ರೈಲ್ವೆ ನೇಮಕಾತಿ: ಪ್ರತಿಭಟನೆ, ಕರವೇ ಕಾರ್ಯಕರ್ತರ ಬಂಧನ

7

ರೈಲ್ವೆ ನೇಮಕಾತಿ: ಪ್ರತಿಭಟನೆ, ಕರವೇ ಕಾರ್ಯಕರ್ತರ ಬಂಧನ

Published:
Updated:

ಬೆಂಗಳೂರು: ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ‘ಡಿ’ ಗ್ರೂಪ್ ಹುದ್ದೆಗಳ ದೈಹಿಕ ಅರ್ಹತಾ ಪರೀಕ್ಷೆ ನಡೆಯುತ್ತಿದ್ದ ನಗರದ ಯಶವಂತಪುರ ರೈಲು ನಿಲ್ದಾಣದ ಮೈದಾನಕ್ಕೆ ಸೋಮವಾರ ನುಗ್ಗಿ ಪ್ರತಿಭಟನೆ ಮಾಡಲೆತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ 80ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಬಂಧಿಸಿದರು.‘ಡಿ’ ಗ್ರೂಪ್ ಹುದ್ದೆಗಳಿಗೆ ಉತ್ತರ ಭಾರತದ ಅಭ್ಯರ್ಥಿಗಳನ್ನೇ ಭರ್ತಿ ಮಾಡಲು ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದರಿಂದ ರಾಜ್ಯದ ಅಭ್ಯರ್ಥಿಗಳಿಗೆ ವಂಚನೆಯಾಗುತ್ತಿದೆ’ ಎಂದು ಆರೋಪಿಸಿದ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿ ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿಪಡಿಸಲು ಯತ್ನಿಸಿದರು.ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾಗಿದ್ದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಸಂಜೆ ಬಿಡುಗಡೆ ಮಾಡಿದರು.ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ರೈಲ್ವೆ ವಿಭಾಗೀಯ ಕಚೇರಿಗಳಲ್ಲಿ ಖಾಲಿ ಇದ್ದ 4,701 ಡಿ ಗ್ರೂಪ್ ಹುದ್ದೆಗಳಿಗೆ 2007ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ರಾಜ್ಯದ ಮಾಧ್ಯಮಗಳಲ್ಲಿ ಜಾಹೀರಾತನ್ನೇ ನೀಡಿರಲಿಲ್ಲ. ಇದರಿಂದಾಗಿ ಹುದ್ದೆಗಳ ಬಗ್ಗೆ ಮಾಹಿತಿ ಸಿಗದೆ ರಾಜ್ಯದ ಅಭ್ಯರ್ಥಿಗಳು ಅರ್ಜಿಯನ್ನೇ ಸಲ್ಲಿಸಿರಲಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.ಅಲ್ಲದೇ 2007ರಲ್ಲಿ ಉತ್ತರ ಭಾರತದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ನೇಮಕಾತಿ ನಡೆಸದಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರಿಂದ ಪರೀಕ್ಷಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವ ಇಲಾಖೆಯು ಈ ಹಿಂದೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನೇ ದೈಹಿಕ ಅರ್ಹತಾ ಪರೀಕ್ಷೆಗೆ ಪರಿಗಣಿಸಿದೆ ಎಂದು ಪ್ರತಿಭಟನಾನಿರತರು ದೂರಿದರು.2007ರಲ್ಲಿ ಅರ್ಜಿ ಆಹ್ವಾನಿಸಿದ್ದಾಗ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಮಮತಾ ಬ್ಯಾನರ್ಜಿ ಅವರು ರೈಲ್ವೆ ಸಚಿವರಾದ ನಂತರ 2009ರಲ್ಲಿ ಕನ್ನಡ ಸೇರಿದಂತೆ ಯಾವುದೇ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದರು ಎಂದರು.ಇದೀಗ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ 2007ರ ಅಧಿಸೂಚನೆ ಅನ್ವಯ ಅಭ್ಯರ್ಥಿಗಳು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಈ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನಿಸಬೇಕು ಮತ್ತು ಆ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು. 2007ರ ಅಧಿಸೂಚನೆಯನ್ನು ರದ್ದುಪಡಿಸಿ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಇದೇ ಬೇಡಿಕೆಗಳ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯರು ನಗರ ರೈಲು ನಿಲ್ದಾಣ ಸಮೀಪ ಇರುವ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry