ರೈಲ್ವೆ ಸಮೀಕ್ಷೆ: ಸಿ.ಎಂಗೆ ಸಚಿವ ಮೊಯಿಲಿ ಪತ್ರ

7

ರೈಲ್ವೆ ಸಮೀಕ್ಷೆ: ಸಿ.ಎಂಗೆ ಸಚಿವ ಮೊಯಿಲಿ ಪತ್ರ

Published:
Updated:

ಬೆಂಗಳೂರು: ಪಡುಬಿದ್ರಿ- ನೆಟ್ಟಣ ಜಂಕ್ಷನ್ ಮತ್ತು ಬೈಂದೂರು-ಧರ್ಮಸ್ಥಳ ರೈಲು ಮಾರ್ಗಗಳ ಪ್ರಾಥಮಿಕ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆಗೆ ರಾಜ್ಯ ಅರಣ್ಯ ಇಲಾಖೆಯಿಂದ ಶೀಘ್ರದಲ್ಲಿ ಒಪ್ಪಿಗೆ ನೀಡುವಂತೆ ಕೋರಿ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಪತ್ರ ಬರೆದಿದ್ದಾರೆ.

`ಎರಡೂ ಮಾರ್ಗಗಳಲ್ಲಿ ಹೊಸದಾಗಿ ರೈಲ್ವೆ ಸಂಚಾರ ಆರಂಭಿಸುವ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಪ್ರಸಕ್ತ ವರ್ಷದ ರೈಲ್ವೆ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಸಚಿವರು ಮಂಗಳವಾರ ದೆಹಲಿಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಸಮೀಕ್ಷೆಗೆ ರಾಜ್ಯ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂಬ ವಿಷಯ ಸಭೆಯಲ್ಲಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಚಿವರು ಆದಷ್ಟು ಬೇಗ ಅನುಮತಿ ನೀಡುವಂತೆ ಕೋರಿದ್ದಾರೆ~ ಎಂದು ಮೊಯಿಲಿ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಪಡುಬಿದ್ರಿ- ಕಾರ್ಕಳ- ಉಜಿರೆ- ನೆಟ್ಟಣ ಜಂಕ್ಷನ್ (120 ಕಿ.ಮೀ) ಮತ್ತು ಬೈಂದೂರು- ಕೊಲ್ಲೂರು- ವೇಣೂರು- ಧರ್ಮಸ್ಥಳ (60 ಕಿ.ಮೀ) ಮಾರ್ಗಗಳಲ್ಲಿ ರೈಲು ಸಂಚಾರ ಆರಂಭಿಸುವ ಕುರಿತು ಸಾಧ್ಯತಾ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಸಂಬಂಧ ಮೊಯಿಲಿ ಅವರು ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ರೈಲ್ವೆ ಮಂಡಳಿಯ ಸದಸ್ಯ ಎ.ಪಿ.ಮಿಶ್ರಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry