ಮಂಗಳವಾರ, ಸೆಪ್ಟೆಂಬರ್ 22, 2020
26 °C

ರೈಲ್ವೆ ರೋರೊ ಸೇವೆ: ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ/ ನಾಗರಾಜ ಶೆಟ್ಟಿಗಾರ್ Updated:

ಅಕ್ಷರ ಗಾತ್ರ : | |

ರೈಲ್ವೆ ರೋರೊ ಸೇವೆ: ಸಂಚಾರಕ್ಕೆ ಅಡ್ಡಿ

ಸುರತ್ಕಲ್: ಕೊಂಕಣ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ ಸರಕು ಲಾರಿಗಳನ್ನು ಸಾಗಿಸುವ ರೋ ರೊ ಸೇವೆ  ರೈಲ್ವೆ ಇಲಾಖೆಯಲ್ಲೇ ಮೆಚ್ಚುಗೆ ಪಡೆದಿದೆ.  ಇದರಿಂದಾಗಿ ಲಾರಿ ಮಾಲಿಕರಿಗೂ, ರೈಲ್ವೆಗೂ ಲಾಭವಾಗಿದೆ. ಆದರೆ ಸಾರ್ವಜನಿಕರು ಮಾತ್ರ ಸಮಸ್ಯೆ ಎದುರಿಸುವಂತಾಗಿದೆ.ರೋ ರೊ ಮೂಲಕ ಸುರತ್ಕಲ್ ನಿಲ್ದಾಣಕ್ಕೆ ಬರುವ ಲಾರಿಗಳಿಗೆ ಸಮರ್ಪಕವಾದ ನಿಲುಗಡೆ ವ್ಯವಸ್ಥೆಯಿಲ್ಲ. ಹೀಗಾಗಿ ಬಂದ ಲಾರಿಗಳು ರಸ್ತೆಯ ಎರಡೂ ಕಡೆ  ನಿಲ್ಲುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದು ಅಪಘಾತ ವಲಯವಾಗುವ ಆತಂಕ ಎದುರಾಗಿದೆ.ರೋ ರೊ ಮೂಲಕ ಆಗಮಿಸುವ ಲಾರಿಗಳ ತೆರಿಗೆ ಪರಿಶೀಲನೆ ಕೂಡಾ ಈ ಪ್ರದೇಶದಲ್ಲೇ ನಡೆಯುವುದರಿಂದ ಲಾರಿಗಳು ರಸ್ತೆಗೆ ಇಳಿಯುವಾಗ ವಾಹನ ದಟ್ಟಣೆಗೆ ಕಾರಣವಾಗುತ್ತದೆ. ಲಾರಿಗಳು ಸಾಲುಗಟ್ಟಿ ತಿರುವು ಪಡೆಯುವುದರಿಂದ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗುತ್ತದೆ. ಸುರತ್ಕಲ್‌ನಿಂದ ಬಜ್ಪೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಕಡೆ ಲಾರಿಗಳು ನಿಲ್ಲುತ್ತದೆ.

 

ಈ ರಸ್ತೆಯನ್ನೇ ಬಳಸಿಕೊಂಡು ವಿಶೇಷ ಆರ್ಥಿಕ ವಲಯಕ್ಕೆ ಹೋಗುವ ವಾಹನಗಳೂ ಸಂಚರಿಸುವುದರಿಂದ ದಟ್ಟಣೆ ಸಹಜವಾಗಿ ಹೆಚ್ಚಿದೆ. ಇಕ್ಕೆಲಗಳಲ್ಲಿ ಲಾರಿಗಳ ನಿಲುಗಡೆಯಿಂದ ರಸ್ತೆಯ ಅಗಲವೂ ಕಿರಿದಾಗುವುದರಿಂದ ರೋ ರೊ ಆಗಮಿಸುವ ಹಾಗೂ ವಿರಮಿಸುವ ಸಂದರ್ಭದಲ್ಲಿ ರಸ್ತೆ ತಡೆಗಳು ಉಂಟಾಗುವುದು ಸಹಜವಾಗಿದೆ.ಈ ರಸ್ತೆಯ ಪಕ್ಕದಲ್ಲೇ  ಶೈಕ್ಷಣಿಕ ಸಂಸ್ಥೆಯೂ  ಇದೆ. ಶಾಲಾ ಮಕ್ಕಳು ಬಸ್ ಹಾಗೂ ಇತರ ವಾಹನಗಳಿಂದ ಇಳಿದು ಈ ರಸ್ತೆಯನ್ನು ದಾಟಿ ಶಾಲೆಗೆ ತೆರಳಬೇಕಾಗಿರುವುದು ಪೋಷಕರನ್ನು ಚಿಂತೆಗೀಡು ಮಾಡಿದೆ.ಪಾದಚಾರಿಗಳಿಗೆ ನಡೆದಾಡಲೂ ಕಷ್ಟವಾಗುತ್ತಿದೆ. ಈ ಹಿಂದೆ ಜಯಕರ್ನಾಟಕ, ಇತರ ಸ್ಥಳೀಯ ಸಂಘಟನೆಗಳು ಹಾಗೂ ಶಾಲಾ ಆಡಳಿತ ಮಂಡಳಿ ರೋ ರೊ ಲಾರಿ ನಿಲುಗಡೆಯ ವಿರುದ್ಧ ಪ್ರತಿಭಟನೆ ಸಂಘಟಿಸಿತ್ತು. ರಸ್ತೆ ಸಂಚಾರಕ್ಕೆ ತೊಡಕಾಗದಂತೆ ರೋರೋ ಸೇವೆಯನ್ನು ನಿರ್ವಹಿಸುವ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನೂ ಕೊಂಕಣ ರೈಲ್ವೆ ನೀಡಿತ್ತು. ಪಕ್ಕದಲ್ಲೇ ಯಾರ್ಡ್ ನಿರ್ಮಿಸಿತು. ಇತ್ತೀಚಿನ ದಿನಗಳಲ್ಲಿ ಯಾರ್ಡ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದ ಲಾರಿಗಳು ರಸ್ತೆ ಬದಿ ನಿಲ್ಲುವಂತಾಗಿದೆ.ಕೊಂಕಣ ರೈಲ್ವೆಯ ರೋರೋ ಸೇವೆಯಲ್ಲಿ ಒಟ್ಟು 5 ರ‌್ಯಾಕ್‌ಗಳಲ್ಲಿ 40 ಲಾರಿಗಳು ಬಂದಿಳಿಯುತ್ತವೆ. ಮುಂದೆ 6 ನೇ ರ‌್ಯಾಕ್‌ಅನ್ನು ಕೊಂಕಣ ರೈಲ್ವೆ ಶೀಘ್ರ ಅಳವಡಿಸುವುದರಿಂದ ಲಾರಿಗಳ ಸಂಖ್ಯೆಯೂ ಹೆಚ್ಚುತ್ತದೆ.ಈಗಿರುವ ರ‌್ಯಾಕ್ ಮೂಲಕ ಬಂದಿಳಿಯುವ ಲಾರಿಗಳಿಗೆ ಸುರತ್ಕಲ್‌ನಲ್ಲಿ ನಿಲುಗಡೆ ಸೂಕ್ತ ಯಾರ್ಡ್ ವ್ಯವಸ್ಥೆ ಮಾಡದ ಕೊಂಕಣ ರೈಲ್ವೆ ಇನ್ನೊಂದು ರ‌್ಯಾಕ್ ಅಳವಡಿಸುವ ಚಿಂತನೆ ನಡೆಸಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.ಲಾರಿಗಳ ನಿಲುಗಡೆ ಸೂಕ್ತ ವ್ಯವಸ್ಥೆಯನ್ನು ಮಾಡದ ಕೊಂಕಣ ರೈಲ್ವೆ ಲಾಭಾಂಶವನ್ನು ಮಾತ್ರ ಗಮನದಲ್ಲಿಟ್ಟು ರೋ ರೊ ರ‌್ಯಾಕ್ ವಿಸ್ತರಣೆಗೆ ಮುಂದಾಗಿದೆ ಎಂಬ ಆರೋಪ ಸ್ಥಳೀಯರದ್ದು. ರೈಲ್ವೆ ಸೇತುವೆಯ ವಿಸ್ತರಣೆಗೂ ಇಲಾಖೆ ಅಡ್ಡಿಪಡಿಸುತ್ತಿದ್ದು ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಇಲಾಖೆ ಯೋಚಿಸುವುದಿಲ್ಲ ಎಂದು ದೂರಿರುವ ಜನತೆ  ಸೂಕ್ತ ಯಾರ್ಡ್ ವ್ಯವಸ್ಥೆಯನ್ನು ಮಾಡಿ  ಬಳಿಕ ತನ್ನ ಯೋಜನೆ ವಿಸ್ತರಿಸಲಿ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.