ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ವರದಿ: ನಿಲ್ದಾಣಗಳಲ್ಲಿ ಶುದ್ಧ ನೀರಿನ ಕೊರತೆ

7

ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ವರದಿ: ನಿಲ್ದಾಣಗಳಲ್ಲಿ ಶುದ್ಧ ನೀರಿನ ಕೊರತೆ

Published:
Updated:

ನವದೆಹಲಿ (ಪಿಟಿಐ): ದೂರದೂರಿಗೆ ಪ್ರಯಾಣಿಸುವ ರೈಲುಗಳಲ್ಲಿ ಪ್ಯಾಕೇಜ್ಡ್ ನೀರಿನ ಬಾಟಲಿಗಳ ಕೊರತೆ, ರೈಲು ನಿಲ್ದಾಣಗಳಲ್ಲಿ ಅನ್ ಸೀಲ್ಡ್ ನೀರಿನ ಬಾಟಲಿಗಳ ಮಾರಾಟ.. ಸೇರಿದಂತೆ ಕುಡಿಯುವ ನೀರು ಪೂರೈಕೆಯಲ್ಲಿ ಉಂಟಾಗುತ್ತಿರುವ ಹಲವು ಸಮಸ್ಯೆಗಳನ್ನು ಒಳಗೊಂಡ ವರದಿಯನ್ನು ಸೋಮವಾರ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಲೋಕಸಭೆಯಲ್ಲಿ  ಸಲ್ಲಿಸಿತು.ಸಂಸದ ಟಿ.ಆರ್. ಬಾಲು ನೇತೃತ್ವದ 31 ಸದಸ್ಯರ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಈ ವರದಿಯನ್ನು ಸಲ್ಲಿಸಿದ್ದು, ವರದಿಯೊಳಗೆ ರೈಲುಗಳ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಸಮಸ್ಯೆಗೆ ರೈಲ್ವೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.ಸ್ಥಾಯಿ ಸಮಿತಿಯ ತಂಡದ ಸದಸ್ಯರು ದೇಶದ ಹಲವು ರೈಲು ನಿಲ್ದಾಣಗಳು ಹಾಗೂ ದೂರ ಪ್ರಯಾಣಿಸುವ ರೈಲುಗಳಿಗೆ ಭೇಟಿ ನೀಡಿದ್ದಾರೆ. ಆ ವೇಳೆ ಟ್ಯಾಂಕ್‌ನಲ್ಲಿ ತುಂಬಿಸಿಟ್ಟ ನೀರನ್ನೇ ಕುಡಿಯುವ ನೀರು ಪೂರೈಸುವ ನಲ್ಲಿಗಳಿಗೆ ಬಳಸುತ್ತಿರುವುದನ್ನು ಗಮನಿಸಿದ್ದಾರೆ. ಲೇಬಲ್ ರಹಿತ ಬಾಟಲಿಗಳು, ಸೀಲ್ ಇಲ್ಲದ ನೀರಿನ ಬಾಟಲಿಗಳ ಮಾರಾಟ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.`ಅನಧಿಕೃತ ಮಾರಾಟಗಾರರಿಂದ ಇಲಾಖೆಯ ಆದಾಯಕ್ಕೆ ಕತ್ತರಿ ಬೀಳುತ್ತದೆ. ಲೇಬಲ್ ರಹಿತ ಹಾಗೂ ಸೀಲ್ ಇಲ್ಲದ ನೀರಿನ ಬಾಟಲಿಗಳ ಮಾರಾಟದಿಂದ ಪ್ರಯಾಣಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ~ ಎಂದು ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.ರೈಲುಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಹಾಗೂ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮೂಲಕ ಪ್ರಯಾಣಿಕರಿಗೆ ಪ್ಯಾಕೇಜ್ಡ್ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ನಂಗೋಲಿ ಮತ್ತು ದಾನಪುರದಲ್ಲಿ ಎರಡು ಘಟಕಗಳನ್ನು ಸ್ಥಾಪಿಸಿದೆ.ಈ ನಡುವೆ, ರೈಲ್ವೆ ಇಲಾಖೆ ಇಂಥದ್ದೇ ಆರು ಯೋಜನೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ. ರೈಲ್ವೆ ಇಲಾಖೆಯ ಈ ಕ್ರಮವನ್ನು ಶ್ಲಾಘಿಸಿರುವ ಸಂಸದೀಯ ಸಮಿತಿ, ಈ ಯೋಜನೆಗಳು ಶೀಘ್ರ ಜಾರಿಗೆ ತರಲು ಸಲಹೆ ನೀಡಿದೆ.ರೈಲ್ವೆ ನಿಲ್ದಾಣಗಳಲ್ಲಿರುವ ಮಾರುಕಟ್ಟೆಗಳಿಗೆ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಲೇಬಲ್ ರಹಿತ ನೀರಿನ ಬಾಟಲಿಗಳ ಮಾರಾಟ ಕುರಿತು ಪರೀಕ್ಷಿಸುತ್ತಿರಬೇಕು. ಪ್ರತಿ ರೈಲ್ವೆ ನಿಲ್ದಾಣದಲ್ಲಿ ರಿವರ್ಸ್ ಆಸ್ಮೋಸಿಸ್ (ಆರ್‌ಒ) ವಿಧಾನದಲ್ಲಿ  ನೀರು ಶುದ್ಧೀಕರಿಸುವ ಯಂತ್ರಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry