ರೈಲ್ವೆ: ಬಜೆಟ್ ಬೇಡಿಕೆ ದುಪ್ಪಟ್ಟು

7

ರೈಲ್ವೆ: ಬಜೆಟ್ ಬೇಡಿಕೆ ದುಪ್ಪಟ್ಟು

Published:
Updated:

ನವದೆಹಲಿ, (ಪಿಟಿಐ): ಆರ್ಥಿಕ ನಷ್ಟ ಅನುಭವಿಸುತ್ತಿರುವ ಭಾರತೀಯ ರೈಲ್ವೆ, ತನ್ನ  ಆರ್ಥಿಕ ಹೊರೆ ಸರಿದೂಗಿಸಲು ಪ್ರಸಕ್ತ 2011-12ನೇ ಸಾಲಿನ ಬಜೆಟ್‌ನಲ್ಲಿ  40 ಸಾವಿರ ಕೋಟಿ ರೂಪಾಯಿ ಮಂಜೂರಾತಿ ಕೋರಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಬೇಡಿಕೆ ದುಪ್ಪಟ್ಟಾಗಿದೆ. ಕಳೆದ ಬಾರಿ 15,875 ಕೋಟಿ ರೂಪಾಯಿಗಳ ಬಜೆಟ್ ಬೆಂಬಲ ಕೋರಿದ್ದ ರೈಲ್ವೆ, ಈ ಬಾರಿ 39,600 ಕೋಟಿ ರೂಪಾಯಿ ತೆಗೆದಿರಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಮತ್ತು ವಿವಿಧ ಯೋಜನೆ ಕಾರ್ಯಗತಗೊಳಿಸಲು ಬಜೆಟ್ ಮಂಜೂರಾತಿ ಬೇಡಿಕೆ ಎರಡು ಪಟ್ಟು ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಹಳಿ ಪರಿವರ್ತನೆ, ಹೊಸ ಹಳಿ ಜೋಡಣೆ, ಮೂಲ ಸೌಕರ್ಯ ಅಭಿವೃದ್ಧಿ, ನಿಲ್ದಾಣಗಳ ನವೀಕರಣ, ರೈಲ್ವೆ ಸಂಪರ್ಕ ಜಾಲ ವಿಸ್ತರಣೆ, ಬೋಗಿಗಳ ಉತ್ಪಾದನೆಯಲ್ಲಿ ಹೆಚ್ಚಳ, ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಅಭಿವೃದ್ಧಿಗೆ ಹೆಚ್ಚುವರಿ ಹಣದ ಅಗತ್ಯ ಇದೆ.ಪ್ರಯಾಣಿಕರ ಮತ್ತು ಸರಕು ಸಾಗಣೆ ರೈಲ್ವೆ ಬೋಗಿಗಳ ಕೊರತೆ ಎದುರಾಗಿದ್ದು ಬೇಡಿಕೆ ಪೂರೈಸಲಾಗುತ್ತಿಲ್ಲ. ಹೀಗಾಗಿ ಈ ಬಾರಿ ಬೋಗಿಗಳ ತಯಾರಿಕೆಯತ್ತ ಗಮನ ಕೇಂದ್ರೀಕರಿಸಲಾಗಿದೆ. ಕಳೆದ ಬಾರಿ 3,700 ಬೋಗಿಗಳನ್ನು ತಯಾರಿಸಲಾಗಿತ್ತು. ಈ ಬಾರಿ 40 ಸಾವಿರ ಬೋಗಿಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಜ್ಜರ ಪ್ರತಿಭಟನೆ, ನಕ್ಸಲೀಯರ ದಾಳಿ, ಇಂಧನ ಬೆಲೆ ಏರಿಕೆ, ಕರ್ನಾಟಕ ಮತ್ತು ಒಡಿಶಾಗಳಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತ,  ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ ಮತ್ತಿತರ ಕಾರಣಗಳಿಗೆ ರೈಲ್ವೆ ವರಮಾನದಲ್ಲಿ ಗಣನೀಯ ಖೋತಾ ಆಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry