ಬುಧವಾರ, ಜೂನ್ 16, 2021
22 °C

ರೈಲ್ವೆ ಬಜೆಟ್: ಟಿಎಂಸಿ ವಿರೋಧ, ಕಾಂಗ್ರೆಸ್ ಮೆಚ್ಚುಗೆ, ಪ್ರತಿಪಕ್ಷ ಗೇಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ರೈಲ್ವೆ ಸಚಿವ, ತೃಣಮೂಲ ಕಾಂಗ್ರೆಸ್ ಮುಖಂಡ ದಿನೇಶ್ ತ್ರಿವೇದಿ ಮಂಡಿಸಿದ ಬಜೆಟ್‌ಗೆ ಅವರ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿದೆ. ಆಡಳಿತಾರೂಢ ಯುಪಿಎ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷ ಬಜೆಟ್‌ನ್ನು ಸಮರ್ಥಿಸಿಕೊಂಡಿದ್ದರೆ, ಪ್ರತಿಪಕ್ಷ ಬಿಜೆಪಿ ಇದನ್ನು ದೂರದೃಷ್ಟಿಯಿಲ್ಲದ ಬಜೆಟ್ ಎಂದು ಟೀಕಿಸಿದೆ.ವಿವಿಧ ಪಕ್ಷಗಳು ಮತ್ತು ಮುಖಂಡರ ಪ್ರತಿಕ್ರಿಯೆ ಹೀಗಿದೆ.

`ಏರಿಕೆ ವಾಪಸು ಪಡೆಯಲಿ~

 ರೈಲು ಪ್ರಯಾಣ ದರವನ್ನು ಹೆಚ್ಚಿಸಬಾರದಿತ್ತು. ಈ ಏರಿಕೆಯನ್ನು ವಾಪಸು ಪಡೆಯಬೇಕು.

-ತೃಣಮೂಲ ಕಾಂಗ್ರೆಸ್ ಮುಖಂಡ ಸುದೀಪ್ ಬಂಧೋಪಾಧ್ಯಾಯ`ಸಕಾರಾತ್ಮಕ ಬಜೆಟ್~

 ಇದು ಸಕಾರಾತ್ಮಕ ಬಜೆಟ್. ಇಲಾಖೆಯ ನಿರ್ವಹಣಾ ವೆಚ್ಚ ಇಳಿಸುವ ಪ್ರಸ್ತಾಪ ಶ್ಲಾಘನೀಯ.

-ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ`ಯೋಜನೆಗಳ ಕತೆ ಏನು?~


ಇದು ರೈಲ್ವೆ ಇಲಾಖೆಯು ಕೇಂದ್ರ ಸರ್ಕಾರ ಸಾಮಾನ್ಯ ಬಜೆಟ್‌ನಲ್ಲಿ ಘೋಷಿಸುವ ಅನುದಾನವನ್ನು ಆಶ್ರಯಿಸಿರುವ ಬಜೆಟ್ ಆಗಿದೆ. ಅಕಸ್ಮಾತ್ ಸಾಮಾನ್ಯ ಬಜೆಟ್‌ನಲ್ಲಿ ಇಲಾಖೆಗೆ ಸಾಕಷ್ಟು ಹಣ ನೀಡದಿದ್ದರೆ ಘೋಷಿತ ಯೋಜನೆಗಳ ಕತೆ ಏನು?

- ಪಶ್ಚಿಮ ಬಂಗಾಳ ಸಿಪಿಐ ಮುಖಂಡ ಸ್ವಪನ್ ಬ್ಯಾನರ್ಜಿ.`ದರ ಏರಿಕೆ ಅನಿವಾರ್ಯ~


ಪ್ರಯಾಣ ದರವನ್ನು ಅತ್ಯಲ್ಪ ಹೆಚ್ಚಿಸಲಾಗಿದೆ. ತೈಲ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿತ್ತು. ದೀರ್ಘ ಕಾಲದಿಂದ ಏರಿಕೆಯಾಗದ ದರವನ್ನು ಈಗ ಕೊಂಚ ಏರಿಸಲಾಗಿದೆ.

ದಿನೇಶ್ ತ್ರಿವೇದಿ  ಮಂಡಿಸಿದ ಬಜೆಟ್ ಎಲ್ಲ ವರ್ಗದ ಪ್ರಯಾಣಿಕರಿಗೂ ಒಂದಲ್ಲ ಮತ್ತೊಂದು ಕೊಡುಗೆ ನೀಡಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡಿರುವುದು ಉತ್ತಮ ನಿರ್ಧಾರ.   

  -ಕಾಂಗ್ರೆಸ್ ಮುಖ್ಯ ಸಚೇತಕಿ ಗಿರಿಜಾ ವ್ಯಾಸ್

`ಏಕಾಏಕಿ ಹೆಚ್ಚಳದಿಂದ ಹೊರೆ~

 ರೈಲು ಪ್ರಯಾಣ ದರವನ್ನು ಹೀಗೆ ಏಕಾಏಕಿ ಏರಿಸಿ ಸಾಮಾನ್ಯ ಪ್ರಯಾಣಿಕರ ಹೊರೆಯನ್ನು ಹೆಚ್ಚಿಸಬಾರದಿತ್ತು. ಈ ಹಿಂದೆಯೇ ಆಗಾಗ ಕೊಂಚ ಕೊಂಚ ಪ್ರಮಾಣದಲ್ಲಿ ಏರಿಸಬೇಕಿತ್ತು.

 ಈಗ ಒಂದೇ ಬಾರಿ ಹೆಚ್ಚಿಸಿರುವುದರಿಂದ ತೊಂದರೆಯಾಗುತ್ತದೆ. ಅದರಲ್ಲೂ, 500ರಿಂದ 1000 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಬಡವರಿಗೆ ಈ ದರ ಏರಿಕೆ ದುಬಾರಿಯೇ ಆಗಿದೆ.

-ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ`ಸುರಕ್ಷತೆಗೆ ಸ್ಪಂದಿಸಿಲ್ಲ~


ಇದು ಪ್ರಯಾಣಿಕರ ಸುರಕ್ಷತೆಯ ವಿಷಯಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಇದೊಂದು ನಿರಾಶಾದಾಯಕ ಬಜೆಟ್. ಅರ್ಧದಲ್ಲೇ ಸ್ಥಗಿತಗೊಂಡಿರುವ ಯೋಜನೆಗಳ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ.

-ಬಿಹಾರ ಮುಖ್ಯಮಂತ್ರಿ, ನಿತೀಶ್ ಕುಮಾರ್`ರೈಲ್ವೆ ಇಲಾಖೆ ಬರಡು ಹಸು~

`ಭಾರತೀಯ ರೈಲ್ವೆ ಇಲಾಖೆ ಈಗ ಬರಡು ಹಸು. ರಾಷ್ಟ್ರದಲ್ಲಿ ಸಂಚಾರದ ಜೀವನಾಡಿಯಾದ ರೈಲ್ವೆಯು ನಾನು ಸಚಿವನಾಗಿದ್ದಾಗ ಅಧಿಕ ಆದಾಯದಲ್ಲಿತ್ತು. ಅಂತಹ ಇಲಾಖೆ ಇದೀಗ ಬರಡು ಹಸುವಾಗಿದೆ~.

`ನಾನು ಸಚಿವನಾಗಿದ್ದಾಗ ಪ್ರಯಾಣ ದರವನ್ನು ಹೆಚ್ಚಿಸದಿದ್ದರೂ ರೈಲ್ವೆ ಇಲಾಖೆಯ ಆದಾಯ 7000 ಕೋಟಿ ರೂಪಾಯಿಗೂ ಅಧಿಕವಾಗಿತ್ತು~.

-ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್`ಸರಕು ಬೆಲೆ ಹೆಚ್ಚಳ~


ಇದು ಶ್ರೀಸಾಮಾನ್ಯ ವಿರೋಧಿಯಾದ ದೂರದೃಷ್ಟಿಯಿಲ್ಲದ ಬಜೆಟ್.  ಇದರಿಂದ ಇತರೆ ಸರಕುಗಳ ಬೆಲೆ ತೀವ್ರವಾಗಿ ಏರುತ್ತದೆ 

- ಬಿಜೆಪಿ`ಸ್ಪಷ್ಟತೆ ಇಲ್ಲ~


ಇದು ಯಾವ ಸ್ಪಷ್ಟತೆಯೂ ಇಲ್ಲ ನೀರಸ ಬಜೆಟ್.

- ಕ್ರಾಂತಿಕಾರಿ ಸಮಾಜವಾದಿ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಷಿತಿ ಗೋಸ್ವಾಮಿ`ಮಮತಾ ನಡೆ ಖಂಡನೀಯ~

ರೈಲ್ವೆ ಇಲಾಖೆಯಲ್ಲಿ ಸುರಕ್ಷತಾ ಯೋಜನೆಗಳಿಗೆ 4000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯಿಂದ ಸಚಿವ ದಿನೇಶ್ ತ್ರಿವೇದಿ ಪ್ರಯಾಣ ದರವನ್ನು ಕೊಂಚ ಹೆಚ್ಚಿಸಿದ್ದಾರೆ.  ಉತ್ತಮ ಸೇವೆ ಹಾಗೂ ಸುರಕ್ಷತೆಗಾಗಿ ಅಲ್ಪ ಹೆಚ್ಚಳ ಭರಿಸಲು ಪ್ರಯಾಣಿಕರು ಸಿದ್ಧವಿದ್ದಾರೆ.ಟಿಎಂಸಿ ಮುಖ್ಯಸ್ಥೆಯಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸಮರ್ಥನೀಯವಲ್ಲ. ಬಜೆಟ್ ಮಂಡಿಸಿದ ಕೆಲವೇ ಕ್ಷಣಗಳೊಳಗೆ ದಿನೇಶ್ ತ್ರಿವೇದಿ  ತಮ್ಮದೇ ಪಕ್ಷದಿಂದ ಮುಜುಗರಕ್ಕೆ ಒಳಗಾಗಿರುವುದು ವಿಷಾದನೀಯ.  ದಿನೇಶ್ ತ್ರಿವೇದಿ ಅವರ ಸ್ಥಾನದಲ್ಲಿ ನನ್ನನ್ನು ಕಲ್ಪಿಸಿಕೊಂಡು ಯೋಚಿಸಿದರೆ ವೇದನೆಯಾಗುತ್ತದೆ. 

-ಟ್ವಿಟರ್‌ನಲ್ಲಿ ನ್ಯಾಷನಲ್  ಕಾನ್‌ಫರೆನ್ಸ್ ಮುಖಂಡ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ

ಒಮರ್ ಅಬ್ದುಲ್ಲಾ

`ನಿಧಿ ಸಂಗ್ರಹಿಸಲು ವಿಫಲ~

ಸಚಿವ ದಿನೇಶ್ ತ್ರಿವೇದಿ ಅವರು ಮಂಡಿಸಿದ ರೈಲ್ವೆ ಬಜೆಟ್ ಜನಪ್ರಿಯ ಬಜೆಟ್, ನಿಧಿ ಸಂಗ್ರಹದ ಮೂಲಗಳನ್ನು ಹುಡುಕುವಲ್ಲಿ ವಿಫಲವಾಗಿದೆ. ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವ ಇಲಾಖೆಗೆ ನಿಧಿ ಸಂಗ್ರಹದ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಬಜೆಟ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ ಕಂಡುಬಂದಿಲ್ಲ. ಕಳೆದ ವರ್ಷ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳ ಬಗ್ಗೆ ಈ ಬಾರಿ ಯಾವ ಪ್ರಸ್ತಾಪವೂ ಇಲ್ಲ. ಮತ್ತೊಮ್ಮೆ ಯಾವ ಸ್ಪಷ್ಟ ಆರ್ಥಿಕ ಯೋಜನೆಯೂ ಇಲ್ಲದೆ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ.

-ಸಿಪಿಎಂ  ಕೇಂದ್ರ ಸಮಿತಿ ಸದಸ್ಯ ನೀಲೋತ್ಪಲ್ ಬಸು

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.