ಮಂಗಳವಾರ, ಜನವರಿ 21, 2020
29 °C

ರೈ ಎಂಬ ಬಾಣಸಿಗನೂ ಒಗ್ಗರಣೆಯೂ...

–ಲಕ್ಷ್ಮಣ ಟಿ. ನಾಯ್ಕ Updated:

ಅಕ್ಷರ ಗಾತ್ರ : | |

ರೈ ಎಂಬ ಬಾಣಸಿಗನೂ ಒಗ್ಗರಣೆಯೂ...

ಪ್ರಕಾಶ್ ರೈ ಒಳ್ಳೆಯ ಮೂಡ್‌ನಲ್ಲಿದ್ದರು. ಅವರ ನಿರ್ದೇಶನದ ಎರಡನೇ ಸಿನಿಮಾ ‘ಒಗ್ಗರಣೆ’ಯ ಮುಕ್ತಾಯ ಹಂತದ ಚಿತ್ರೀಕರಣ  ಮೈಸೂರಿನ ಮಾನಸಗಂಗೋತ್ರಿಯ ಪರಿಸರದಲ್ಲಿ ನಡೆಯುತ್ತಿತ್ತು. ಚಿತ್ರೀಕರಣದಲ್ಲಿ ನೂರಾರು ಮಕ್ಕಳು  ಭಾಗವಹಿಸಿದ್ದರು. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ರೂಪುಗೊಳ್ಳುತ್ತಿದ್ದ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಅವರು ಮೈಸೂರನ್ನು ಆಯ್ದುಕೊಂಡಿದ್ದರು.ಕಥೆಯ ಕುರಿತು ಅವರು ಗುಟ್ಟು ಮಾಡಲಿಲ್ಲ. ‘ಇದು ಮಧ್ಯವಯಸ್ಕರಿಬ್ಬರ ಪ್ರೇಮಕಥೆ. ಈ ಕಥೆಯೊಂದಿಗೆ ಇಬ್ಬರು ತರುಣ ಪ್ರೇಮಿಗಳೂ ಚಿತ್ರದಲ್ಲಿ ಇರಲಿದೆ. ಇಲ್ಲಿ ನೋವು, ನಲಿವು, ಸೌಂದರ್ಯ, ರುಚಿ, ಘಾಟು, ಸುವಾಸನೆ ಎಲ್ಲವೂ ಇದೆ’ ಎಂದು ಒಗ್ಗರಣೆ ಕಥನವನ್ನು ಬಣ್ಣಿಸಿದರು.'ಒಗ್ಗರಣೆ ಮೂರು ಭಾಷೆಯಲ್ಲಿ ತಯಾರಾದರೂ ಅದರ ಭಾವ ಒಂದೇ. ಮಸಾಲೆ ಮಾತ್ರ ಬೇರೆ ಬೇರೆ. ಮೈಸೂರಿನ ರುಚಿಗೂ ತಮಿಳು ರುಚಿಗೂ ಹಾಗೂ ತೆಲುಗು ಒಗ್ಗರಣೆಯ ರುಚಿಯೂ ಬೇರೆ, ಬೇರೆ. ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೇನೆ. ಎಲ್ಲರೂ ಎಲ್ಲವನ್ನೂ ಒಳಗೊಂಡ ಸೌಂದರ್ಯ ಮೀಮಾಂಸೆ ಇದು’ ಎಂದು ಹೇಳಿದರು.ಇಲ್ಲಿ ಸೌಂದರ್ಯ ಹಾಗೂ ವಿದಾಯದ ಸಮ್ಮಿಳಿತವಿದೆ. ಬದುಕಿನ ಏರಿಳಿತಗಳ ಹೊಸ ಸಾಧ್ಯತೆಗಳನ್ನು ಬಿಚ್ಚಿಡಲಾಗಿದೆ. ಮಧ್ಯವಯಸ್ಸಿನ ಎರಡು ಜೀವಗಳ ಹಸಿವು ಮತ್ತು ಪ್ರೀತಿಗೆ ಒತ್ತು ನೀಡಲಾಗಿದೆ. ಒಂದು ರೀತಿಯಲ್ಲಿ ಉಸಿರು ಬಿಗಿ ಹಿಡಿದು ಜೀವ ಉಳಿಸಿಕೊಳ್ಳುವ ಪರಿ ಎನ್ನುತ್ತಲೇ ನಕ್ಕರು ರೈ. ‘ಒಂದು ರೀತಿಯಲ್ಲಿ ಇದು ಕನ್ನಡದ್ದೇ ಕಥೆ. ನಾನು ಇಷ್ಟಪಟ್ಟು ಮಾಡುತ್ತಿರುವ ನೆಚ್ಚಿನ ಹಾಗೂ ಪ್ರೀತಿಯ ಕಥೆ’ ಎಂದೂ ಹೇಳಿದರು.ಅಂದಹಾಗೆ, ಏಪ್ರಿಲ್‌ನಲ್ಲಿ ‘ಒಗ್ಗರಣೆ’ ತೆರೆಕಾಣಲಿದೆ. ಅದಾದ ನಂತರ ಹಿಂದಿಯಲ್ಲೂ ‘ಒಗ್ಗರಣೆ’ ಘಂ ಎನ್ನಲಿದೆ. ‘ಇಡೀ ದೇಶಕ್ಕೆ ಸಲ್ಲುವ ಒಗ್ಗರಣೆ ಹಾಕಬೇಕು’ ಎಂದರು ರೈ.ಇಳಯರಾಜಾರ ಸಂಗೀತ ‘ಒಗ್ಗರಣೆ’ಯ ಘಮವನ್ನು ಇಮ್ಮಡಿಗೊಳಿಸಲಿದೆ ಎಂದ ಅವರು, ಜಯಂತ ಕಾಯ್ಕಿಣಿ ಇಡೀ ರಾಜ್ಯದ ಸುವಾಸನೆ ಇಟ್ಟುಕೊಂಡೇ ಅತ್ಯುತ್ತಮ ಗೀತೆಗಳನ್ನು ಹಾಡು ಬರೆದಿದ್ದಾರೆ. ಆ ಹಾಡು ನನ್ನನ್ನು ಮೈಸೂರಿಗೆ ಎಳೆದುತಂದಿದೆ ಎಂದು ಮೈಸೂರಿಗೆ ಬಂದ ಗುಟ್ಟು ರಟ್ಟು ಮಾಡಿದರು.ಮದುವೆ ನಂತರ ಬಣ್ಣ ಹಚ್ಚಿರುವ ನಟಿ ಸ್ನೇಹಾ ‘ನಾನು ನಿರ್ದೇಶಕರ ನಟಿ. ರೈ ಅವರ ನಟಿ. ಪಾತ್ರ ಭಿನ್ನವಾಗಿದೆ. ಈಚೆಗಿನ ದಿನಗಳಲ್ಲಿ ನಾನು ಇಷ್ಟಪಟ್ಟ ಕಥೆ’ ಎಂದು ಮಾತು ಮೊಟಕುಗೊಳಿಸಿದರು.ಕನ್ನಡದ ಒಗ್ಗರಣೆಯಲ್ಲಿ ಸುಧಾ ಬೆಳವಾಡಿ ಮಗಳು ಸಂಯುಕ್ತ ಬೆಳವಾಡಿ ಇದ್ದಾರೆ. ಅವರಿಗೆ ಜೋಡಿಯಾಗಿ ತಮಿಳಿನ ತೇಜಸ್‌ ಇದ್ದಾರೆ. ರೈ ಪತ್ನಿ ಪೋನಿ ವರ್ಮಾ ಈ ಚಿತ್ರದ ನೃತ್ಯ ನಿರ್ದೇಶಕಿ.

ಪ್ರತಿಕ್ರಿಯಿಸಿ (+)