ಮಂಗಳವಾರ, ಜೂನ್ 22, 2021
28 °C

ರೈಲ್ವೆ ಬಜೆಟ್: ಉ.ಕ.ಕ್ಕೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಪ್ರತಿ ಸಲದಂತೆ ಈ ಬಾರಿಯೂ ರೈಲ್ವೆ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಸಂಸದ ಹಾಗೂ ಬಿ.ಎಸ್.ಆರ್.ಪಕ್ಷದ ಕೋರ್ ಕಮಿಟಿ ಸದಸ್ಯ ಕೆ.ವಿರೂಪಾಕ್ಷಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಮುನಿರಾಬಾದ್-ಮಹೆಬೂಬನಗರ, ಬೀದರ್-ಗುಲ್ಬರ್ಗ ಮಾರ್ಗಗಳನ್ನು ನಿರ್ಲಕ್ಷ್ಯಿಸಲಾಗಿದೆ. ಹೆಬೂಬನಗರ-ಮುನಿರಾಬಾದ್ ಮಾರ್ಗದ ಭೂಸ್ವಾಧೀನಕಾರ್ಯ ಇಷ್ಟರಲ್ಲಿಯೇ ಮುಗಿಯಬೇಕಾಗಿತ್ತು. ಇದಕ್ಕೆ ಶಾಸಕರ ಮತ್ತು ಸಂಸದರ ನಿರ್ಲಕ್ಷ್ಯತೆಯೇ ವಿಳಂಬಕ್ಕೆ ಕಾರಣ ಎಂದು ಆಪಾದಿಸಿದರು.2009ರಲ್ಲಿ ಕೊಪ್ಪಳದಿಂದ ಗಂಗಾವತಿ, ಮಾನ್ವಿಯಿಂದ ರಾಯಚೂರುವರೆಗಿನ ಮಾರ್ಗದ 6(1) ನೊಟಿಫಿಕೇಶನ್ ಮುಗಿದಿತ್ತು. ಇಂದರಗಿ-ಬೂದಗುಂಪಾ ಮಧ್ಯದ ಸೇತುವೆ ಮತ್ತು ಹಳಿ ಕೆಲಸ ಪ್ರಾರಂಭವಾಗಿತ್ತು. ತದನಂತರ ಸ್ಥಗಿತಗೊಂಡಿದೆ. ಗಂಗಾವತಿ ಸಿಂಧನೂರು ಮತ್ತು ಸಿಂಧನೂರು ಮಾನ್ವಿವರೆಗೆ ನೊಟಿಫಿಕೇಶನ್ ಆಗಿರಲಿಲ್ಲ. ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. ಶಾಸಕರು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಮುತುವರ್ಜಿವಹಿಸದ ಕಾರಣ ಯತಾಸ್ಥಿತಿಯಲ್ಲಿದೆ ಎಂದು ಅವರು ದೂರಿದರು.ರಾಯಚೂರು-ಸಿಂಧನೂರಿನಲ್ಲಿ ಸಮಾವೇಶ: ಗದಗ್‌ನಲ್ಲಿ ಬಿ.ಎಸ್.ಆರ್.ಪಕ್ಷದ ನೇತಾರ ಶ್ರೀರಾಮುಲು ಎರಡು ದಿನಗಳಕಾಲ ನಡೆಸಿದ  ಸಮಾವೇಶ  ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಎರಡು ದಿನದಲ್ಲಿ 2 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದರು.ಮಾರ್ಚ್ ಕೊನೆ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ರಾಯಚೂರು ಮತ್ತು ಸಿಂಧನೂರಿನಲ್ಲಿ, ತದನಂತರ ಕೋಲಾರದಲ್ಲಿ ಬಿ.ಎಸ್.ಆರ್.ಪಕ್ಷದ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ 371ನೇ ಕಲಂ ಹಾಗೂ ನಂಜುಂಡಪ್ಪ ವರದಿ ಜಾರಿಗೆ ತರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ರಾಮುಲು  ಕೇಳಿರುವ ಪ್ರಶ್ನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವ ಪಕ್ಷಗಳ ಮುಖಂಡರಿಗೆ ಉತ್ತರಿಸುವ ತಾಕತ್ತಿಲ್ಲ ಎಂದರು.ಸಿಂಧನೂರು ಮತ್ತು ರಾಯಚೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಬಿ.ಎಸ್.ಆರ್.ಪಕ್ಷಕ್ಕೆ ಹಲವಾರು ಮುಖಂಡರು ಸೇರ್ಪಡೆಯಾಗಲಿದ್ದಾರೆ ಎಂದು ಅವರು  ವಿವರಿಸಿದರು.ವಿ.ಎಸ್.ಎಸ್.ಎನ್. ಮಾಜಿ ಅಧ್ಯಕ್ಷ ಅಮರೇಶಪ್ಪ ಮೈಲಾರ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಫಕೀರಪ್ಪ ಹೆಡಗಿನಾಳ, ನಗರಸಭೆ ಸದಸ್ಯ ಯಂಕಪ್ಪ ಬಡಗಿ, ಕೆ.ಕರಿಯಪ್ಪ, ಶಂಬಣ್ಣ ಗುತ್ತೇದಾರ, ವೆಂಕಟೇಶ ಬಾದರ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.