`ರೊಕ್ಕ ಬರತೈತಿ ಅಂತ ಆರಾಮಾಗಿ ಕೂತ್ಕೋರಿ'

7

`ರೊಕ್ಕ ಬರತೈತಿ ಅಂತ ಆರಾಮಾಗಿ ಕೂತ್ಕೋರಿ'

Published:
Updated:

ಗದಗ: ರೊಕ್ಕ ಬರತೈತಿ ಅಂಥ ಆರಾಮವಾಗಿ ಕುಳಿತುಕೊಳ್ರಿ, ಹೇಳೊರ್ ಕೇಳೊರ್ ಯಾರೂ ಇಲ್ಲ. ಕಾಮಗಾರಿ ಪೂರ್ಣಗೊಳಿಸದಿದ್ರು ಕೆಲಸ ಯಾಕ್ ಕೊಡಬೇಕು...ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಂ.ಎಸ್.ಪಾಟೀಲ ಅವರು ಭೂ ಸೇನಾ ನಿಗಮದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದು ಹೀಗೆ.ಜಾಗದ ಕೊರತೆಯಿಂದ ಅಂಗವಾಡಿ ಕಟ್ಟಡಗಳ ನಿರ್ಮಾಣ ವಿಳಂಬವಾಗಿದೆ ಎಂದು ಭೂ ಸೇನಾ ನಿಗಮದ ಅಧಿಕಾರಿ ಸಭೆಗೆ ತಿಳಿಸಿದರು. ಅಧಿಕಾರಿಯ ಉತ್ತರಕ್ಕೆ ತೃಪ್ತರಾಗದ ಅಧ್ಯಕ್ಷರು, ಇದುವರೆಗೂ ಪ್ರಗತಿ ವರದಿಯನ್ನು ಸಭೆಗೆ ನೀಡಿಲ್ಲ. ವರದಿ ತರದೆ ಸಭೆಗೆ ಬರಬೇಡಿ. ನಿಮಗೆ ಕೆಲಸದ ಮೇಲೆ ಆಸಕ್ತಿಯೂ ಇಲ್ಲ. ಹಳ್ಳಿಗಳಲ್ಲಿ ಜಾಗ ಕೊಡದ ಹಾಗೆ ಸನ್ನಿವೇಶ ಸೃಷ್ಟಿಸುತ್ತೀರಾ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಪೂರ್ಣಗೊಂಡಿರುವ ಕಾಮಗಾರಿಗೂ ಹಣ ಬಿಡುಗಡೆ ಮಾಡಲಾಗಿದೆ. ರೊಕ್ಕ ಬರತೈತಿ ಅಂಥ ಆರಾಮವಾಗಿ ಇರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಲಸ ಮಾಡದ ಮೇಲೆ ಹಣ ಯಾಕೆ ಬಿಡುಗಡೆ ಮಾಡಬೇಕು.  ಮೂರನೇ ಏಜೆನ್ಸಿಯಿಂದ ಕಾಮಗಾರಿಗಳ ಪರಿಶೀಲನೆ ಮಾಡಿಸಿ. ಈಗಾಗಲೇ ಬಿಡುಗಡೆ ಮಾಡಿರುವ ಹಣವನ್ನು ಭೂ ಸೇನಾ ನಿಗಮದಿಂದ ವಾಪಸ್ ಪಡೆಯುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಧ್ಯಕ್ಷರು ಸೂಚನೆ ನೀಡಿದರು.ಅಂಗನವಾಡಿ ಕಟ್ಟಡಗಳಿಗೆ ಜಾಗ ಕೊಡಿಸುವ ಜವಾಬ್ದಾರಿ ನಿಮ್ಮದು. ಜಾಗ ಕೊಟ್ಟರೆ ಭೂ ಸೇನಾ ನಿಗಮದವರು ಕೆಲಸ ಆರಂಭಿಸುತ್ತಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ  ಇಲಾಖೆ ಅಧಿಕಾರಿಗೆ ಸಿಇಒ ಸೂಚಿಸಿದರು.

ಸರ್ಕಾರದ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇ. 3 ಮೀಸಲಾತಿ ನೀಡಬೇಕು ಎಂಬ ಆದೇಶ ಇದೆ. ಇದನ್ನು ಎಲ್ಲ ಇಲಾಖೆಯವರು ಪಾಲಿಸಬೇಕು. ಅಂಗವಿಕಲರಿಗೆ ಮೀಸಲಾದ ಯೋಜನೆ ಅವರಿಗೆ ತಲುಪಬೇಕು. ಅಂಗವಿಕಲರ ಸಭೆ ನಡೆಸಿ ಕುಂದು-ಕೊರತೆ ಆಲಿಸುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮೂಲಿಮನಿ ಅವರಿಗೆ ಸಿಒಇ ಸಲಹೆ ನೀಡಿದರು.ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಗೆ ವಿದೇಶಿ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಕೆರೆಯನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕು. ಕೆರೆಗೆ ಹೋಗಲು ಸೂಕ್ತ ರಸ್ತೆಯಿಲ್ಲ. ರೈತರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ ಎಂದು ಸದಸ್ಯ ಎಂ.ಎಸ್. ದೊಡ್ಡಗೌಡ್ರ ಅಧ್ಯಕ್ಷರ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಅರಣ್ಯಾಧಿಕಾರಿ ಚಂದ್ರಣ್ಣ, ಕೆಲ ದಿನಗಳ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಗಡಿ ಕೆರೆಗೆ ಭೇಟಿ ನೀಡಿ ಹೋಗಿದ್ದಾರೆ. ಪಕ್ಷಿಗಳು ವಲಸೆ ಹೋದ ಬಳಿಕ ಅಂದರೆ ಫೆಬ್ರುವರಿಯಲ್ಲಿ ಸಮೀಕ್ಷೆ ಕೈಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸರ್ವೆಯರ್‌ಗಳ ನೆರವಿನಿಂದ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಹೇಳಿದರು.2012-13ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ 2217 ಮಕ್ಕಳನ್ನು ಗುರುತಿಸಲಾಗಿದೆ.  ಅವರಿಗೆ ಮೂರು ತಿಂಗಳ ವಿಶೇಷ ತರಬೇತಿ ವಸತಿಸಹಿತ ನೀಡಲಾಗುತ್ತಿದೆ ಎಂದು ಡಿಡಿಪಿಐ ರಾಜೀವ ನಾಯಕ ಸಭೆಯ ಗಮನಕ್ಕೆ ತಂದರು.ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆ ತರಬೇಕು ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಸೂಚಿಸಲಾಯಿತು. ಹಾಗೆಯೇ ಸರ್ವ ಶಿಕ್ಷಣ ಅಭಿಯಾನದ ರೂ. 40 ಕೋಟಿ ವರದಿಯನ್ನು ಸಭೆಗೆ ನೀಡುವಂತೆಯೂ ಅಧ್ಯಕ್ಷರು ತಿಳಿಸಿದರು.ಕೆಡಿಪಿ ಸಭೆಗೆ ಹಾಜರಾಗದೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿರುವ ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷ ಪಾಟೀಲ ಅವರು ಸಿಇಒಗೆ ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷ ರಮೇಶ ಮುಂದಿನಮನಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೈ ಬೀಸ್ಕೊಂಡು ಬರೋದಲ್ಲ

ಗದಗ: ಕೈ ಬೀಸ್‌ಕೊಂಡು ಬರೋದಲ್ಲ. ಇದು ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ಎಂಬುದು ಗೊತ್ತಿರಬೇಕು...

ಸಭೆಗೆ ಪ್ರಗತಿ ವರದಿ ನೀಡದ ವಿವಿಧ ಇಲಾಖೆ ಅಧಿಕಾರಿಗಳನ್ನು ಸಿಇಒ ತರಾಟೆಗೆ ತೆಗೆದುಕೊಂಡರು.

4-5 ದಿನ ಮೊದಲು ವರದಿಯನ್ನು ನೀಡಬೇಕು. ನಮಗೆ ನೀಡಿರುವ ವರದಿಯ ಬಗ್ಗೆಯೇ ಮಾಹಿತಿ ನೀಡಬೇಕು. ಅದು ಬಿಟ್ಟು ನಮಗೊಂದು ವರದಿ ನೀಡಿ ನೀವೊಂದು ವರದಿ ಓದುವುದರಲ್ಲಿ ಅರ್ಥವಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry