ಶನಿವಾರ, ಮೇ 21, 2022
25 °C

ರೈಲ್ವೆ ಯೋಜನೆ:ರೂ 300 ಕೋಟಿ ಹೆಚ್ಚುವರಿ ನೆರವಿಗೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೆಚ್ಚ ಹಂಚಿಕೆ ಅಡಿಯಲ್ಲಿ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಯೋಜನೆಗಳ ಕಾಲಬದ್ಧ ಅನುಷ್ಠಾನಕ್ಕಾಗಿ ವಾರ್ಷಿಕ 300 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಸೋಮವಾರ ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿ 1,750 ಕಿ.ಮೀ. ಉದ್ದದ 13 ಯೋಜನೆಗಳನ್ನು ವೆಚ್ಚ ಹಂಚಿಕೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.ಈ ಯೋಜನೆಗಳ ಕಾಮಗಾರಿಗಾಗಿ ಕೇಂದ್ರ ಸರ್ಕಾರ 417 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರ 360 ಕೋಟಿ ರೂಪಾಯಿ ಅನುದಾನವನ್ನು ಈ ವರ್ಷದ ಬಜೆಟ್‌ನಲ್ಲಿ ಮೀಸಲಿರಿಸಿವೆ. ಆದರೆ, ಕಾಮಗಾರಿಗಳ ವೇಗ ಹೆಚ್ಚಿಸಲು ಇನ್ನೂ ಹೆಚ್ಚು ಹಣ ಅಗತ್ಯ. ವಾರ್ಷಿಕ 300 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಒದಗಿಸುವಂತೆ ಕೋರಲಾಗಿದೆ~ ಎಂದರು.ಒಟ್ಟು 10,800 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳನ್ನು ವೆಚ್ಚ ಹಂಚಿಕೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 2,200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ರಾಜ್ಯ ಸರ್ಕಾರ 4,000 ಕೋಟಿ ರೂಪಾಯಿ ಮತ್ತು ಕೇಂದ್ರ ಸರ್ಕಾರ 4,600 ಕೋಟಿ ರೂಪಾಯಿಯನ್ನು ಇನ್ನೂ ಒದಗಿಸಬೇಕಿದೆ. ವೆಚ್ಚ ಹಂಚಿಕೆ ಯೋಜನೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಹೇಳಿದರು.`ವೆಚ್ಚ ಹಂಚಿಕೆ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟವಾದ ನೀತಿಯೊಂದನ್ನು ಅನುಸರಿಸಲು ನಿರ್ಧರಿಸಿದೆ. ಈ ಯೋಜನೆಗಳ ಅನುಷ್ಠಾನವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು. ಹಣ ಬಿಡುಗಡೆಯನ್ನೂ ಆದ್ಯತೆ ಮೇರೆಗೆ ಮಾಡಲಾಗುವುದು. ರಾಜ್ಯ ಸರ್ಕಾರ ಒದಗಿಸಿದ ಅನುದಾನವನ್ನು ಸಕಾಲಕ್ಕೆ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು~ ಎಂದರು.ಡಿಸೆಂಬರ್‌ಗೆ ಉದ್ಘಾಟನೆ: ಚಿಕ್ಕಮಗಳೂರು-ಕಡೂರು ಮತ್ತು ಯಲಹಂಕ-ಬಂಗಾರಪೇಟೆ ನಡುವೆ ಪ್ರಗತಿಯಲ್ಲಿರುವ ರೈಲ್ವೆ ಮಾರ್ಗಗಳ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಈ ವರ್ಷಾಂತ್ಯದೊಳಗೆ ಈ ಮಾರ್ಗಗಳನ್ನು ಉದ್ಘಾಟಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.ಚಿಕ್ಕಮಗಳೂರು- ಸಕಲೇಶಪುರ ಮಾರ್ಗದಲ್ಲೂ ಶೀಘ್ರದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು. ಅತಿ ಹಿಂದುಳಿದ ಜಿಲ್ಲೆಗಳಿಗೆ ರೈಲ್ವೆ ಸಂಪರ್ಕ ಒದಗಿಸುವ ಉದ್ದೇಶದಿಂದ ಕೆಲವು ಯೋಜನೆಗಳಿಗೆ ವಿಶೇಷ ಆದ್ಯತೆಯನ್ನೂ ನೀಡಲಾಗುವುದು ಎಂದರು.ಉತ್ತರ ಕರ್ನಾಟಕದ ಜನರು ರೈಲ್ವೆ ಸಂಪರ್ಕದ ಮೂಲಕ ಉತ್ತರ ಭಾರತವನ್ನು ತಲುಪಲು ಪೂರಕವಾಗಿರುವ ಗದಗ-ವಾಡಿ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮಾರ್ಗ ಪೂರ್ಣಗೊಂಡಲ್ಲಿ ಉತ್ತರ ಕರ್ನಾಟಕದ ಜನರು ಗದಗ-ವಾಡಿ- ಗುಲ್ಬರ್ಗ- ಬೀದರ್- ನಾಂದೇಡ್ ಮಾರ್ಗವಾಗಿ ಬೇಗ ಉತ್ತರ ಭಾರತವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.2015ಕ್ಕೆ ಪೂರ್ಣ: ಬೆಂಗಳೂರು- ಮೈಸೂರು ಜೋಡಿಮಾರ್ಗ ನಿರ್ಮಾಣ ಮತ್ತು ಹಾಸನ-ಬೆಂಗಳೂರು ಹೊಸ ಬ್ರಾಡ್‌ಗೇಜ್ ಮಾರ್ಗ ನಿರ್ಮಾಣ ಕಾಮಗಾರಿ 2014-2015ರ ವೇಳೆಗೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕಿನಿಂದಾಗಿ ಎರಡೂ ಯೋಜನೆಗಳ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬೆಂಗಳೂರು-ಮೈಸೂರು ಜೋಡಿ ಮಾರ್ಗದಲ್ಲಿ 129 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ಬಾಕಿ ಇತ್ತು. 79 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡ ಸರ್ಕಾರ, ಅದನ್ನು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಿದೆ. ಉಳಿದ 50 ಎಕರೆ ಭೂಮಿಯನ್ನೂ ಶೀಘ್ರದಲ್ಲಿ ಒದಗಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ ಎಂದರು.ಹಾಸನ-ಬೆಂಗಳೂರು ಮಾರ್ಗದಲ್ಲಿ 122 ಎಕರೆ ಭೂಮಿಯ ಸ್ವಾಧೀನ ಇನ್ನೂ ಆಗಬೇಕಿದೆ. ಹಾಸನ-ಶ್ರವಣಬೆಳಗೊಳ ಮತ್ತು ಚಿಕ್ಕಬಾಣಾವರ- ನೆಲಮಂಗಲ ವಲಯಗಳಲ್ಲಿ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ಎರಡೂ ಕಡೆಗಳಲ್ಲಿ ಶೀಘ್ರದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ವಿವರಿಸಿದರು.ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. `ರೈಟ್ಸ್~ ಸಂಸ್ಥೆಯನ್ನು ಕಾರ್ಖಾನೆ ನಿರ್ಮಾಣ ಕಾಮಗಾರಿಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶೋಕ್‌ಕುಮಾರ್ ಮನೋಳಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ, ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಶಿವಶೈಲಂ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಮಿತ್ತಲ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಸುಧಾಂಶು ಮಣಿ  ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.