ಗುರುವಾರ , ಆಗಸ್ಟ್ 13, 2020
26 °C

ರೈಲ್ವೆ, ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ ಆಟೊ ಪ್ರಸ್ತಾವ

ಕೆ.ಎನ್.ನಾಗಸುಂದ್ರಪ್ಪ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲ್ವೆ, ಬಸ್ ನಿಲ್ದಾಣದಲ್ಲಿ ಪ್ರೀಪೇಯ್ಡ ಆಟೊ ಪ್ರಸ್ತಾವ

ತುಮಕೂರು: ನಗರದಲ್ಲಿ ಪ್ರೀಪೇಡ್ (ಮುಂಗಡ ಪಾವತಿ) ಆಟೊ ನಿಲ್ದಾಣ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಿಂದ ಎಲ್ಲ ಬಡಾವಣೆಗಳಿಗೆ 24-7 ಮಾದರಿಯ ಪ್ರೀಪೇಡ್ ಆಟೊ ನಿಲ್ದಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.ನಗರದಲ್ಲಿ ರಾತ್ರಿ ಪ್ರಯಾಣದ ಸಮಸ್ಯೆ ಮತ್ತು ಅಪರಾಧ ಪ್ರಕರಣಗಳನ್ನು ತಡೆಯಲು ಅನುಕೂಲವಾಗುವಂತೆ ಪ್ರೀಪೇಡ್ ಆಟೊ ವ್ಯವಸ್ಥೆ ಜಾರಿ ಅಗತ್ಯ ಎಂದು ಪೊಲೀಸ್ ಇಲಾಖೆಯು ಸಾರಿಗೆ ಇಲಾಖೆಗೆ ಮನವರಿಕೆ ಮಾಡಿ ಕೊಟ್ಟಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕೋರಲಾಗಿದೆ.ನಗರದ ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿ ರಾತ್ರಿ 10ರ ನಂತರ ಬಂದಿಳಿಯುವ ಪ್ರಯಾಣಿಕರಿಂದ ಆಟೊ ಚಾಲಕರು ನಾಲ್ಕೈದು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನಿಯಮದಂತೆ ಒಂದುವರೆ ಪಟ್ಟು ಹಣ ಪಡೆಯಬೇಕು ಎಂಬುದನ್ನು ಪರಿಗಣಿಸುತ್ತಿಲ್ಲ. ಕೇಳಿದಷ್ಟು ಹಣ ಕೊಡದಿದ್ದರೆ ಆಟೊ ಸಿಗುವುದಿಲ್ಲ. ಅಲ್ಲದೆ ಮಹಿಳೆಯರು ಮತ್ತು ಕುಟುಂಬ ಸಮೇತ ಮಧ್ಯರಾತ್ರಿ ನಗರದಲ್ಲಿ ಇಳಿಯುವವರು ಆತಂಕ ಪಡುವಂತಾಗಿದೆ ಎಂಬ ಬಗ್ಗೆ ಪೊಲೀಸ್ ಇಲಾಖೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.ಕಳೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಿದ್ದು, ಪ್ರೀಪೇಯ್ಡ ಆಟೊ ನಿಲ್ದಾಣದ ಅವಶ್ಯಕತೆಯನ್ನು ಮನದಟ್ಟು ಮಾಡಲಾಗಿದೆ. ಈ ಬಗ್ಗೆ ಲಿಖಿತವಾಗಿ ಸಾರಿಗೆ ಇಲಾಖೆಗೆ ಪ್ರಸಾವ ಸಲ್ಲಿಸಲಾಗಿದೆ. ಮತ್ತೆ ಈ ಬಗ್ಗೆ ಮಾತುಕತೆ ನಡೆಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ `ಪ್ರಜಾವಾಣಿ~ಗೆ ತಿಳಿಸಿದರು.ನಿಗದಿತ ಸ್ಥಳಕ್ಕೆ ನಿಗದಿತ ದರವನ್ನು ಮೊದಲೇ ಗೊತ್ತುಪಡಿಸುವುದರಿಂದ ಪ್ರಯಾಣಿಕರು ಹೆಚ್ಚುವರಿ ಹಣ ತೆರಬೇಕಾದ ಸಮಸ್ಯೆ ಇರುವುದಿಲ್ಲ. ಪ್ರತಿ ಪ್ರಯಾಣಕ್ಕೆ ರೂ. 1ನ್ನು ಸೇವಾ ಶುಲ್ಕವಾಗಿ ಪಡೆಯಲಾಗುತ್ತದೆ. ಮೈಸೂರಿನಲ್ಲಿ ಆರಂಭಿಸಿರುವ ಮಾದರಿಯಲ್ಲೇ ನಗರದಲ್ಲೂ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.ಪ್ರೀಪೇಯ್ಡ ಆಟೊ ನಿಲ್ದಾಣದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಅಲ್ಲ. ಅಗತ್ಯ ಇರುವ ಆಟೊ ಚಾಲಕರು ಇಲ್ಲಿ ಹೆಸರು ನೋಂದಾಯಿಸಬಹುದು. ಆಸಕ್ತಿ ಇಲ್ಲದವರು ಹೊರಗಿನ ನಿಲ್ದಾಣದಲ್ಲಿ ನಿಲ್ಲಬಹುದು. ಈ ವ್ಯವಸ್ಥೆಯಿಂದ ಯಾರ ಹಿತಾಸಕ್ತಿಗೂ ಧಕ್ಕೆ ಉಂಟಾಗುವುದಿಲ್ಲ. ಸಾರ್ವಜನಿಕರು ರಾತ್ರಿ ಸಮಯದಲ್ಲಿ ಆತಂಕ ರಹಿತ ಪ್ರಯಾಣ ಮಾಡಬಹುದು.ರಾತ್ರಿ ಬಸ್ ವ್ಯವಸ್ಥೆ: ನಗರದ ಬಸ್ ನಿಲ್ದಾಣದಿಂದ ರಾತ್ರಿ 10ರ ನಂತರ ಪ್ರತಿ ಬಡಾವಣೆಗೆ ಗಂಟೆಗೆ ಒಂದರಂತೆ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಲು ಸಹ ಕೋರಲಾಗಿದೆ. ಇದರಿಂದ ಕೆಆರ್‌ಆರ್‌ಟಿಸಿಗೆ ಲಾಭ ಇಲ್ಲದಿದ್ದರೂ, ನಾಗರಿಕರ ಹಿತರಕ್ಷಣೆ ಮುಖ್ಯ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಸುರೇಶ್ ಹೇಳಿದರು.ನಗರದಲ್ಲಿ ಬಸ್ ನಿಲ್ದಾಣಗಳೇ ಇಲ್ಲ. ಇದರಿಂದ ಪ್ರಯಾಣಿಕರು ಬಿಸಿಲು- ಮಳೆಯಲ್ಲಿ ನಿಲ್ಲುವಂತಾಗಿದೆ. ನಗರದ 30ಕ್ಕೂ ಹೆಚ್ಚು ಸ್ಥಳದಲ್ಲಿ ಬಸ್ ಬೇ ನಿರ್ಮಿಸುವಂತೆ ನಗರಸಭೆ ಕೋರಲಾಗಿದೆ. ಆದರೆ ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಸಹಕಾರ ಸಿಗುತ್ತಿಲ್ಲ. ಹೀಗಾಗಿ ಸಾಕಷ್ಟು ಸಂಚಾರಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.