ರೈಲ್ವೆ ತಂಡಕ್ಕೆ ಸಮಗ್ರ ಪ್ರಶಸ್ತಿ

6
ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ತೆರೆ: ಪೂವಮ್ಮ ಚಿನ್ನದ ಸಾಧನೆ

ರೈಲ್ವೆ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:

ರಾಂಚಿ (ಪಿಟಿಐ): ಮಳೆಯ ಅಬ್ಬರದ ನಡುವೆಯೂ ಪಾರಮ್ಯ ಮೆರೆದ ರೈಲ್ವೆ ತಂಡ ಇಲ್ಲಿ ನಡೆದ 53ನೇ  ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಭರವಸೆಯ ಓಟಗಾರ್ತಿ ಒಎನ್‌ಜಿಸಿಯ ದ್ಯುತಿ ಚಾಂದ್‌ ಇಲ್ಲಿ ಎರಡನೇ ಬಂಗಾರ ಗೆದ್ದುಕೊಂಡರು.ಮಂಗಳವಾರ ಕೊನೆಗೊಂಡ ಅಥ್ಲೆಟಿಕ್ಸ್‌ನ 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ದ್ಯುತಿ 24.02 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಚಿನ್ನ ಗೆದ್ದುಕೊಂಡರು. ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ದ್ಯುತಿ 100ಮೀಟರ್‌ ಓಟದಲ್ಲೂ ಬಂಗಾರದ ಸಾಮರ್ಥ್ಯ ತೋರಿದರು. ಆದರೆ, ಕೊನೆಯ ದಿನ ಕರ್ನಾಟಕಕ್ಕೆ ನಿರಾಸೆ ಕಾಡಿತು.ಚೇತನ್‌ಗೆ ಕಂಚು: ಕರ್ನಾಟಕದ ಚೇತನ್‌ ಹೈಜಂಪ್‌ ಸ್ಪರ್ಧೆಯಲ್ಲಿ ಕಂಚು ಗೆದ್ದುಕೊಂಡರು. ಸೋಮವಾರ ಈ ಅಥ್ಲೀಟ್‌ 2.05ಮೀಟರ್ ಎತ್ತರ ಜಿಗಿದು ಈ ಸಾಧನೆ ಮಾಡಿದರು. ಸರ್ವಿಸಸ್‌ನ ಜಿತಿನ್‌ ಸಿ. ಥಾಮಸ್‌ (ಎತ್ತರ: 2.11ಮೀ.) ಚಿನ್ನ ಗೆದ್ದುಕೊಂಡರೆ, ಎ. ಶಹಾಜು (ಎತ್ತರ: 2.08ಮೀ.) ಬೆಳ್ಳಿ ತಮ್ಮದಾಗಿಸಿಕೊಂಡರು.ಕರ್ನಾಟಕದ ಅಶ್ವಿನಿ ಅಕ್ಕುಂಜಿ 400ಮೀಟರ್‌ ಓಟದ ಸ್ಪರ್ಧೆಯಲ್ಲಿ ನೀರಸ ಪ್ರದರ್ಶನ ತೋರಿದರು. ನವದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬಂಗಾರ ಜಯಿಸಿದ್ದ ಈ ಅಥ್ಲೀಟ್‌ ಇಲ್ಲಿ 55.22ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ಆದರೆ, ಒಎನ್‌ಜಿಸಿ ತಂಡ­ವನ್ನು ಪ್ರತಿನಿಧಿಸುವ ಕರ್ನಾಟಕದ ಎಂ.ಆರ್‌. ಪೂವಮ್ಮ ಈ ವಿಭಾಗದಲ್ಲಿ ಬಂಗಾರದ ಸಾಮರ್ಥ್ಯ ತೋರಿದರು. ನಿಗದಿತ ಗುರಿಯನ್ನು ಪೂವಮ್ಮ 53.96ಸೆಕೆಂಡ್‌ಗಳಲ್ಲಿ ಮುಟ್ಟಿದರೆ, ರೈಲ್ವೆಸ್‌ನ ಟಿಂಟು ಲೂಕಾ (ಕಾಲ: 53.98ಸೆ.) ಬೆಳ್ಳಿ ಪದಕದ ಒಡೆಯರಾದರು.4X100 ಮೀಟರ್‌ ಓಟದ ಸ್ಪರ್ಧೆಯಲ್ಲಿ ರೈಲ್ವೆಸ್‌ ಚಿನ್ನ ಬಾಚಿಕೊಂಡಿತು. ಮನ್‌ದೀಪ್‌ ಕೌರ್‌, ಮರ್ಲಿನ್ ಕೆ. ಜೋಸೆಫ್‌, ಪಿ.ಕೆ. ಪ್ರಿಯಾ ಮತ್ತು ಶಾರದಾ ಅವರನ್ನೊಳಗೊಂಡ ತಂಡ 46.35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿತು. 4X400 ಸ್ಪರ್ಧೆಯಲ್ಲಿ ಕೇರಳ ಪಾರಮ್ಯ ಮೆರೆಯಿತು.

ಅಸಮಾಧಾನ: ಈ ಕ್ರೀಡಾಕೂಟದಲ್ಲಿ ಮಾಡಲಾಗಿದ್ದ ವ್ಯವಸ್ಥೆಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.‘ವಿದ್ಯುತ್‌ ವಿಭಾಗದವರು ಎಚ್ಚರಿಕೆ ವಹಿಸಬೇಕಾಗಿತ್ತು. ಅವರ ಬೇಜವಾಬ್ದಾರಿಯಿಂದ ಕ್ರೀಡಾಂಗಣದಲ್ಲಿ ಮಂದ ಬೆಳಕು ಕಾಡಿತು’ ಎಂದು ಜಾರ್ಖಂಡ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷರೇ ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry