಟು ರೂ 42.41 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು.

-ಬಿ.ಪಿ. ಖರೆ, ಮುಖ್ಯ ವ್ಯವಸ್ಥಾಪಕ, ದಕ್ಷಿಣ ಮಧ್ಯ ರೈಲ್ವೆಜನರಲ್ಲಿ `ವಿದ್ಯುತ್'ಸಂಚಲನ

ವಾಡಿ-ಗುಲ್ಬರ್ಗ ರೈಲ್ವೆ ವಿದ್ಯುದೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಖರ್ಗೆ ಅವರು ಇಲ್ಲಿನ ಜನತೆಯಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಮಾನವೀಯತೆ ಪ್ರದರ್ಶಿಸಬೇಕು. ಬದುಕಿನ ಬಂಡಿ ಸಾಗಿಸಲು ಗುಳೆ ಹೋಗುವ ಜನತೆಯನ್ನು ನಿಲ್ದಾಣದ ಆವರಣದಲ್ಲಿ ಪ್ರೀತಿ, ವಿಶ್ವಾಸದಿಂದ ಕಾಣಬೇಕು. ರೈಲು ನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಸೇವೆ ಒದಗಿಸಬೇಕು.

-ಡಾ.ಉಮೇಶ್ ಜಾಧವ, ಶಾಸಕಕಾಮಗಾರಿ ಖುಷಿ ತಂದಿದೆ

ಖರ್ಗೆ ಅವರು ರೈಲ್ವೆ ಸಚಿವರಾದ ಬಳಿಕ ನಮ್ಮ ಭಾಗದಲ್ಲಿ ರೂ 400 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಖುಷಿ ತಂದಿದೆ. ಅದೇ ರೀತಿ ಹೈದರಾಬಾದ್-ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಾಜ್ಯದ ಎಲ್ಲ ಪ್ರಮುಖ ಜಿಲ್ಲೆಗಳಿಗೂ ರೈಲು ಸಂಪರ್ಕ ಕಲ್ಪಿಸಬೇಕು.

-ಇಕ್ಬಾಲ್ ಅಹಮ್ಮದ್ ಸರಡಗಿ,

ಮಾಜಿ ಸಂಸದ
ಕ್ರಾಂತಿಕಾರಿ ಬದಲಾವಣೆ

ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಆ ಇಲಾಖೆಗೆ ಹೊಸ ರೂಪು-ರೇಷೆ ನೀಡಿದ್ದರು. ಅದೇ ರೀತಿ ಈಗ ರೈಲ್ವೆಯಲ್ಲಿ ಅಪಾರ ಬದಲಾವಣೆ, ಅಭಿವೃದ್ಧಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಕಾಮಗಾರಿಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕು. ಆದಷ್ಟು ಬೇಗ ಇಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.

-ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ಸಚಿವ

Post Comments (+)