ರೈಲ್ವೆ ಪೊಲೀಸ್‌ ಠಾಣೆಗೆ ಮಳೆ ನೀರು

7

ರೈಲ್ವೆ ಪೊಲೀಸ್‌ ಠಾಣೆಗೆ ಮಳೆ ನೀರು

Published:
Updated:

ಬೆಳಗಾವಿ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸಂಜೆಯಿಂದ ಭಾರಿ ಮಳೆಯಾಗಿದೆ. ರೈಲು ನಿಲ್ದಾಣದ ಪೊಲೀಸ್‌ ಠಾಣೆಯೊಳಗೆ ನೀರು ನುಗ್ಗಿದೆ.ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸುಮಾರು ಸಂಜೆ 5 ಗಂಟೆಯಿಂದ ಆರಂಭವಾದ ಮಳೆಯು ಕೆಲ ಕ್ಷಣಗಳಲ್ಲೇ ಅಬ್ಬರದಿಂದ ಸುರಿಯ ತೊಡಗಿತು. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆಯು ನಿರಂತರವಾಗಿ ಸುರಿಯತೊಡಗಿತ್ತು.ಏಕಾಏಕಿ ಮಳೆ ಸುರಿದಿದ್ದರಿಂದ ರೈಲು ನಿಲ್ದಾಣದ ಪೊಲೀಸ್‌ ಠಾಣೆಯ ಒಳಗೆ ನೀರು ನುಗ್ಗಿದೆ. ಸಬ್ ಇನ್‌ಸ್ಪೆಕ್ಟರ್‌ ಕೊಠಡಿ, ಬರಹಗಾರರ ಕೊಠಡಿಗಳಲ್ಲಿ ಸುಮಾರು 1 ಅಡಿಯಷ್ಟು ನೀರು ಸಂಗ್ರಹಗೊಂಡಿತ್ತು. ಇದರಿಂದಾಗಿ ಕೆಲವು ದಾಖಲೆ ಪತ್ರಗಳು ನೀರಿನಲ್ಲಿ ನೆನೆದಿವೆ. ನೀರಿನಿಂದ ದಾಖಲೆ ಪತ್ರಗಳನ್ನು ರಕ್ಷಿಸಲು ಪೊಲೀಸ್‌ ಸಿಬ್ಬಂದಿ ಪರದಾಡಬೇಕಾಯಿತು. ಪೊಲೀಸ್‌ ಸಿಬ್ಬಂದಿ ಬಕೆಟ್‌ಗಳ ಸಹಾಯದಿಂದ ನೀರನ್ನು ಹೊರ ಹಾಕುತ್ತಿದ್ದಾರೆ.ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡು ಸಾಗಿದರು. ನಿರಂತರವಾಗಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಚರಂಡಿಗಳಲ್ಲಿ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದ್ದವು. ಇದರಿಂದಾಗಿ ಪಾದಚಾರಿಗಳು ಸಂಚರಿಸಲು ಪ್ರಯಾಸ ಪಡಬೇಕಾಯಿತು. ಅಲ್ಲಲ್ಲಿ ತಗ್ಗಿನ ಪ್ರದೇಶದಲ್ಲಿರುವ ರಸ್ತೆಗಳ ಮೇಲೆ ನೀರು ಹರಿದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಗರದ ಗ್ಲೋಬ್‌ ಸಿನಿಮಾ ಮಂದಿರದ ಬಳಿ ಖಾನಾಪುರ ರಸ್ತೆ ಹಾಗೂ ಗೋಗಟೆ ವೃತ್ತದ ಬಳಿ ರಸ್ತೆ ಮೇಲೆ ನೀರು ಹರಿದಿದ್ದರಿಂದ ವಾಹನ ಸಂಚಾರ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.ಮಳೆಯ ಜೊತೆ ಗುಡುಗು ಸಹ ಅಬ್ಬರಿಸಿದ್ದು, ಸಿಡಿಲು ಬಿದ್ದಿದೆ. ಯಾವುದೇ ಜೀವ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಬುಧವಾರ ರಾತ್ರಿಯೂ ಉತ್ತಮವಾಗಿ ಮಳೆ ಸುರಿದಿತ್ತು. ಗುರುವಾರವು ಮಳೆ ಸುರಿದಿದ್ದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪರದಾ ಡುವಂತಾಯಿತು. ಸಂಜೆಯಾಗುತ್ತಿದ್ದಂತೆ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶನ ವಿಗ್ರಹಗಳನ್ನು ವೀಕ್ಷಿಸಲು ಮಾರುಕಟ್ಟೆಗೆ ಬರುತ್ತಿದ್ದರು. ಆದರೆ, ಮಳೆ ಸುರಿದಿರುವುದರಿಂದ ಭಕ್ತರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ಶಾಲೆಗೆ ಊಟದ ತಾಟು ದೇಣಿಗೆ

ಬೆಳಗಾವಿ:
ತಾಲ್ಲೂಕಿನ ವಿಜಯ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಮರಾಠಿ ಶಾಲೆಗಳಿಗೆ ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ದೇಸಾಯಿ, ಮಹೇಂದ್ರ ಮಾಳಗಿ, ಬಿ.ಆರ್‌. ಸಾಂಬ್ರೇಕರ, ಎ.ಎ.ಕದಮ್‌ ಹಾಗೂ ರವಿ ಕದಮ್ ಅವರು 270 ಊಟದ ತಟ್ಟೆಗಳು ಹಾಗೂ 270 ಲೋಟಗಳನ್ನು ದೇಣಿಗೆಯಾಗಿ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಮುನ್ನೋಳಕರ ಮಾತನಾಡಿ, ಶಾಲೆಗಳ ಸ್ಥಿತಿಗತಿ ಸುಧಾರಣೆಗೆ ಸಮಾಜ ಚಿಂತಿಸಬೇಕು. ಪ್ರತಿಯೊಬ್ಬರು ಶಾಲೆಗಳಿಗೆ ಅಗತ್ಯವಿರುವ ವಸ್ತುಗಳನ್ನು ದೇಣಿಗೆ ನೀಡುವ ಮೂಲಕ ಶಾಲೆಯ ಪ್ರಗತಿಗೆ ಶ್ರಮಿಸಬೇಕು ಎಂದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಲ್.ಎಚ್. ಪೂಜಾರಿ, ಶಿವರಾಜ ವೆಸನೆ ಉಪಸ್ಥಿತರಿದ್ದರು.ಎಸ್.ಎಸ್.ಅರಳಗುಂಡಿ ಸ್ವಾಗತಿಸಿದರು. ಎಸ್.ಜಿ.ಧಾಂದಲೆ ವಂದಿಸಿದರು. ಬಸವರಾಜ ಸುಣಗಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry