ರೊಟ್ಟಿ ಜಾತ್ರೆ

7

ರೊಟ್ಟಿ ಜಾತ್ರೆ

Published:
Updated:

ಗದಗ ಸಮೀಪದ ಡಂಬಳದಲ್ಲಿ ಪ್ರತಿ ವರ್ಷ ನಡೆಯುವ ತೋಂಟದಾರ್ಯ ಜಾತ್ರಾ ಮಹೋತ್ಸವ ಜನರ ಬಾಯಲ್ಲಿ ‘ರೊಟ್ಟಿ ಜಾತ್ರೆ’ ಎಂದೇ ಪ್ರಖ್ಯಾತಿ ಪಡೆದಿದೆ. ಇದು ಮನರಂಜನೆ, ಬೆಂಡು-ಬತ್ತಾಸುಗಳ ಮಾರಾಟದ ಸಾಮಾನ್ಯ ಜಾತ್ರೆಯಾಗದೆ ಕೋಮು ಸೌಹಾರ್ದ ಬೆಳೆಸುವ ದೊಡ್ಡ ಜಾತ್ರೆಯಾಗಿದೆ.ರೊಟ್ಟಿ ಜಾತ್ರೆ ಕೇವಲ ಒಂದು ವರ್ಗ, ಸಮುದಾಯಕ್ಕೆ ಸೀಮಿತವಾಗಿಲ್ಲ. ತೋಂಟದಾರ್ಯ ಮಠದ ನೇತೃತ್ವದಲ್ಲಿ ಇಡೀ ಊರು ನಿಂತು ಜಾತ್ರೆ ಮಾಡುತ್ತದೆ. ಅಷ್ಟೆ ಅಲ್ಲ ಅಕ್ಕಪಕ್ಕದ ಊರು-ತಾಂಡಾಗಳ ಜನರಿಗೆ ಅದು ನಮ್ಮ ಜಾತ್ರೆ ಎಂಬ ಅಭಿಮಾನವಿದೆ.ಖಡಕ್ ರೊಟ್ಟಿ, ಕರಿಂಡಿ, ತರಕಾರಿ ಭಜ್ಜಿ, ಅಗಸಿ ಚಟ್ನಿ- ಮೊಸರು, ಬಾನ, ಗೋಧಿ ಹುಗ್ಗಿ ಇತ್ಯಾದಿ ದೇಸಿ ಭಕ್ಷ್ಯಗಳು ಜಾತ್ರೆಯ ವಿಶೇಷಗಳು. ಡಂಬಳ ಸುತ್ತಮುತ್ತಲಿನ ಹತ್ತೂರುಗಳಲ್ಲಿ ಅಂದು ಸಂಜೆಯ ಒಲೆ ಹತ್ತುವುದಿಲ್ಲ. ಎಲ್ಲರೂ ಜಾತ್ರೆಗೆ ಹಾಜರ್. ಜಾತಿ ಬೇಧ ಮರೆತು ಒಟ್ಟಾಗಿ ಕುಳಿತು ರೊಟ್ಟಿ ಊಟ ಮಾಡುತ್ತಾರೆ.ಮನೆ- ಮನೆಗಳಲ್ಲಿ ಮಾಡಿದ ರೊಟ್ಟಿಗೆ ವಿವಿಧ ತರಕಾರಿಗಳು, ಸೊಪ್ಪು ಮಿಶ್ರಿತ ಪಲ್ಯ ಜೋಡಿಯಾದರೆ, ಸೌತೆಕಾಯಿ, ಗಜ್ಜರಿಯಿಂದ ತಯಾರಾದ ಕರಿಂಡಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಅಕ್ಕಿಯಿಂದ ಸಿದ್ಧವಾಗುವ ಬಾನ, ಗೋಧಿ ಹುಗ್ಗಿಯ ಘಮ- ಘಮ ಇಡೀ ಊರ ತುಂಬ ಪಸರಿಸುತ್ತದೆ. ರೊಟ್ಟಿ ಜಾತ್ರೆಗೆ ಬೇಕಾಗುವ ಸಾವಿರಾರು ರೊಟ್ಟಿಗಳನ್ನು ಊರಿನ ಜನರು, ಭಕ್ತರು, ಅಭಿಮಾನಿಗಳು ಮಾಡಿಕೊಂಡು ಡಂಬಳ ಮಠಕ್ಕೆ ತಂದು ಕೊಡುತ್ತಾರೆ. ಅಕ್ಕ-ಪಕ್ಕದ ತಾಂಡಾಗಳ ಜನರು ಚಕ್ಕಡಿಗಳಲ್ಲಿ ರೊಟ್ಟಿಯನ್ನು ತುಂಬಿಕೊಂಡು ಬರುತ್ತಾರೆ.ಸುಮಾರು ಮೂರೂವರೆ ದಶಕಗಳಿಂದ ಜಾತ್ರೆ ನಡೆಯುತ್ತಿದೆ. ಜಾತ್ರೆಗೆ ಹದಿನೈದು ದಿನಗಳು ಇರುವಾಗಲೇ ಶ್ರೀ ಮಠದಿಂದ ಜೋಳದ ಹಿಟ್ಟು ಪ್ರತಿ ಮನೆಗೂ ಹೋಗುತ್ತದೆ. ಪ್ರಾರಂಭದಲ್ಲಿ ಕೇವಲ ಎರಡು- ಮೂರು ಚೀಲ ಜೋಳದ ಹಿಟ್ಟಿನಲ್ಲಿ ರೊಟ್ಟಿ ಮಾಡಲಾಗುತ್ತಿತ್ತು. ಈಗಂತೂ ಹತ್ತು ಪಟ್ಟು ಹೆಚ್ಚಿದೆ. ಅಲ್ಲದೇ ರೊಟ್ಟಿ ಸಿದ್ಧಪಡಿಸಲು ಮಠದಿಂದ ಹಿಟ್ಟು ಪಡೆಯುವ ಜನರು ತಾವೂ ಒಂದಷ್ಟು ಹಿಟ್ಟನ್ನು ಸೇರಿಸಿ ರೊಟ್ಟಿ ಮಾಡುತ್ತಾರೆ. ತನ್ಮೂಲಕ ಭಕ್ತಿಯನ್ನು ಸಮರ್ಪಿಸುತ್ತಾರೆ.ರೊಟ್ಟಿ ಜಾತೆಗ್ರೆ ಮುನ್ನ ಮೊದಲ ದಿನ ನಡೆಯುವ ತೋಂಟದಾರ್ಯ ರಥೋತ್ಸವವೂ ವೈಶಿಷ್ಟ್ಯದಿಂದ ಕೂಡಿದೆ. ತೇರಿನ ಮುಂದೆ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ನಡೆಯುತ್ತ ಸಾಗಿದರೆ, ಅವರ ಜೊತೆಯಲ್ಲಿಯೇ ‘ಷಟ್‌ಸ್ಥಲ ಜ್ಞಾನ ಸಾರಾಮೃತ’ ವಚನಗಳ ತಾಳೆಗರಿಗಳ ಸಂಪುಟಗಳ ಮೆರವಣಿಗೆ ನಡೆಯುತ್ತದೆ.

 

ರೊಟ್ಟಿ ಜಾತ್ರೆಯಾದ ಮಾರನೆಯ ದಿನ ಶ್ರೀ ಮಠದ ಪಕ್ಕದಲ್ಲಿ ಇರುವ ಜಮಾಲ್ ಷಾ ವಲಿ ದರ್ಗಾದಲ್ಲಿ ಉರುಸ್ ಆಚರಣೆ. ಇಲ್ಲಿಗೆ ಶ್ರೀಮಠದಿಂದಲೇ ನೈವೇದ್ಯ ಹೋಗುತ್ತದೆ. ಅಲ್ಲದೆ ಜಾತ್ರೆಗಾಗಿ ಶ್ರೀಮಠಕ್ಕೆ ಸುಣ್ಣ- ಬಣ್ಣ ಬಳಿಯುವ ಸಮಯದಲ್ಲಿಯೇ ದರ್ಗಾಕ್ಕೂ ಅಲಂಕಾರ ಮಾಡಲಾಗುತ್ತದೆ. ಉರುಸ್ ದಿನ ಊರಿನ ರೈತಾಪಿ ಜನರೆಲ್ಲ ತಮ್ಮ ಜಾನುವಾರುಗಳನ್ನು ಹೊಡೆದುಕೊಂಡು ಬಂದು ದರ್ಗಾದ ಸುತ್ತ ಪ್ರದಕ್ಷಿಣೆ ಹಾಕಿಸುತ್ತಾರೆ.ಫೆ.18ರ ಶುಕ್ರವಾರ ತೋಂಟದಾರ್ಯರ ರಥೋತ್ಸವ ನಡೆಯುತ್ತದೆ. ಫೆ.19ರಂದು ಲಘು ರಥೋತ್ಸವ ಹಾಗೂ ರೊಟ್ಟಿ ಜಾತ್ರೆ.  ಆಧುನಿಕತೆ ಹೆಸರಿನಲ್ಲಿ ಜನರು ಜಾತ್ರೆ, ಸಂಪ್ರದಾಯ ಇತ್ಯಾದಿಗಳನ್ನು ಮರೆಯುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಆದರೆ ಕೋಮು ಸಾಮರಸ್ಯವನ್ನೇ ಆಚಾರವಾಗಿಸಿಕೊಂಡಿರುವ ರೊಟ್ಟಿ ಜಾತ್ರೆ ಕರ್ನಾಟಕದ ವಿಶೇಷ ಜಾತ್ರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry