ಶುಕ್ರವಾರ, ಜೂನ್ 25, 2021
21 °C

ರೈಲ್ವೆ ಬಜೆಟ್‌ನಲ್ಲಿ ಬೀದರ್‌ಗೆ ಬಂಪರ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕೇಂದ್ರ ರೈಲ್ವೆ ಬಜೆಟ್ ಈ ಬಾರಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯೊಂದನ್ನು ಹೊತ್ತು ತಂದಿದೆ.

ಕೇಂದ್ರ ರೈಲ್ವೆ ಸಚಿವ ದಿನೇಶ ತ್ರಿವೇದಿ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಬೀದರ್-ಸಿಕಂದ್ರಾಬಾದ್ ಇಂಟರ್‌ಸಿಟಿ ರೈಲು ಓಡಿಸುವ ಕುರಿತು ಘೋಷಣೆ ಮಾಡುವ ಮೂಲಕ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದಾರೆ. ಜತೆಗೆ ಬೀದರ್- ಗುಲ್ಬರ್ಗ ರೈಲು ಮಾರ್ಗ ನಿರ್ಮಾಣಕ್ಕೂ ಕಾಲಮಿತಿ ನಿಗದಿಪಡಿಸಿರುವುದು ಖುಷಿ ತಂದಿದೆ.ಬೀದರ್- ಸಿಕಂದ್ರಾಬಾದ್ ಇಂಟರ್‌ಸಿಟಿ ರೈಲು ಆರಂಭಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆ ಆಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಹೊರಬಿದ್ದಿರುವುದು ನಾಗರಿಕರಲ್ಲಿ ಸಂತಸ ಉಂಟು ಮಾಡಿದೆ.ಬೀದರ್ ನಗರವು ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೆರೆಯ ಆಂಧ್ರಪ್ರದೇಶದ ಹೈದರಾಬಾದ್‌ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೈದರಾಬಾದ್ ಪ್ರಮುಖ ವ್ಯಾಪಾರ ಕೇಂದ್ರ ಆಗಿರುವುದರಿಂದ ಜಿಲ್ಲೆಯ ವ್ಯಾಪಾರಿಗಳು ನಿತ್ಯವೂ ಅಲ್ಲಿಗೆ ಹೋಗಿ ಬರುತ್ತಾರೆ. ತುರ್ತು ವೈದ್ಯಕೀಯ ಸೇವೆ ಮತ್ತಿತರ ಕಾರಣಗಳಿಗಾಗಿ ಅಲ್ಲಿಗೆ ಪ್ರಮಾಣ ಬೆಳೆಸುತ್ತಾರೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಲ್ಲಿ ನಿತ್ಯ ನೂರಾರು ಜನ ಬೀದರ್‌ನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸುತ್ತಾರೆ. ಹಾಗೂ ಅಷ್ಟೇ ಸಂಖ್ಯೆಯ ಜನ ಹೈದರಾಬಾದ್‌ನಿಂದ ಬೀದರ್‌ಗೆ ಬರುತ್ತಾರೆ. ಇದೀಗ ಬೀದರ್- ಸಿಕಂದ್ರಾಬಾದ್ ನಡುವೆ ಇಂಟರ್‌ಸಿಟಿ ರೈಲು ಸಂಚಾರ ಆರಂಭ ಆಗಲಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ನಾಗರಿಕರು.ಸಂತಸ: ಕಳೆದ ಕೆಲ ವರ್ಷಗಳಿಂದ ರೈಲ್ವೆ ಬಜೆಟ್‌ನಲ್ಲಿ ಬೀದರ್‌ಗೆ ಏನೂ ಸಿಕ್ಕಿರಲಿಲ್ಲ. ಈ ಬಾರಿ ಬೀದರ್- ಸಿಕಂದ್ರಾಬಾದ್ ಇಂಟರ್‌ಸಿಟಿ ರೈಲು ಸಂಚಾರ ಘೋಷಿಸಿರುವುದು ಹರ್ಷವುಂಟು ಮಾಡಿದೆ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಪ್ರತಿಕ್ರಿಯಿಸಿದ್ದಾರೆ.ಇಂಟರ್‌ಸಿಟಿ ರೈಲು ಸಂಚಾರದಿಂದ ಜಿಲ್ಲೆಯ ಜನರಿಗೆ ಪ್ರಯೋಜನವಾಗಲಿದೆ. ವ್ಯಾಪಾರ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳುವವರಿಗೆ ಅನುಕೂಲಕರವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.ಒಟ್ಟಾರೆ ಬಜೆಟ್ ಜಿಲ್ಲೆಗೆ ಖುಷಿ ತಂದಿದೆ. ಇಂಟರ್‌ಸಿಟಿ ರೈಲು ಸಂಚಾರ ಘೋಷಿಸಿದ್ದಕ್ಕಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಇದಕ್ಕಾಗಿ ಶ್ರಮಿಸಿರುವ ಸಂಸದ ಎನ್. ಧರ್ಮಸಿಂಗ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.