ಮಂಗಳವಾರ, ಜೂನ್ 22, 2021
27 °C

ರೈಲ್ವೆ ಯೋಜನೆ ವಿಳಂಬ ತಡೆಗೆ ಹೊಸ ಸೂತ್ರ

ಪ್ರಜಾವಾಣಿ ವಾರ್ತೆ ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈಲ್ವೆ ಯೋಜನೆಗಳ ಅನಗತ್ಯ ವಿಳಂಬ ತಡೆಗೆ ರಾಜ್ಯ ಸರ್ಕಾರ `ಒಡಂಬಡಿಕೆ~ಯ (ಎಂಒಯು) ಹೊಸ ಸೂತ್ರವೊಂದನ್ನು ಕಂಡುಹಿಡಿದಿದ್ದು, ಆ ಪ್ರಕಾರವೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿ 15-20 ವರ್ಷಗಳಾದರೂ ಇನ್ನೂ ಅನೇಕ ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅವುಗಳ ಅಂದಾಜು ವೆಚ್ಚ ಕೂಡ ಹಲವು ಪಟ್ಟು ಹೆಚ್ಚಾಗಿದೆ. ಇದರಿಂದ ಆರ್ಥಿಕವಾಗಿಯೂ ದೊಡ್ಡ ಹೊಡೆತ.ಹೀಗಾಗಿ ಈ ರೀತಿಯ ವಿಳಂಬ ತಡೆಗೆ ಸರ್ಕಾರ ಹೊಸ ತಂತ್ರವನ್ನು ಹುಡುಕಿದೆ. ಇನ್ನು ಮುಂದೆ ರೈಲ್ವೆ ಪ್ರಕಟಿಸುವ ಯಾವುದೇ ಯೋಜನೆಯಾದರೂ ಅದನ್ನು ಎಷ್ಟು ವರ್ಷಗಳಲ್ಲಿ ಪೂರ್ಣಗೊಳಿಸಬಹುದು ಎಂಬುದನ್ನು ಅಂದಾಜು ಮಾಡಿಯೇ ರೈಲ್ವೆ ಜತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.ಇದಕ್ಕೆ ರೈಲ್ವೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಇಡೀ ದೇಶದ ಯೋಜನೆಗಳ ಬಗ್ಗೆ ಗಮನ ನೀಡಬೇಕಾಗಿರುವ ರೈಲ್ವೆಯು ರಾಜ್ಯದ ಹೊಸ ಸೂತ್ರಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಒಟ್ಟು 487.63 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದರಲ್ಲಿ ಸುಮಾರು 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಬಾಕಿ ಹಣವನ್ನೂ ಈ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಆದರೆ, ವೆಚ್ಚ ಹಂಚಿಕೆ ಒಪ್ಪಂದದ ಪ್ರಕಾರ ರೈಲ್ವೆ ಕಡೆಯಿಂದ ನಿಗದಿತ ಪ್ರಮಾಣದ ಹಣ ಬಿಡುಗಡೆಯಾಗಿದೆಯೇ? ಈ ಪ್ರಶ್ನೆಗೆ ಯಾರಿಂದಲೂ ಸರಿಯಾದ ಉತ್ತರ ಇಲ್ಲ. ಯೋಜನೆಯೊಂದಕ್ಕೆ ಇಷ್ಟೇ ಹಣ ಬಿಡುಗಡೆ ಮಾಡಬೇಕೆಂಬ ನಿಯಮ ಇದ್ದರೂ ರೈಲ್ವೆಯವರು ಮಾತ್ರ ತಮ್ಮ ಪಾಲಿನ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದಕ್ಕೆ ಸರಿಯಾದ ಲೆಕ್ಕ ಕೊಡುತ್ತಿಲ್ಲ.ಬದಲಿಗೆ, ಪ್ರತಿ ಬಾರಿಯೂ ರಾಜ್ಯ ಸರ್ಕಾರಕ್ಕೇ ಹಣದ ಬೇಡಿಕೆ ಸಲ್ಲಿಸುವ ಕೆಲಸ ರೈಲ್ವೆ ಕಡೆಯಿಂದ ಆಗುತ್ತಿದ್ದು, ತನ್ನ ಸ್ವಂತ ಬಜೆಟ್‌ನಲ್ಲಿ ಮಂಜೂರಾಗಿದ್ದರಲ್ಲಿ ಎಷ್ಟು ಖರ್ಚು ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ರಾಜ್ಯ ಸರ್ಕಾರವು ಆದಷ್ಟು ಬೇಗ ರೈಲ್ವೆ ಯೋಜನೆಗಳು ಪೂರ್ಣಗೊಳ್ಳಲಿ ಎಂಬ ಕಾರಣಕ್ಕೆ ತ್ವರಿತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಪ್ರಗತಿ ಮಾತ್ರ ನಿರೀಕ್ಷೆ ಪ್ರಕಾರ ಆಗುತ್ತಿಲ್ಲ.ಉದಾಹರಣೆಗೆ ರಾಮನಗರ- ಮೈಸೂರು ಜೋಡಿ ರೈಲು ಮಾರ್ಗದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಶೇ 67ರಷ್ಟು ಹಣ ನೀಡುತ್ತಿದ್ದು, ಅದನ್ನು ವಿದ್ಯುದೀಕರಣ ಯೋಜನೆಗೂ ರೈಲ್ವೆ ಬಳಸುತ್ತಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, `ಮೊದಲು ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳಿಸಿ. ನಂತರ ಬೇಕಾದರೆ, ವಿದ್ಯುದೀಕರಣದ ಬಗ್ಗೆ ಗಮನ ನೀಡಿ~ ಎಂದು ತಾಕೀತು ಮಾಡಿದ್ದಾರೆ.ವೆಚ್ಚ ಹಂಚಿಕೆಯ ಮೂಲ ಒಪ್ಪಂದದಲ್ಲಿ ವಿದ್ಯುದೀಕರಣಕ್ಕೆ ಹಣ ನೀಡುವ ಅಂಶ ಸೇರಿಲ್ಲ. ಆದರೂ ರೈಲ್ವೆಯವರು ತಮ್ಮ ಹಣದಲ್ಲಿ ವಿದ್ಯುದೀಕರಣದ ಕೆಲಸ ಮಾಡುತ್ತಿದ್ದು, ಅದನ್ನು ನಿಲ್ಲಿಸಿ, ಮೊದಲು ಜೋಡಿ ರೈಲು ಮಾರ್ಗ ನಿರ್ಮಾಣದ ಕಡೆಗೆ ಗಮನ ನೀಡುವಂತೆ ಕೋರಿದ್ದಾರೆ. ಅದರ ನಂತರ ರೈಲ್ವೆ ಕೂಡ ಇದಕ್ಕೆ ಸ್ಪಂದಿಸಿದ್ದು, ಮೊದಲ ಆದ್ಯತೆಯನ್ನು ಯೋಜನೆ ಪೂರ್ಣಗೊಳಿಸುವ ಕಡೆಗೆ ನೀಡುವುದಾಗಿ ಹೇಳಿದೆ.ಇದೇ ರೀತಿಯ ಮತ್ತೊಂದು ಉದಾಹರಣೆ ಅಂದರೆ ತುಮಕೂರು- ರಾಯದುರ್ಗ ರೈಲ್ವೆ ಯೋಜನೆ. ಈ ಯೋಜನೆಗೆ ಆಂಧ್ರಪ್ರದೇಶ ಕಡೆಯಿಂದ ಚಾಲನೆ ಸಿಕ್ಕಿದೆ. ಆದರೆ, ತುಮಕೂರು ಕಡೆಯಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾಗದ ಕಾರಣ ಅದಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಇದರ ನಡುವೆಯೇ ರಾಜ್ಯ ಸರ್ಕಾರಕ್ಕೆ ಹಣದ ಬೇಡಿಕೆ ಇಟ್ಟು, ರೂ 20 ಕೋಟಿ ಪಡೆದಿದೆ. ವಾಸ್ತವವಾಗಿ ಭೂಸ್ವಾಧೀನಕ್ಕೆ ರೈಲ್ವೆಯೇ ಹಣ ನೀಡಬೇಕಿದ್ದು, ಯೋಜನೆ ಅನುಷ್ಠಾನ ಕೈಗೆತ್ತಿಕೊಂಡಾಗ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ನೀಡಬೇಕು.ಹೀಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡದೆ, ಕೇವಲ ರಾಜ್ಯದ ಕಡೆಯಿಂದಲೇ ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ, ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿಲ್ಲ. ಹೀಗಾಗಿ ನಿರ್ದಿಷ್ಟ ಅವಧಿಗೆ ಯೋಜನೆಗಳನ್ನು ಪೂರ್ಣಗೊಳಿಸಬೇಕೆನ್ನುವ ಕುರಿತು ರೈಲ್ವೆ ಜತೆ ಒಡಂಬಡಿಕೆ ಮಾಡಿಕೊಳ್ಳಲು ಸರ್ಕಾರ ತಯಾರಿ ನಡೆಸಿದೆ.ಒಮ್ಮೆ ಒಪ್ಪಂದವಾದ ನಂತರ ಗರಿಷ್ಠ ಎಷ್ಟು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಬಹುದು. ನಿರ್ದಿಷ್ಟ ಯೋಜನೆಗೆ ಯಾವ್ಯಾವ ವರ್ಷ ಎಷ್ಟೆಷ್ಟು ಹಣ ಮೀಸಲಿಡಬೇಕು ಎಂಬುದನ್ನು ಒಪ್ಪಂದದಲ್ಲೇ ಸೇರಿಸಲು ನಿರ್ಧರಿಸಲಾಗಿದೆ. ಒಪ್ಪಂದದ ಪ್ರಕಾರ ರಾಜ್ಯ ಸರ್ಕಾರ ಹಾಗೂ ರೈಲ್ವೆ ತನ್ನ ಪಾಲಿನ ಹಣವನ್ನು ಪ್ರತಿಬಾರಿಯೂ ಮೀಸಲಿಡಬೇಕಾಗುತ್ತದೆ. ಹಾಗೆ ಮಾಡುವುದರಿಂದ ಯೋಜನೆಯ ಅನಗತ್ಯ ವಿಳಂಬ ತಡೆಯಬಹುದು ಎಂಬುದು ರಾಜ್ಯ ಸರ್ಕಾರದ ಲೆಕ್ಕಾಚಾರ.ಭೂಸ್ವಾಧೀನ ಪ್ರಕ್ರಿಯೆ: ಯೋಜನೆ ಘೋಷಣೆಯಾದ ತಕ್ಷಣವೇ ರೈಲ್ವೆ ಅದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಸಹಕರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಬೇಡಿಕೆ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ, ತುರ್ತು ನಿಯಮಗಳನ್ನು ಜಾರಿ ಮಾಡಿ ಏಳೆಂಟು ತಿಂಗಳಲ್ಲಿ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಅದರ ನಂತರವೇ ಯೋಜನೆಯ ನಿಜವಾದ ಕಾಮಗಾರಿ ನಡೆಯಲಿದ್ದು, ಅದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಒಪ್ಪಂದದಲ್ಲಿ ಸೇರಿಸಲು ನಿರ್ಧರಿಸಲಾಗಿದೆ.ಉದ್ದೇಶಿತ ಯೋಜನೆಗಳು: ಬಜೆಟ್‌ನಲ್ಲಿ ಘೋಷಣೆಯಾದ ಹಲವು ಹೊಸ ಯೋಜನೆಗಳನ್ನು ಪರಸ್ಪರ ಒಪ್ಪಂದದ ಪ್ರಕಾರವೇ ಜಾರಿಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಶಿವಮೊಗ್ಗ- ಹರಿಹರ; ವೈಟ್‌ಫೀಲ್ಡ್- ಕೋಲಾರ; ಕುಡಚಿ- ಬಾಗಲಕೋಟೆ; ತುಮಕೂರು- ರಾಯದುರ್ಗ, ದಾವಣಗೆರೆ-ತುಮಕೂರು ಈ ಎಲ್ಲ ಹೊಸ ಯೋಜನೆಗಳನ್ನು ಜಾರಿಗೊಳಿಸುವುದಕ್ಕೂ ಮುನ್ನ ಇಂತಿಷ್ಟೇ ವರ್ಷದಲ್ಲಿ ಪೂರ್ಣಗೊಳಿಸಬೇಕೆನ್ನುವ ಒಪ್ಪಂದಕ್ಕೆ ರೈಲ್ವೆ ಮಂಡಳಿ ಜತೆ ರಾಜ್ಯ ಸರ್ಕಾರ ಸಹಿ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಕರಾರು ಪತ್ರಗಳನ್ನು ಸಿದ್ಧಪಡಿಸುವಲ್ಲಿ ರಾಜ್ಯ ಸರ್ಕಾರ ತಲ್ಲೆನವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.