ರೈಲ್ವೆ ಬಜೆಟ್: ಜಿಲ್ಲೆಗೆ ಬಂಪರ್

7

ರೈಲ್ವೆ ಬಜೆಟ್: ಜಿಲ್ಲೆಗೆ ಬಂಪರ್

Published:
Updated:

ತುಮಕೂರು: ಜಿಲ್ಲೆಗೆ ರೈಲ್ವೆ ಬಜೆಟ್‌ನಲ್ಲಿ ನಿರೀಕ್ಷೆಗೆ ಮೀರಿ ಅವಕಾಶ ದೊರೆತಿದೆ. ಜಿಲ್ಲೆಯ ಜನತೆ ಒಂದು ಕೇಳಿದರೆ ಹತ್ತಾರು ಯೋಜನೆಗಳು ಬಂದಿವೆ. ಜಿಲ್ಲೆಯ ಮಟ್ಟಿಗೆ ಬಂಪರ್ ಲಾಟರಿ ಬಂದಂತಾಗಿದೆ.ಇದುವರೆಗೆ ಎಲ್ಲಿಯೂ ಪ್ರಸ್ತಾಪವಾಗದೆ ಇದ್ದ ತುಮಕೂರು- ಚಾಮರಾಜನಗರ ನಡುವಿನ ಹೊಸ ರೈಲ್ವೆ ಯೋಜನೆ ಸಮೀಕ್ಷೆಗೆ ಬಜೆಟ್‌ನಲ್ಲಿ ಹಣ ನೀಡಲಾಗಿದೆ. ಈ ಯೋಜನೆಗಾಗಿ  ಇದುವರೆಗೆ ಎಲ್ಲಿಯೂ ಪ್ರಸ್ತಾಪ ಆಗಿರಲಿಲ್ಲ.ತುಮಕೂರು- ರಾಯದುರ್ಗ ರೈಲ್ವೆ ಯೋಜನೆಗೆ ಭೂಮಿ ವಶಪಡಿಸಿಕೊಳ್ಳಲು  ಅವಕಾಶ ನೀಡಲಾಗಿದೆ. ಕಳೆದ ಬಜೆಟ್‌ನಲ್ಲಿ ನೀಡಲಾಗಿದ್ದ ಹಣವನ್ನು ಹಾಸನ- ಬೆಂಗಳೂರು ರೈಲ್ವೆ ಮಾರ್ಗಕ್ಕೆ ವರ್ಗಾವಣೆ ಮಾಡಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ತುಮಕೂರು- ಬೆಂಗಳೂರು ವಿದ್ಯುದ್ದೀಕರಣ ಮಾರ್ಗಕ್ಕೆ ಸಮೀಕ್ಷೆ ಮುಗಿದಿದ್ದು, ಈಗ ಹಸಿರು ನಿಶಾನೆ ದೊರೆತಿದೆ. ಬೆಂಗಳೂರು- ಹುಬ್ಬಳ್ಳಿ ಮಾರ್ಗ ವಿದ್ಯುದ್ದೀಕರಣ ಯೋಜನೆಯಲ್ಲಿ ಇದು ಸೇರ್ಪಡೆಯಾಗಿದೆ.ತುಮಕೂರು- ಹುಬ್ಬಳ್ಳಿ ನಡುವೆ ಜೋಡಿ ರೈಲು ಮಾರ್ಗಕ್ಕೆ ಉದ್ದೇಶಿಸಲಾಗಿದ್ದು, ಸಮೀಕ್ಷೆಗೆ ಚಾಲನೆ ಸಿಕ್ಕಿದೆ. ಬಹುದಿನಗಳ ಬೇಡಿಕೆಯಾದ ತುಮಕೂರು- ದಾವಣಗೆರೆ ರೈಲ್ವೆ ಮಾರ್ಗ    ಸಮೀಕ್ಷೆಗೆ ಅವಕಾಶ ದೊರೆತಿದೆ. ಈಗಾಗಲೇ ಸಮೀಕ್ಷೆಯಾಗಿರುವ ತುಮಕೂರು- ಚಿತ್ರದುರ್ಗ ಮಾರ್ಗಕ್ಕೆ ಈ ಬಜೆಟ್‌ನಲ್ಲಿ ಹಣ ನೀಡಲಾಗಿದೆ. ಭೂಮಿ ವಶಕ್ಕೆ ಚಾಲನೆ ಸಿಕ್ಕಂತಾಗಿದೆ.ಬೆಂಗಳೂರು ನಗರವನ್ನು ಉಪನಗರ ರೈಲ್ವೆ ಜಾಲ ಯೋಜನೆಗೆ ಸೇರ್ಪಡೆ ಮಾಡಲಾಗಿದೆ.  ಇದರಿಂದ ಬೆಂಗಳೂರು ಸಮೀಪದ ನಗರಗಳು ‘ಲೋಕಲ್ ಟ್ರೈನ್’ ಜಾಲಕ್ಕೆ ಸೇರ್ಪಡೆಯಾಗಲಿವೆ. ತುಮಕೂರು- ಬೆಂಗಳೂರು ಈಗಾಗಲೇ ಜೋಡಿ ಮಾರ್ಗ ಆಗಿರುವುದರಿಂದ ಯೋಜನೆ ಶೀಘ್ರವಾಗಿ ಜಿಲ್ಲೆಗೆ ದೊರೆಯಬಹುದು ಎಂದು                 ನಿರೀಕ್ಷಿಸಲಾಗಿದೆ. ಇದರಿಂದ ಪ್ರತಿ ಅರ್ಧ ಗಂಟೆಗೆ ಬೆಂಗಳೂರಿಗೆ ರೈಲು ಸೌಲಭ್ಯ ದೊರೆಯಬಹುದು.ನಿಲ್ದಾಣ ಮೇಲ್ದರ್ಜೆಗೆ: ತುಮಕೂರು ನಗರ ರೈಲ್ವೆ ನಿಲ್ದಾಣ  ಮೇಲ್ದರ್ಜೆಗೆ ಬಜೆಟ್‌ನಲ್ಲಿ ಹಣ ನೀಡಲಾಗಿದೆ. ಒಟ್ಟಾರೆ ಜಿಲ್ಲೆಗೆ ನಿರೀಕ್ಷೆಗೂ ಮೀರಿ ಅವಕಾಶ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry