ಮಂಗಳವಾರ, ಜೂನ್ 22, 2021
22 °C

ರೈಲ್ವೆ ಬಜೆಟ್: ನೆಚ್ಚಿದ ಎಮ್ಮೆ ಕೋಣ ಈಯಿತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ರೈಲ್ವೆ ಮಹಾಮನೆಯಲ್ಲಿ ಕರ್ನಾಟಕ ಸ್ಥಿತಿ ಮಲತಾಯಿ ಮನೆಯಲ್ಲಿ ಇರುವ ಸಿಂಡ್ರೆಲಾಳಂತೆ ಆಗಿದೆ. ಕರ್ನಾಟಕದ ಪಾಲಿಗೆ ಈ ರೈಲ್ವೆ ಬಜೆಟ್ ಅತ್ಯಂತ ನಿರಾಶದಾಯಕ ಎಂದು ಹೇಳಿದರೆ ಅದರ ಬಗ್ಗೆ ತುಂಬಾ ಕಡಿಮೆ ಹೇಳಿದಂತೆ ಆಗುತ್ತದೆ. ರೈಲ್ವೆ ಬಗ್ಗೆ ವರ್ಷಗಳಿಂದಲೂ ಕನ್ನಡಿಗರು ಬಹು ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಆದರೆ ವರ್ಷ ವರ್ಷವೂ ಕನ್ನಡಿಗರಿಗಾಗಿ ರೇಲ್ವೆ ವಿಚಾರದಲ್ಲಿ ಹೆಚ್ಚಿನ ನಿರಾಸೆ ಆಗುತ್ತಾ ಬಂದಿದೆ.ರೈಲ್ವೆಯಲ್ಲಿ ಕರ್ನಾಟಕಕ್ಕೆ ಯಾವುದೂ ಆಗದೆ ಸಂತಾನವನ್ನು ಅಪೇಕ್ಷಿಸಿದ ದಂಪತಿಗೆ ಹೆಣ್ಣೂ ಇಲ್ಲ ಗಂಡೂ ಇಲ್ಲ ಎನ್ನುವ ಸ್ಥಿತಿ ಆಗಿದೆ. ನೆಚ್ಚಿದ ಎಮ್ಮೆ ಕೋಣವನ್ನು ಈಯಿತು ಎಂಬಂತೆ ರೈಲ್ವೆ ವಿಚಾರದಲ್ಲಿ ಕನ್ನಡಿಗರ ಸ್ಥಿತಿ ಆಗಿದೆ ಹೊಸ ರೈಲುಗಳೂ ಇಲ್ಲ. ಹೊಸ ರೈಲು ಮಾರ್ಗಗಳೂ ಇಲ್ಲ.ಹುಬ್ಬಳ್ಳಿ-ಅಂಕೋಲಾ ರೈಲು ಆಗಬೇಕೆಂದು ಕೇಳಿ ಕೇಳಿ ಕನ್ನಡಿಗರ ದನಿ ಬಿದ್ದುಹೊಗಿದೆ. ಆ ರೈಲ್ವೆ ಮಾರ್ಗದ ಬಗ್ಗೆ 100 ವರ್ಷಗಳಿಗಿಂತಲೂ ಮೇಲ್ಪಟ್ಟು ಬೇಡಿಕೆ ಇದೆ. ಅಂತಹ ಬೇಡಿಕೆ ಬಗ್ಗೆ ಭಾರತದಲ್ಲಿ ಯಾವ ರೈಲ್ವೆ ಮಾರ್ಗದ ಬಗ್ಗೆಯೂ ಇಲ್ಲ.ಕುಡಚಿ-ಬಾಗಲಕೋಟೆ ಮಾರ್ಗದ ಸರ್ವೆ ಆಗಿದ್ದರೂ ಅದರ ನಿರ್ಮಾಣಕ್ಕೆ ಪ್ರಸ್ತಾಪ ಇಲ್ಲ. ಕಡೂರಿಂದ ಚಿಕ್ಕಮಗಳೂರಿಗೆ ಹೋಗುವ ರೈಲ್ವೆ ಮಾರ್ಗದ ಪ್ರಸ್ತಾಪವಿಲ್ಲ. ಶಿವಮೊಗ್ಗ-ತಾಳಗುಪ್ಪದಿಂದ ಹೊನ್ನಾವರ ಇಲ್ಲವೆ ಕುಮಟಾಕ್ಕೆ ಹೋಗುವ ಕೊಂಕಣ ರೈಲಿಗೆ ಕೂಡುವ ಸಹ್ಯಾದ್ರಿ ಮಾರ್ಗದ ಪ್ರಸ್ತಾಪ ಇಲ್ಲ. ಅದರ ಬಗ್ಗೆ ಒತ್ತಾಯ 90 ವರ್ಷಗಳಿಂದ ಇದೆ.ಗದಗ-ವಾಡಿ ಮಾರ್ಗದ ಬಗ್ಗೆ ರೈಲ್ವೆಯ ಕನ್ನಡಿಗರಿಗೆ ಕೊಟ್ಟಿರುವ ಬಹುಮಾನವಾದರೆ ಮೌನವೊಂದೆ. ಬೀದರ್ ಗುಲ್ಬರ್ಗಾ ರೈಲ್ವೆ ಮಾರ್ಗ ಯಾವಾಗ ಮುಗಿಯುವುದು ಎನ್ನುವ ವಿಚಾರವನ್ನು ತಿಳಿಸಿಲ್ಲ.ಶಿವಮೊಗ್ಗ-ಹರಿಹರ ರೈಲು ಮಾರ್ಗದ ಬಗ್ಗೆ ಮಂತ್ರಿಗಳು ತುಟಿ ಎರಡು ಮಾಡಿಲ್ಲ, ಬೆಳಗಾವಿಯಿಂದ ಕಿತ್ತೂರ ಮೂಲಕ ಧಾರವಾಡಕ್ಕೆ ಬರುವ ಹೊಸ ರೈಲು ಮಾರ್ಗಕ್ಕೆ ದೊಡ್ಡ ಆದ್ಯತೆ ನೀಡಿಲ್ಲ. ಹರಿಹರ, ದಾವಣಗೆರೆ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಮಿರಜ್ ಮೇಲಿಂದ ಹೊರಗೆ ಹೋಗುವ ರೈಲು ಮಾರ್ಗ ಎಂದು ಇನ್ನೊಂದು ರೈಲು ಮಾರ್ಗ ಪಡೆಯುತ್ತದೆ.ಬರು ಹೋಗುವ ಗಾಡಿಗಳ ಓಡಾಟಕ್ಕೆ ಒಂದೇ ರೈಲು ಮಾರ್ಗ ಬಹುದೊಡ್ಡ ಆತಂಕವಾಗಿದೆ. ಜೋಡಿ ಮಾರ್ಗ ಆಗಬೇಕೆನ್ನುವ ಬೇಡಿಕೆಯೂ ಈಡೇರಿಲ್ಲ. ಅದಕ್ಕೆ ವಿದ್ಯುತ್ ಮಾರ್ಗ ಕಲ್ಪಿಸುವ ವಿಚಾರವೂ ಇಲ್ಲ. ಬೆಂಗಳೂರನಿಂದ ಯಶವಂತಪುರದಿಂದ ಹೊರಟು ರೈಲು ಆಂಧ್ರ ಪ್ರದೇಶದಲ್ಲಿ ಹಾಯ್ದು ಹೋದರೆ ಅದು ಕರ್ನಾಟಕದ ರೈಲು ಎನಿಸುದಿಲ್ಲ. ಬೆಂಗಳೂರಿನಿಂದ ಚೆನ್ನೈ ಹೋಗುವ ರೈಲು ತಮಿಳರದು ಎಂದೆನಿಸುವುದಲ್ಲದೆ ಕನ್ನಡದ್ದು ಆಗುವುದಿಲ್ಲ. ಬೆಂಗಳೂರು-ಶ್ರವಣ ಬೆಳಗೋಳಕ್ಕೆ ಮೈಸೂರಿನಿಂದ ಚಾಮರಾಜನಗರಕ್ಕೆ ರೈಲನ್ನು ಓಡಿಸಿದರೆ ಅವುಗಳ ಬಗ್ಗೆ ಸಮಗ್ರ ಕರ್ನಾಟಕ ಹೆಮ್ಮೆಪಡುವದೇನಿದೆ?ಕರ್ನಾಟಕ ಬಹುಭಾಗದಲ್ಲಿ ಒಂದೂ ಹೊಸ ರೈಲು ಓಡುವುದಿಲ್ಲ. ಇದು ರೈಲ್ವೆ ಪಕ್ಷಪಾತಕ್ಕೆ ನಿದರ್ಶನವಾಗಿದೆ. ಗದಗನಿಂದ ಹುಬ್ಬಳ್ಳಿಗೆ ಹೋಗುವ ರೈಲ್ವೆ ಮಾರ್ಗ ಬ್ರಾಡಗೇಜ್ ಆಗಿದ್ದರೂ ಹುಬ್ಬಳ್ಳಿಯಿಂದ ಗುಲ್ಬರ್ಗಾಕ್ಕೆ ಒಂದು ರೈಲು ಓಡುವುದಿಲ್ಲ. ಒಂದೇ ರಾಜ್ಯದಲ್ಲಿರುವ ಹುಬ್ಬಳ್ಳಿ ಜನರು ಗುಲ್ಬರ್ಗಾಕ್ಕೆ ಹೇಗೆ ಹೋಗಿ ಮುಟ್ಟಬೇಕು?ಹುಬ್ಬಳ್ಳಿಯಿಂದ ಪುಣೆಗೆ ಹೋಗಲು ಹಗಲಿನಲ್ಲಿ ಒಂದು ರೈಲು ಬೇಕು ಮುಂಬೈಯಿಂದ ಬೆಂಗಳೂರಿಗೆ ಒಂದೇ ಒಂದು ಚಾಲುಕ್ಯ ರೈಲು ಇದೆ. ಮಾರ್ಗ ಮೀಟರ್ ಗೇಜ್ ಮಾರ್ಗ ಇದ್ದಾಗ ಮುಂಬೈಯಿಂದ ಬೆಂಗಳೂರಿಗೆ ಮೂರು ರೈಲುಗಳು ಓಡುತ್ತಿದ್ದವು. ಈಗ ಬ್ರಾಡ್‌ಗೇಜ್ ಆದಮೇಲೆ ಒಂದೇ ಒಂದು ರೈಲು ಓಡುತ್ತಿದೆ.ಈಗಲೂ ಕೂಡ ಮಹಾಲಕ್ಷ್ಮೀ ಮುಂಬೈಯಿಂದ ಕೊಲ್ಲಾಪುರಕ್ಕೆ ಹೋಗದೆ ಸೀದಾ ಬೆಂಗಳೂರಿಗೆ ಹೋಗಬೇಕು. ನೈರುತ್ಯ ರೈಲ್ವೆ  ವಲಯದಲ್ಲಿ ಕೇವಲ  ಮೂರು ವಿಭಾಗಗಳಿವೆ. ಹುಬ್ಬಳ್ಳಿ, ಬೆಂಗಳೂರು, ಮತ್ತು ಮೈಸೂರು. ಇವು ಕನಿಷ್ಠ ಐದು ಆಗಬೇಕು. ಗುಲ್ಬರ್ಗಾ ಮತ್ತು ಮಂಗಳೂರಿನಲ್ಲಿ ಒಂದೊಂದು ವಿಭಾಗ ಬರಬೇಕು. ಕೊಂಕಣ ರೈಲ್ವೆ ಮಾರ್ಗದ ಆಡಳಿತ ಅವಶ್ಯಕತೆ ಈಗ ಉಳಿದಿಲ್ಲ. ಆ ರೈಲ್ವೆ ಮಾರ್ಗವನ್ನು ನೈರುತ್ಯ  ವಲಯಕ್ಕೆ ಸೇರಿಸಬೇಕು.ಗುಲ್ಬರ್ಗಾ ರೇಲ್ವೆ ವಿಭಾಗದ ರಚನೆ ವಿಚಾರದಲ್ಲಿ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರದು, ಮಂಗಳೂರು ವಿಭಾಗದ ರಚನೆಯಲ್ಲಿ ಕೇಂದ್ರ ಮಂತ್ರಿ ವೀರಪ್ಪ ಮೊಯ್ಲಿಯವರ ಪಾತ್ರ ಇದೆ. ಅವರಿಬ್ಬರೂ ಈ ಕೆಲಸ ಮಾಡಬೇಕು. ನಮ್ಮ ಸಂಸದರು ಬಾಯಿ ತೆರೆದಿದ್ದರೆ ಕರ್ನಾಟಕದ ಬೇಡಿಕೆಗಳು ರೈಲ್ವೆಯಲ್ಲಿ ಮೂಲೆಗುಂಪಾಗುವ ಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ಅವರು ಬಾಯಿ ಬಿಡಬೇಕು ಇಲ್ಲದಿದ್ದರೆ ಜನರು ಅವರಿಗೆ ಬೈ ಬೈ ಅಂದಾರು.. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.